ಚಿಕ್ಕೋಡಿ: ಕೆ-ಶಿಪ್‌ದಿಂದ ನಿರ್ಮಾಣವಾದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿ ರಸ್ತೆಯ ಬಳಕೆದಾರರಿಗೆ ಮುಕ್ತವಾಗುತ್ತಿದ್ದು, ಪ್ರಯಾಣಿಕರು ಆಗಸ್ಟ್ 15ರಿಂದ ಟೋಲ್ ಶುಲ್ಕ ಪಾವತಿಸಿ ಸಂಚಾರ ಮಾಡಬೇಕಾಗಿದೆ.
ನಿಪ್ಪಾಣಿ-ಮುಧೋಳ 109 ಕಿಮೀ ರಾಜ್ಯ ಹೆದ್ದಾರಿಯು ದ್ವಿಪಥ ರಸ್ತೆಯಾಗಿ ನಿರ್ಮಾಣವಾಗಿದೆ. ಪ್ರಯಾಣಿಕರಿಗೆ ಉತ್ತಮ ರಸ್ತೆಗಳು ಬೇಕು ಎಂದಾಗ ಬಳಕೆದಾರರು ಶುಲ್ಕ ಕಟ್ಟಿ ರಸ್ತೆಯಲ್ಲಿ ಸಂಚಾರ ಮಾಡುವುದು ಅನಿವಾರ್ಯ ಎನ್ನುವಂತಾಗಿದೆ. ಹೆದ್ದಾರಿಯ ಎರಡು ಕಡೆಗಳಲ್ಲಿ ಟೋಲ್ಗೇಟ್ ಕಾಮಗಾರಿ ಈಗಾಗಲೇ ಭರದಿಂದ ನಡೆದಿದೆ.
ಎರಡು ಕಡೆ ಟೋಲ್ಗೇಟ್: ಹೆದ್ದಾರಿಯ ಚಿಂಚಣಿ ಮತ್ತು ಕಬ್ಬೂರ ಹತ್ತಿರ ಎರಡು ಕಡೆಗಳಲ್ಲಿ ಟೋಲ್ ಗೇಟ್ ಕಾಮಗಾರಿ ಆರಂಭವಾಗಿದೆ. ನಿಪ್ಪಾಣಿ ಕಡೆಯಿಂದ ಮುಧೋಳ ಕಡೆಗೆ ಸಂಚಾರ ಮಾಡುವ ವಾಹನ ಸವಾರರು ಚಿಂಚಣಿ ಬಳಿ ಟೋಲ್ ಶುಲ್ಕ ಪಾವತಿಸಿ ಅಲ್ಲಿಂದ ಕಬ್ಬೂರ ಹತ್ತಿರ ಟೋಲ್ ಶುಲ್ಕ ಪಾವತಿಸಿ ಪ್ರಯಾಣಿಸಬಹುದಾಗಿದೆ. ಮುಧೋಳ ಕಡೆಯಿಂದ ನಿಪ್ಪಾಣಿ ಕಡೆಗೆ ಬರುವ ವಾಹನ ಸವಾರರು ಕಬ್ಬೂರ ಟೋಲ್ಗೇಟ್ ಹಾಗೂ ಚಿಂಚಣಿ ಟೋಲ್ ಗೇಟ್ ಬಳಿ ಟೋಲ್ ಶುಲ್ಕ ಪಾವತಿಸಬಹುದಾಗಿದೆ.
ಕೆ-ಶಿಪ್ ಹಾಗೂ ಕೆಆರ್‌ಡಿಸಿಎಲ್ ಸಂಸ್ಥೆಯು ವಿಶ್ವಬ್ಯಾಂಕ್ ಹಾಗೂ ಎಡಿಬಿಯಿಂದ ಸಾಲ ಪಡೆದು ರಾಜ್ಯದ ವಿವಿಧ ಕಡೆಗಳಲ್ಲಿ 3800 ಕಿ.ಮೀ ರಸ್ತೆ ನಿರ್ಮಿಸಿದೆ. ಈ ಎಲ್ಲ ರಸ್ತೆಗಳಿಗೆ ಟೋಲ್ ಸಂಗ್ರಹ ಮಾಡಲು ರಾಜ್ಯ ಸರ್ಕಾರ 2015ರಲ್ಲಿ ಟೋಲ್ ಸಂಗ್ರಹ ನಿಯಮಾವಳಿ ರಚನೆ ಮಾಡಿದೆ. ಹೀಗಾಗಿ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದಿಂದ ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಮೇಲೆ ಟೋಲ್ಗೇಟ್ ಕಾಮಗಾರಿ ಆರಂಭಿಸಿದೆ. 2017ರಲ್ಲಿ ಟೋಲ್ ಸಂಗ್ರಹಕ್ಕೆ ಟೆಂಡರ್ ಕರೆದಿದ್ದು, ವಿನಯಾ ಲಾಡ್ ಎಂಟರಪ್ರೖಸಿಸ್ ಸಂಸ್ಥೆಯು ಟೋಲ್ ಸಂಗ್ರಹ ಮಾಡಲು ಟೆಂಡರ್ ಪಡೆದುಕೊಂಡಿದೆ.
ಈಗಾಗಲೇ ಟೋಲ್ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಂಡಿರುವ ರಾಜ್ಯ ಸರ್ಕಾರ ಯಾವ ವಾಹನಗಳಿಗೆ ಎಷ್ಟೆಷ್ಟು ಹಣ ಪಾವತಿಸಬೇಕೆಂಬುದನ್ನು ದರ ದೃಢಪಡಿಸಿಲ್ಲ, ಆಗಸ್ಟ್ ಮೊದಲ ವಾರದಲ್ಲಿ ನಾಮಫಲಕದ ಮೂಲಕ ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಜನರಿಗೆ ಮಾಹಿತಿ ಪ್ರದರ್ಶಿಸಲಿದೆ.
ಸ್ಥಳೀಯರಿಗೆ ರಿಯಾಯತಿ ಪಾಸ್: ರಾಜ್ಯ ಹೆದ್ದಾರಿ ಮೇಲೆ ಟೋಲ್ ಕಟ್ಟಿ ಪ್ರಯಾಣ ಮಾಡುವ ವಾಹನ ಸವಾರರಿಗೆ ದೊಡ್ಡ ತಲೆನೋವಾಗಿದೆ. ಈಗಾಗಲೇ ಜಿಲ್ಲಾ ಸ್ಥಾನಮಾನ ಹೊಂದಿರುವ ಚಿಕ್ಕೋಡಿ ನಗರದ ವಾಹನ ಸವಾರರು ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ನಿಪ್ಪಾಣಿ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಇದರಿಂದ ಟೋಲ್ಶುಲ್ಕ್ ಹೊರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ, ಇದರಿಂದ ಸ್ವಂತ ವಾಹನ ಹೊಂದಿರುವ ಮಾಲೀಕರಿಗೆ ಸರ್ಕಾರ ರಿಯಾಯಿತಿ ಪಾಸ್ ನೀಡುವ ವ್ಯವಸ್ಥೆ ಮಾಡಿಕೊಡಬಹುದು ಎನ್ನುತ್ತಾರೆ ಕೆಆರ್‌ಡಿಸಿಎಲ್ ಅಧಿಕಾರಿಗಳು.