ತಿರುವನಂತಪುರಂ: ಕೇರಳದಲ್ಲಿ ಇಬ್ಬರ ಅಸಹಜ ಸಾವು ನಿಫಾ ವೈರಸ್ ಭೀತಿಯನ್ನು ಹೆಚ್ಚಿಸಿದೆ. ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ನಿಫಾ ವೈರಸ್ ಕುರಿತ ಎಚ್ಚರಿಕೆಯನ್ನು ಆರೋಗ್ಯ ಇಲಾಖೆ ನೀಡಿದೆ.
ಜ್ವರದಿಂದ ಬಳಲುತ್ತಿದ್ದ ಕಾರಣ ಕೋಝಿಕ್ಕೋಡ್ ನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಾವನ್ನಪ್ಪಿದ್ದು, ಸಾವಿಗೆ ನಿಫಾ ವೈರಸ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಇದಲ್ಲದೇ ಮೃತರಲ್ಲಿ ಒಬ್ಬರ ಸಂಬಂಧಿಕರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ನಿಫಾ ವೈರಸ್ ಭೀತಿಯನ್ನು ಹೆಚ್ಚುವಂತೆ ಮಾಡಿದೆ. ಚಿಕಿತ್ಸೆ ಪಡೆಯುತ್ತಿರುವ ರೋಗಿಯ ವೈದ್ಯಕೀಯ ಪರೀಕ್ಷೆಯ ಫಲಿತಾಂಶ ಇನ್ನಷ್ಟೇ ಬರಬೇಕಿದೆ.
ಇಬ್ಬರ ಅಸಹಜ ಸಾವು ಉಂಟಾದ ಹಿನ್ನೆಲೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ನೇತೃತ್ವದಲ್ಲಿ ಪರಿಸ್ಥಿತಿ ಬಗ್ಗೆ ತಿಳಿಯಲು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಉನ್ನತಮಟ್ಟದ ಸಭೆಯನ್ನು ನಡೆಸಲಾಗಿದೆ.
ಕೇರಳದಲ್ಲಿ 2018 ಹಾಗೂ 2021 ರಲ್ಲಿ ಬಾವಲಿಗಳಿಂದ ಹರಡುವ ನಿಫಾ ವೈರಸ್ ಹತ್ತಾರು ಸಾವು ನೋವುಗಳಿಗೆ ಕಾರಣವಾಗಿತ್ತು. ಕೋಝಿಕ್ಕೋಡ್ ನಲ್ಲಿ ಈ ಹಿಂದೆ ಕೂಡ ನಿಫಾ ವೈರಸ್ ಪ್ರಕರಣಗಳು ಪತ್ತೆಯಾಗಿತ್ತು.
ಬಾವಲಿಗಳು ಕಚ್ಚಿದ ಹಣ್ಣನ್ನು ಸೇವಿಸಿದರೆ ಈ ವೈರಸ್ ಹರಡುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪ್ರಾಣಿಗಳಿಗೂ ವೇಗವಾಗಿ ನಿಫಾ ವೈರಸ್ ಹರಡುತ್ತದೆ. ಇದು ಉಸಿರಾಟದ ತೊಂದರೆ, ತಲೆನೋವು, ಸ್ನಾಯು ಸೆಳೆತದಂತಹ ಲಕ್ಷಣಗಳನ್ನು ಒಳಗೊಂಡಿರುತ್ತದೆ.