ಕೋವಿಡ್ ಕಿರಿಕ್ ನಡುವೆಯೇ ನಿಫಾ ಸೋಂಕು ಕೇರಳದಲ್ಲಿ ಭೀತಿ ಹುಟ್ಟಿಸಿದೆ. ಈಗಾಗಲೇ 12 ವರ್ಷದ ಬಾಲಕ ಸೋಂಕಿಗೆ ಬಲಿಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ನಿಫಾ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಏನಿದು ನಿಫಾವೈರಸ್? :
ಇದು ಪ್ರಾಣಿಗಳಿಂದ ಮನುಷ್ಯರಿಗೆ ಅಥವಾ ವ್ಯಕ್ತಿಯಿಂದ ಮತ್ತೂಬ್ಬ ವ್ಯಕ್ತಿಗೆ ಹರಡುವ ಸೋಂಕು. ವಿಷಯುಕ್ತ ಅಥವಾ ಕಲ್ಮಶಭರಿತ ಆಹಾರದ ಮೂಲಕವೂ ಹರಡಬಹುದು.
ರೋಗಲಕ್ಷಣಗಳು :
ಆರಂಭದಲ್ಲಿ ಜ್ವರ, ತಲೆನೋವು, ಸ್ನಾಯು ನೋವು, ವಾಂತಿ, ಗಂಟನೋವು ಕಾಣಿಸಿ ಕೊಳ್ಳುತ್ತದೆ. ಅನಂತರದಲ್ಲಿ ತಲೆಸುತ್ತುಬರುವುದು, ನಿದ್ರಾಜನಕ ಸ್ಥಿತಿ, ಪ್ರಜ್ಞೆ ತಪ್ಪುವಿಕೆ, ಮೆದುಳಿನ ಉರಿಯೂತವನ್ನು ಸೂಚಿಸುವ ಲಕ್ಷಣಗಳು ಕಂಡುಬರುತ್ತವೆ. ಕೆಲವರಿಗೆ ನ್ಯುಮೋನಿಯಾ ಹಾಗೂ ಗಂಭೀರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳಬಹುದು. ಗಂಭೀರ ಪ್ರಕರಣಗಳಲ್ಲಿ ಸೋಂಕು ತಗುಲಿದ 24-48 ಗಂಟೆಗಳಲ್ಲಿ ರೋಗಿಯು ಮೆದುಳಿನ ಉರಿಯೂತಕ್ಕೆ ಬಲಿಯಾಗುತ್ತಾನೆ.
ಹೇಗೆ ಹರಡುತ್ತದೆ? :
- ಬಾವಲಿ, ಹಂದಿಯಂಥ ಸೋಂಕಿತ ಪ್ರಾಣಿಗಳು ಅಥವಾ ಅವುಗಳ ದೇಹದ ದ್ರವದ (ರಕ್ತ, ಮೂತ್ರ ಅಥವಾ ಲಾಲಾರಸ) ನೇರ ಸಂಪರ್ಕದಿಂದ.
- ಸೋಂಕಿತ ಪ್ರಾಣಿಯ ದೇಹದ ದ್ರವವು ತಾಗಿರುವ ಆಹಾರ ಸೇವಿಸುವುದರಿಂದ. ಉದಾ: ಸೋಂಕಿತ ಬಾವಲಿ ಕಚ್ಚಿ ಬಿಟ್ಟಿರುವ ಹಣ್ಣು ತಿನ್ನುವುದರಿಂದ.
- ನಿಫಾ ತಗುಲಿರುವ ವ್ಯಕ್ತಿಯೊಂದಿಗೆ ನೇರ ಸಂಪರ್ಕ ಅಥವಾ ಆತನ ದೇಹದ ದ್ರವ(ಮೂಗು- ಬಾಯಿಯಿಂದ ಬರುವ ದ್ರವ, ಮೂತ್ರ, ರಕ್ತ) ದೊಂದಿಗೆ ನೇರ ಸಂಪರ್ಕ ಹೊಂದುವುದರಿಂದ.
ಸೋಂಕಿನಿಂದ ರಕ್ಷಣೆಗೆ ಹೇಗೆ? :
- ಲಸಿಕೆ ಇಲ್ಲ. ಮುನ್ನೆಚ್ಚರಿಕೆಯೇ ಮದ್ದು
- ಪದೇ ಪದೆ ಕೈಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸುತ್ತಿರಬೇಕು
- ಮರದಿಂದ ಕೆಳಗೆ ಬಿದ್ದಿರುವ, ಬೇರೆ ಪ್ರಾಣಿ ಕಚ್ಚಿಬಿಟ್ಟಿರುವ ಹಣ್ಣು ತಿನ್ನಬೇಡಿ
- ಹಣ್ಣು- ತರಕಾರಿ ಸೇವನೆಗೂ ಮುನ್ನ ಚೆನ್ನಾಗಿ ಸ್ವಚ್ಛಗೊಳಿಸಿ
- ಸೋಂಕಿತರೊಂದಿಗೆ ಸಂಪರ್ಕ ಬೇಡ
- ಹಂದಿ- ಬಾವಲಿಗಳಿಂದಲೂ ದೂರವಿರಿ
- ಬಾವಲಿಗಳು ಹೆಚ್ಚಿರುವಂಥ ಪ್ರದೇಶಗಳಿಗೆ ಹೋಗಬೇಡಿ
11 ಮಂದಿಯಲ್ಲಿ ನಿಫಾ ವೈರಸ್ ಲಕ್ಷಣ :
ಕೊಯಮತ್ತೂರು: ಕೇರಳದ ಕಲ್ಲಿಕೋಟೆಯಲ್ಲಿ ನಿಫಾ ಸೋಂಕಿನಿಂದಾಗಿ ಮೊನ್ನೆಯಷ್ಟೇ ಅಸುನೀಗಿದ ಬಾಲಕನ ಜೊತೆಗೆ 251 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದ್ದರೆಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
“”ಸಂಪರ್ಕ ಹೊಂದಿರುವವರಲ್ಲಿ 38 ಮಂದಿಯನ್ನು ಆಸ್ಪತ್ರೆಯಲ್ಲಿ ಐಸೋಲೇ ಷನ್‌ಗೆ ಒಳಪಡಿಸಲಾಗಿದೆ. ಅವರಲ್ಲಿ 11 ಮಂದಿಗೆ ನಿಫಾ ಲಕ್ಷಣಗಳು ಕಾಣಿಸಿ ಕೊಂಡಿವೆ” ಎಂದಿದ್ದಾರೆ. 251 ಮಂದಿ ಪ್ರಾಥಮಿಕ ಸಂಪರ್ಕಿತರ ಪೈಕಿ 129 ಜನ ವೈದ್ಯಕೀಯ ಸಿಬ್ಬಂದಿಯಾಗಿದ್ದಾರೆ. ಇವರಲ್ಲಿ 54 ಮಂದಿ ಹೈ ರಿಸ್ಕ್ನ ವ್ಯಾಪ್ತಿಯ ಲ್ಲಿದ್ದಾರೆ. ಈ ವ್ಯಾಪ್ತಿಯಲ್ಲಿ 34 ಮಂದಿ ಆರೋಗ್ಯ ಸಿಬ್ಬಂದಿಯೂ ಇದ್ದಾರೆ. ಪುಣೆ ತಜ್ಞರನ್ನೊಳಗೊಂಡ ತಂಡ, ನಿಫಾ ಲಕ್ಷಣವುಳ್ಳವರಿಗೆ ಪಾಯಿಂಟ್ ಆಫ್ ಕೇರ್ ಮಾದರಿಯ ಶುಶ್ರೂಷೆ ಹಾಗೂ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಲ್ಲಿಕೋ ಟೆಯ ವೈದ್ಯಕೀಯ ಆಸ್ಪತ್ರೆಯಲ್ಲಿ ನಡೆಸುವಂತೆ ಸೂಚಿಸಿದೆ ಎಂದು ಸಚಿವರು ತಿಳಿಸಿದ್ದಾರೆ.
ಪತ್ತೆಯಾಗಿಲ್ಲ: ತಮಿಳುನಾಡಿನ ಕೊಯ ಮತ್ತೂರ್‌ನಲ್ಲಿ ಕೂಡ ನಿಫಾಪತ್ತೆಯಾಗಿದೆ ಎಂಬ ವರದಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಜಿಲ್ಲಾಧಿಕಾರಿ ಡಾ.ಜಿ.ಎಸ್.ಸಮೀರನ್ “ಕಲ್ಲಿಕೋಟೆ ಯಲ್ಲಿ ಒಂದು ಪ್ರಕರಣ ದೃಢಪಟ್ಟಿತ್ತು. ಕೊಯಮತ್ತೂರು ಜಿಲ್ಲೆ ಪೂರ್ತಿ ನಿಫಾ ಕೇಸು ಪತ್ತೆಯಾಗಿದೆ ಎಂಬ ಮಾಧ್ಯಮ ವರದಿ ಸರಿಯಲ್ಲ’ ಎಂದು ಬರೆದುಕೊಂಡಿದ್ದಾರೆ.