Advertisement

Nipah virus; ಕೇರಳದಲ್ಲಿ ನಿಫಾ ದೃಢ; ದ.ಕ. ಜಿಲ್ಲೆಯಲ್ಲಿ ವಿಶೇಷ ನಿಗಾ

01:33 AM Sep 14, 2023 | Team Udayavani |

ಮಂಗಳೂರು: ಕೇರಳದಲ್ಲಿ ನಿಫಾ ಇಬ್ಬರನ್ನು ಬಲಿ ತೆಗೆದುಕೊಂಡಿರುವ ಬೆನ್ನಿಗೇ ದಕ್ಷಿಣ ಕನ್ನಡದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Advertisement

ಬುಧವಾರ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಆರೋಗ್ಯಾಧಿಕಾರಿ (ಪ್ರಭಾರಿ) ಡಾ| ಸುದರ್ಶನ್‌ ಅವರು, ಸೋಂಕು ತಗಲಿದ 4ರಿಂದ 18 ದಿನಗಳಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮನುಷ್ಯರಲ್ಲಿ ಜ್ವರ, ತಲೆನೋವು, ತಲೆ ಸುತ್ತುವಿಕೆ, ದಿಗ್ಭ್ರಮೆ, ಮಾನಸಿಕ ಗೊಂದಲ, ಮಾತಿನಲ್ಲಿ ತೊದಲುವಿಕೆ, ಜ್ಞಾನ ತಪ್ಪುವುದು, ಅನಂತರ ಸಾವು ಕೂಡ ಸಂಭವಿಸಬಹುದು. ಪ್ರಾಣಿಗಳಲ್ಲಿ ಹಂದಿಗಳಲ್ಲಿ ಉಸಿರಾಟದ ತೊಂದರೆ, ನರದೌರ್ಬಲ್ಯ (ನರ ಮಂಡಲದ ಸಿಂಡ್ರೋಮ್‌) ಉಂಟಾಗುತ್ತದೆ. ಎಲೀಸಾ ಆಧಾರಿತ ಪರೀಕ್ಷೆಯಿಂದ ನಿಫಾ ವೈರಾಣುಗಳನ್ನು ಗುರುತಿಸಬಹುದು.

ಆರ್‌ಟಿಪಿಸಿಆರ್‌ ಪರೀಕ್ಷೆಯಿಂದ ಈ ರೋಗ ದೃಢಪಡಿಸಲಾಗುತ್ತದೆ ಎಂದು ಹೇಳಿದರು.

ಗಾಬರಿ ಬೇಡ .. ಜಾಗ್ರತರಾಗಿರಿ
“ಜ್ವರ ಬಂತು ಎಂದು ಯಾರೂ ಗಾಬರಿ ಪಡಬೇಡಿ. ಯಾವುದೇ ಜ್ವರವನ್ನು ನಿರ್ಲಕ್ಷಿಸಬೇಡಿ. ಜ್ವರ ಬಂದರೆ ಸ್ವಯಂ ಔಷಧ ಪಡೆದುಕೊಳ್ಳಬೇಡಿ. ತತ್‌ಕ್ಷಣ ವೈದ್ಯರನ್ನು ಭೇಟಿಯಾಗಿ ಸೂಕ್ತ ಔಷಧ ಪಡೆದುಕೊಳ್ಳಿ. ಕೇರಳ ಗಡಿ ಭಾಗದಲ್ಲಿ ವಿಶೇಷ ನಿಗಾ ಇರಿಸಲಾಗಿದ್ದು, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಲಾಗಿದೆ. ಎಲ್ಲ ಜ್ವರಗಳು ನಿಫಾ ವೈರಸ್‌ನಿಂದ ಬರುವುದಿಲ್ಲ. ನಿಫಾದಿಂದ ಬಳಲುವ ವ್ಯಕ್ತಿಗೆ ಹತ್ತಿರದಿಂದ ಚಿಕಿತ್ಸೆ ಕೊಡುವವರು, ರೋಗಿಯ ಹತ್ತಿರದ ಸಂಬಂಧಿ, ಶುಶ್ರೂಷೆ ನೀಡಿದವರಲ್ಲಿ ನಿಫಾ ಲಕ್ಷಣ ಕಂಡುಬಂದರೆ ಅಂಥವರನ್ನು ಶಂಕಿತ ರೋಗಿಗಳು ಎಂದು ಪರಿಗಣಿಸಿ. ಅವರ ರಕ್ತದ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸುತ್ತೇವೆ. 2019, 2021ರಲ್ಲೂ ಕೇರಳದಲ್ಲಿ ಪ್ರಕರಣ ಕಂಡುಬಂದಿದ್ದು, ಅಲ್ಲೇ ನಿರ್ಬಂಧಿತ ಜಾಗದಲ್ಲಿ ಶಮನಗೊಂಡಿತ್ತು’ ಎಂದು ಡಾ| ನವೀನ್‌ ಚಂದ್ರ ಕುಲಾಲ್‌ ಹೇಳಿದರು.

Advertisement

ಐಸೊಲೇಶನ್‌ ವಾರ್ಡ್‌
ಕೇರಳದಲ್ಲಿ ನಿಫಾ ದೃಢಪಟ್ಟ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಒಂದು ವೇಳೆ ಜಿಲ್ಲೆಯಲ್ಲಿ ಅಂತಹ ರೋಗ ಲಕ್ಷಣ ಪತ್ತೆಯಾದರೆ ಚಿಕಿತ್ಸೆಗಾಗಿ ವೆನಾÉಕ್‌ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ಕೊಠಡಿ (ಐಸೊಲೇಶನ್‌ ವಾರ್ಡ್‌) ಯನ್ನು ತೆರೆಯುವಂತೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.

ನಿಫಾ ಹರಡುವುದು ಹೇಗೆ?
- ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ, ಬಾವಲಿಗಳು ಕಚ್ಚಿ ಎಸೆದ ಹಣ್ಣು ಸೇವಿಸುವುದರಿಂದ
- ಸೋಂಕಿತ ಪ್ರಾಣಿಗಳಿಂದ ಇತರ ಪ್ರಾಣಿಗಳಿಗೆ ಮಲ, ಮೂತ್ರ, ಜೊಲ್ಲು ಮತ್ತು ರಕ್ತದ ನೇರ ಸಂಪರ್ಕದಿಂದ
- ಸೋಂಕಿತ ಪ್ರಾಣಿ ಅಥವಾ ಮನುಷ್ಯನ ಮಲ, ಮೂತ್ರ, ಜೊಲ್ಲು ಮತ್ತು ರಕ್ತ ಇವುಗಳ ನೇರ ಸಂಪರ್ಕದಿಂದ

ಹೀಗೆ ಮಾಡಿ …
– ಸೋಂಕಿತ ಜಾನುವಾರುಗಳು ಮಧ್ಯಾಂತರ ಮೂಲಗಳಾಗಿರುವುದರಿಂದ ಅವುಗಳನ್ನು ಪ್ರತ್ಯೇಕವಾಗಿಡಿ.
– ಶಂಕಿತ ಮನುಷ್ಯ ಪ್ರಕರಣಗಳನ್ನು ಪ್ರತ್ಯೇಕವಾಗಿಡಿ.
– ಶಂಕಿತರು ಬಳಸುವ ಬಟ್ಟೆ, ಪಾತ್ರೆಗಳು ಹಾಗೂ ಸ್ನಾನ ಮತ್ತು ಶೌಚಾಲಯದಲ್ಲಿ ಬಳಸುವ ವಸ್ತುಗಳನ್ನು ಪ್ರತ್ಯೇಕವಾಗಿ ಶುಚಿಗೊಳಿಸಿ, ನೈರ್ಮಲ್ಯ ಕಾಪಾಡಿ, ಹಸ್ತಲಾಘವ ಸದ್ಯ ಬೇಡ
-ರೋಗಿಗಳನ್ನು ಉಪಚರಿಸುವಾಗ ಮಾಸ್ಕ್, ಗ್ಲೌಸ್‌, ಕೈಗವಸು ಧರಿಸಿ, ಹಣ್ಣುಗಳನ್ನು ತೊಳೆದು, ಸಿಪ್ಪೆ ಸುಲಿದು, ಬೇಯಿಸಿ ತಿನ್ನಿ, ನೆರವಿಗಾಗಿ 104ಕ್ಕೆ ಕರೆ ಮಾಡಿ.

ತಡೆಗಟ್ಟುವುದು ಹೇಗೆ?
ಪಕ್ಷಿಗಳು ಮತ್ತು ಪ್ರಾಣಿಗಳು ಕಚ್ಚಿದ ಹಣ್ಣನ್ನು ಸೇವಿಸಬಾರದು, ಬಾವಲಿಗಳು ಹೆಚ್ಚಾಗಿರುವ ಪ್ರದೇಶಗಳಿಂದ ಸಂಗ್ರಹಿಸಿದ ಸೇಂದಿ, ನೀರಾ ಕುಡಿಯಬಾರದು, ತಾಜಾ ತಾಳೆ ಹಣ್ಣಿನ ರಸ ಸೇವಿಸಬಾರದು, ಹಣ್ಣು ಮತ್ತು ಒಣ ಖರ್ಜೂರ ಸೇವಿಸುವ ಮೊದಲು ಸಂಪೂರ್ಣವಾಗಿ ಶುದ್ಧೀಕರಿಸಬೇಕು, ಆನಾರೋಗ್ಯದ ಹಂದಿಗಳನ್ನು ಮತ್ತು ಪ್ರಾಣಿಗಳೊಂದಿಗೆ ನೇರ ಸಂಪರ್ಕ ತಪ್ಪಿಸಬೇಕು, ಬಾವಲಿಗಳ ಪ್ರವೇಶವನ್ನು ತಪ್ಪಿಸಲು ತೆರೆದ ಬಾವಿಗಳಿಗೆ ಜಾಲರಿ ಅಳವಡಿಸಬೇಕು, ಸೋಂಕಿತ ರೋಗಿಯು ಕನಿಷ್ಠ 15 ದಿನಗಳ ಕಾಲ ಮನೆಯಲ್ಲಿ ಮತ್ತು ಚಿಕಿತ್ಸೆಯ ಅವಧಿಯಲ್ಲಿ ಆಸ್ಪತ್ರೆಯಲ್ಲಿಯೇ ಪ್ರತ್ಯೇಕವಾಗಿರಬೇಕು, ಬಾವಲಿಗಳ ವಾಸ ಇರುವ ಬಾವಿ, ಸುರಂಗದ ನೀರನ್ನು ಕುದಿಸದೆ ಉಪಯೋಗಿಸಬಾರದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕೊಡಗಿನಲ್ಲೂ ಕಟ್ಟೆಚ್ಚರ
ಮಡಿಕೇರಿ: ನೆರೆಯ ಕೇರಳದಲ್ಲಿ ಆತಂಕ ಮೂಡಿಸಿರುವ ನಿಫಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಯಾದ ಕೊಡಗಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವ ಮೂಲಕ ಕಟ್ಟೆಚ್ಚರ ವಹಿಸುವಂತೆ ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ಸತೀಶ್‌ ಕುಮಾರ್‌ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೊಡಗು ಜಿಲ್ಲೆಯಿಂದ ಕೇರಳಕ್ಕೆ ತೆರಳುವ ಮತ್ತು ಬರುವವರ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿದೆ. ಮಾಕುಟ್ಟ, ಕುಟ್ಟ ಮತ್ತು ಕರಿಕೆ ಮೂಲಕ ಪ್ರತಿನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಎರಡೂ ರಾಜ್ಯಗಳ ಜನತೆ ಸಂಚರಿಸುತ್ತಾರೆ. ಈ ಹಿನ್ನೆಲೆಯಲ್ಲಿ ನಿಫಾ ಸೋಂಕು ರಾಜ್ಯವನ್ನು ಪ್ರವೇಶಿಸುವ ಸಾಧ್ಯತೆ ಇದೆ.

ನಿಫಾ ವೈರಸ್‌ ಮುಖ್ಯವಾಗಿ ಸೋಂಕಿತ ಬಾವಲಿಗಳ ನೇರ ಸಂಪರ್ಕದಿಂದ ಬರುವ ಕಾರಣ ಅದಕ್ಕೆ ಬಾವಲಿ ಜ್ವರ ಎಂದೂ ಕರೆಯುತ್ತಾರೆ. ಯಾವುದೇ ರೀತಿಯ ಜ್ವರ ಕಂಡುಬಂದರೂ ಉದಾಸೀನ ಮಾಡದೇ ವೈದ್ಯರನ್ನು ಭೇಟಿಯಾಗಬೇಕು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next