Advertisement

ನಿಪ ಆರ್ಭಟಕ್ಕೆ ಕೇರಳ ಜನತೆ ತತ್ತರ

06:00 AM May 24, 2018 | Team Udayavani |

ತಿರುವನಂತಪುರ: ಕೇರಳಕ್ಕೆ ವಕ್ಕರಿಸಿರುವ ನಿಪ ವೈರಸ್‌ ಈವರೆಗೆ 10 ಮಂದಿಯನ್ನು ಬಲಿತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿನ ನಾಲ್ಕು ಜಿಲ್ಲೆಗಳಿಂದ ದೂರ ಉಳಿಯುವಂತೆ ಪ್ರವಾಸಿಗರಿಗೆ ಸರ್ಕಾರ ಸಲಹೆ ನೀಡಿದೆ. ಕಲ್ಲಿಕೋಟೆ, ಮಲಪ್ಪುರಂ, ವಯನಾಡ್‌, ಕಣ್ಣೂರಿಗೆ ತೆರಳದಂತೆ ಆರೋಗ್ಯ ಕಾರ್ಯದರ್ಶಿ ರಾಜೀವ್‌ ಸದಾನಂದನ್‌ ಸೂಚಿಸಿದ್ದಾರೆ. ಆದಷ್ಟು ಕೇರಳದ ಯಾವುದೇ ಭಾಗಕ್ಕೂ ಸದ್ಯಕ್ಕೆ ಭೇಟಿ ನೀಡದಿರುವುದು ಒಳಿತು ಎಂದೂ ಹೇಳಿದ್ದಾರೆ. ಇದೇ ವೇಳೆ ಸದ್ಯದ ಪರಿಸ್ಥಿತಿ ಬಗ್ಗೆ ವಿವರಿಸಿದ ಅವರು, “”ಎಲ್ಲೆಡೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಈಗಾಗಲೇ 2,000 ರಿಬಾವೈರಿನ್‌ ಮಾತ್ರೆ (ಆ್ಯಂಟಿವೈರಲ್‌)ಗಳನ್ನು ತರಿಸಲಾಗಿದೆ, 8 ಸಾವಿರ ಮಾತ್ರೆಗಳು ಸದ್ಯದಲ್ಲೇ ಬರಲಿವೆ” ಎಂದು ಆರೋಗ್ಯ ಸಚಿವೆ ಶೈಲಜಾ ಮಾಹಿತಿ ನೀಡಿದ್ದಾರೆ. 

Advertisement

ರಾಜಸ್ಥಾನದಲ್ಲೂ ಅಲರ್ಟ್‌: ನಿಪ ಭೀತಿ ಹಿನ್ನೆಲೆಯಲ್ಲಿ ರಾಜಸ್ಥಾನ ದಲ್ಲೂ ಹೈಅಲರ್ಟ್‌ ಘೋಷಿಸಲಾಗಿದೆ. ರಾಜಸ್ಥಾನದ ಅನೇಕರು ಕೇರಳದಲ್ಲಿದ್ದು, ಅವರು ಆಗಾಗ್ಗೆ ತಮ್ಮ ರಾಜ್ಯಕ್ಕೆ ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. 

ಕ್ರಿಮಿನಲ್‌ ಕೇಸ್‌: ಇದೇ ವೇಳೆ, ನಿಪ ವೈರಸ್‌ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಆತಂಕ ಸೃಷ್ಟಿಸುವಂಥ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್‌ ಕೇಸು ದಾಖಲಿಸುವುದಾಗಿ ಕೇರಳ ಪೊಲೀಸರು ಎಚ್ಚರಿಸಿದ್ದಾರೆ.

ನರ್ಸ್‌ ಪತಿಗೆ ಉದ್ಯೋಗ, ಮಕ್ಕಳಿಗೂ ನೆರವು: ಕರ್ತವ್ಯದ ವೇಳೆ ನಿಪಾಹ್‌ ವೈರಸ್‌ಗೆ ತುತ್ತಾಗಿ ಮೃತಪಟ್ಟ ನರ್ಸ್‌ ಲಿನಿ ಅವರ ಕುಟುಂಬಕ್ಕೆ ಕೇರಳ ಸರ್ಕಾರ ಪರಿಹಾರ ಘೋಷಿಸಿದೆ. ಲಿನಿ ಅವರ ಪತಿಗೆ ಸರ್ಕಾರಿ ಉದ್ಯೋಗ, ಇಬ್ಬರು ಮಕ್ಕಳ ಹೆಸರಲ್ಲೂ ತಲಾ 10 ಲಕ್ಷ ರೂ. ಠೇವಣಿ ಇಡುವುದಾಗಿ ಹೇಳಿದೆ. ಸಿಎಂ ಪಿಣರಾಯಿ ವಿಜಯನ್‌ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನೊಂದೆಡೆ, ಅಬುಧಾಬಿ ಮೂಲದ ಇಬ್ಬರು ಉದ್ಯಮಿಗಳು ಕೂಡಲಿನಿ ಮಕ್ಕಳಿಗೆ ನೆರವು ಘೋಷಿಸಿದ್ದಾರೆ. ಲಿನಿ ಅವರು ಮಾಡಿದ ತ್ಯಾಗಕ್ಕೆ ಏನನ್ನು ನೀಡಿದರೂ ಕಡಿಮೆಯೇ ಎಂದಿರುವ ಉದ್ಯಮಿಗಳಾದ ಸಂಥಿ ಪ್ರಮೋದ್‌ ಮತ್ತು ಜ್ಯೋತಿ ಪಲ್ಲಟ್‌, ನರ್ಸ್‌ನ ಇಬ್ಬರೂ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next