Advertisement

ಮಾವು ಮಾರುಕಟ್ಟೆಗೆ ತಟ್ಟದ ನಿಪ ಕಾವು

04:30 PM May 26, 2018 | |

ವಿಜಯಪುರ: ರಾಜ್ಯದ ಎಲ್ಲೆಡೆ ಇದೀಗ ನಿಪ ರೋಗದ ಸುದ್ದಿ ಸದ್ದು ಮಾಡುತ್ತಿದ್ದು ಮಾವಿನ ಮಾರುಕಟ್ಟೆ ಮೇಲೆ ನೇರ ಪರಿಣಾಮ ಬೀರಿದೆ. ಆದರೆ ಆದಿಲ್‌ ಶಾಹಿ ನಾಡಿನ ವಿಜಯಪುರ ಜಿಲ್ಲೆಯ ಹಣ್ಣಿನ ರಾಜನ ದರ್ಬಾರ್‌ ಮೇಲೆ ಮಾತ್ರ ಯಾವ ಪರಿಣಾಮವೂ ಆಗಿಲ್ಲ.

Advertisement

ವಿಜಯಪುರದಲ್ಲಿ ಸಿದ್ದೇಶ್ವರ ದೇವಸ್ಥಾನದ ಬಳಿ ಮಾವಿಗಾಗಿಯೇ ಪ್ರತ್ಯೇಕ ಮಾರುಕಟ್ಟೆ ಇದ್ದು, ಮಾವಿನ ವಿವಿಧ ತಳಿಯ ಹಣ್ಣಿನ ರಾಸಿಗಳು ಕಂಡು ಬರುತ್ತವೆ. ರಸಪುರಿ, ಮಲ್ಲಿಕಾ, ಆಫೂಸ್‌ ನೀಲಂ, ಮಲಗೋಬಾ, ಬೇನೀಸ್‌, ಅಲೊಧೀನ್ಸಾ, ಕೇಸರ್‌, ಲಾಂಗ್ರಾ ಹೀಗೆ ಹಲವು ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. ಕರ್ನಾಟಕದ ಕೋಲಾರ ಜಿಲ್ಲೆ, ಬೆಂಗಳೂರು, ಮಹಾರಾಷ್ಟ್ರದ ರತ್ನಗಿರಿ, ಆಂಧ್ರಪ್ರದೇಶ ಹೈದ್ರಾಬಾದ್‌, ಸೀಮಾಂಧ್ರದ ರಾಜಮಂಡ್ರಿ ಪ್ರದೇಶದಿಂದ ಮಾವು ಮಾರುಕಟ್ಟೆಗೆ ಬರುತ್ತಿದೆ. ಕಳೆದ ನಾಲ್ಕಾರು ದಿನಗಳಿಂದ ಮಾರುಕಟ್ಟೆಗೆ ನಿರೀಕ್ಷೆ ಮೀರಿ ಮಾವಿನ ಆವಕ ಹೆಚ್ಚಿದ್ದು, ವಾರದ ಹಿಂದೆ ಡಜನ್‌ ಹಣ್ಣಿಗೆ 500 ರೂ. ಇದ್ದ ಬೆಲೆ ಈಗ ಏಕಾ ಏಕಿ ಅರ್ಧಕ್ಕೆ ಕುಸಿದಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಆದರೆ ರಾಜ್ಯದ ಹಲವು ಕಡೆಗಳಲ್ಲಿ ನಿಪ ಎಂಬ ಭೀಕರ ರೋಗ ಹರಡುತ್ತಿದೆ. ಇಂಥ ವರದಿಯ ಹಿನ್ನೆಲೆಯಲ್ಲಿ ಈ ಮಾರಕ ರೋಗಕ್ಕೆ ಕಾರಣವಾಗುವ ಬಾವಲಿ ಕಚ್ಚುವ ಮಾವಿನ ಹಣ್ಣು ಸೇವನೆ ರೋಗಕಾರಕ ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಲವು ಪ್ರಮುಖ ನಗರಗಳಲ್ಲಿ ಈ ಮಾವಿನ ಮಾರುಕಟ್ಟೆ ಮೇಲೆ ನಿಪ ರೋಗದ ಗಂಭೀರ ಪರಿಣಾಮ ವ್ಯಾಪಾರದ ಬೀರಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ.

ಆದರೆ ವಿಜಯಪುರ ಜಿಲ್ಲೆ ಮಟ್ಟಿಗೆ ಇಂಥ ಯಾವ ನಕಾರಾತ್ಮಕ ಪರಿಣಾಮ ಬೀರದೇ ಮಾರುಕಟ್ಟೆಗೆ ನಿರೀಕ್ಷೆ
ಮೀರಿ ವಿವಿಧ ತಳಿಯ ಮಾವಿನ ಹಣ್ಣುಗಳು ರಾಸಿ ರಾಸಿ ಬರುತ್ತಿವೆ. ಇದರಿಂದ ಗ್ರಾಹಕರೂ ಖುಷಿಯಲ್ಲಿದ್ದಾರೆ. ವಿಜಯಪುರ ನಗರದ ಸುಮಾರು 200 ಮಾವು ವ್ಯಾಪಾರಿಗಳ ಸೇರಿದಂತೆ ಜಿಲ್ಲೆಯಾದ್ಯಂತ ಸುಮಾರು ಮಾವು ಮಾರಾಟ ಮಾಡುವ 300 ವ್ಯಾಪಾರಿಗಳಿದ್ದು, ಬಹುತೇಕರಿಗೆ ನಿಪ ರೋಗದ ಕುರಿತು ತಿಳಿದಿಲ್ಲ. ನಿಫಾ ರೋಗದ ಕುರಿತು ತಿಳಿದವರು ವಿವರಿಸಿದರೂ ಅಲ್ಲೆಲ್ಲೋ ಕೇರಳದಲ್ಲಿ ಬಂದ ರೋಗ ಸಾವಿರಾರು ಮೈಲಿ ದೂರದ ನಮ್ಮೂರಿಗೆ ಹೇಗೆ ಬರಲು ಸಾಧ್ಯ ಎಂಬ ವಾದವನ್ನೂ ಮುಂದಿಡುತ್ತಾರೆ.

ಹೀಗಾಗಿ ವಿಜಯಪುರ ಜಿಲ್ಲೆಯ ಮಟ್ಟಿಗೆ ನಿಪ ರೋಗದಿಂದ ಮುಗಿಲು ಮುಟ್ಟಿದ್ದ ಮಾವಿನ ಬೆಲೆ ದಿಢೀರ್‌ ಕುಸಿತವಾಗಿದ್ದು, ಮಾವು ಹಣ್ಣಿನ ವ್ಯಾಪಾರಿಗಳಲ್ಲೂ ಅಚ್ಚರಿ ಮೂಡಿಸಿದೆ. ಮತ್ತೂಂದೆಡೆ ಮಾವು ಪ್ರಿಯ ಗ್ರಾಹಕರು ಮಾಧ್ಯಮಗಳಲ್ಲಿ ಬರುತ್ತಿರುವ ನಿಪ ರೋಗದ ವರದಿಯಿಂದ ಭೀತಿಯಲ್ಲಿದ್ದರೂ ಬೆಲೆ ಕುಸಿತದ ಕಾರಣ ಸಮಾಧಾನದಿಂದ ಕೊಳ್ಳುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಮಾವು ಕೈಗೆಟುಕದ ದರದಲ್ಲಿತ್ತು. ಈಗ ಬೆಲೆ ಕಡಿಮೆ ಆಗಿದ್ದು, ಕೊಳ್ಳಲು ಖುಷಿಯಾಗುತ್ತಿದೆ. ನಿಪ ರೋಗದ ಕುರಿತು ವಿಜಯಪುರ ಜಿಲ್ಲೆಯ ಜನರಿಗೆ ಅಷ್ಟಾಗಿ ತಿಳಿದಿಲ್ಲ, ಆದಾಗ್ಯೂ ಮಾವಿನ ಹಣ್ಣಿನಿಂದಲೇ ನಿಪರೋಗ ಬರುವುದಿಲ್ಲ, ರೋಗ ಪೀಡಿತ ಬಾವಲಿ ಕಚ್ಚಿದ ಹಣ್ಣು ಸೇವಿಸಿದರೆ ಮಾತ್ರ ನಿಫಾ ರೋಗ ಬಾಧಿಸುತ್ತದೆ. ಹೀಗಾಗಿ ದೂರದ ಕೇರಳದಲ್ಲಿ ಕಾಣಿಸಿಕೊಂಡಿರುವ ನಿಪ ರೋಗ ವಿಜಯಪುರ ಜಿಲ್ಲೆಗೆ ಅದರ ಪರಿಣಾಮ ಬೀರಲು ಸಾಧ್ಯವಿಲ್ಲ ಎದೂ ವಾದಿಸುತ್ತಾರೆ ಮಾವು ಹಣ್ಣಿನ ಪ್ರಿಯರು.

Advertisement

ನಿಪ ರೋಗದ ಯಾವ ಪರಿಣಾಮವೂ ನಮ್ಮ ಮಾವು ಹಣ್ಣಿನ ಮಾರುಕಟ್ಟೆ ಮೇಲೆ ಬೀರಿಲ್ಲ. ಬದಲಾಗಿ ಮಾರುಕಟ್ಟೆಯಲ್ಲಿ ಅಧಿಕ ಪ್ರಮಾಣದ ಮಾವು ಬರುತ್ತಿದ್ದು, ಬೆಲೆ ಕುಸಿತದಿಂದ ಗ್ರಾಹಕರೂ ಸಂತಸದಲ್ಲಿದ್ದಾರೆ. ಈ ಕುರಿತು ನಮ್ಮ ಜಿಲ್ಲೆಯಲ್ಲಿ ಯಾವ ಗ್ರಾಹಕರೂ ನಮ್ಮಲ್ಲಿ ಈ ವಿಷಯ ಹೇಳಿಲ್ಲ.
ಮಹ್ಮದ್‌ ರಫೀಕ್‌ ಜಮಖಂಡಿ ಮಾವು ವ್ಯಾಪಾರಿ, ಇಬ್ರಾಹಿಂ ರೋಜಾ

ವಿಜಯಪುರದ ಮಾವು ಹಣ್ಣಿನ ಮಾರುಕಟ್ಟೆ ಮೇಲೆ ಯಾವ ರೋಗದ ಪರಿಣಾಮವೂ ಆಗಿಲ್ಲ. ಎಂದಿನಂತೆಯೇ ವ್ಯಾಪಾರ ಭರ್ಜರಿಯಾಗಿ ನಡೆದಿದೆ. ಹಣ್ಣಿನಿಂದ ಯಾವ ರೋಗವೂ ಬರುವುದಿಲ್ಲ. ಬಾವಲಿಗಳು ಹಣ್ಣುಗಳನ್ನು ಕಚ್ಚಿ ತಿನ್ನುವುದರಿಂದ ರೋಗ ಬರುತ್ತದೆ ಎಂಬ ವಿಷಯ ನಮಗೆ ತಿಳಿದಿಲ್ಲ. 
ಭಾಗ್ಯಶ್ರೀ ಭಜಂತ್ರಿ, ವ್ಯಾಪಾರಿ, ಸಿದ್ದೇಶ್ವರ ರಸ್ತೆ

ಬಾವಲಿ ಕಚ್ಚಿದ ಹಣ್ಣಿನಿಂದ ಮಾರಕ ರೋಗ ನಿಪ ತಗುಲುತ್ತದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಿದೆ. ಅದರಲ್ಲೂ ಸದ್ಯ ಮಾವಿನ ಹಣ್ಣಿನ ಹಂಗಾಮು ಇದ್ದು, ಮಾವಿನ ಹಣ್ಣಿನ ವಹಿವಾಟಿನಲ್ಲಿ ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ನಾನೂ ಕೂಡ ಮಾವಿನ ಹಣ್ಣು ಸೇವಿಸಿದ್ದು, ಯಾವ ಪರಿಣಾಮವೂ ಆಗಿಲ್ಲ.
ಬಸವರಾಜ ಆಹೇರಿ, ಮಾವಿನ ಗ್ರಾಹಕ

ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next