ಸರ್ಕಾರ ಚಿತ್ರಮಂದಿರಗಳಿಗೆ ಪೂರ್ಣ ಪ್ರವೇಶ ಘೋಷಿಸುತ್ತಿದ್ದಂತೆ ಸ್ಟಾರ್‌ಗಳ ಸಿನಿಮಾಗಳ ಜೊತೆಗೆ ಹೊಸಬರ ಸಿನಿಮಾಗಳು ಕೂಡಾ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ಅದರಲ್ಲೂ ಆರಂಭದ ಎರಡು ವಾರ ಹೊಸಬರು ತಮ್ಮ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ. ಅದಕ್ಕೆ ಕಾರಣ ಅ.14ರಿಂದ ಸ್ಟಾರ್‌ಗಳ ಸಿನಿ ಜಾತ್ರೆ ಶುರುವಾಗಲಿದೆ.
ಅಕ್ಟೋಬರ್ ಆರಂಭದ ಎರಡು ವಾರ ಯಾವುದೇ ಸ್ಟಾರ್ ಸಿನಿಮಾಗಳು ರಿಲೀಸ್ ಆಗದೇ ಇರುವುದರಿಂದ ಈ ಸಮಯವನ್ನು ಹೊಸಬರು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಈಗಾಗಲೇ ಅಕ್ಟೋಬರ್ 1ಕ್ಕೆ “ಕಾಗೆಮೊಟ್ಟೆ’, ಅಕ್ಟೋಬರ್ 8ಕ್ಕೆ “ನಿನ್ನ ಸನಿಹಕೆ’ ಹಾಗೂ “ಇದು ಆಕಾಶವಾಣಿ ಬೆಂಗಳೂರು’ ಚಿತ್ರಗಳು ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಇದರ ಜೊತೆಗೆ ಇನ್ನೊಂದೆರಡು ಹೊಸಬರ ಸಿನಿಮಾಗಳು ಬಿಡುಗಡೆಯಾಗಲಿದೆ.
ಅ.8ಕ್ಕೆ ನಿನ್ನ ಸನಿಹಕೆ ರಿಲೀಸ್ ಸೂರಜ್ ಗೌಡ ಹಾಗೂ ಧನ್ಯಾ ರಾಮ್ ಕುಮಾರ್ ನಾಯಕ-ನಾಯಕಿಯಾಗಿರುವ “ನಿನ್ನ ಸನಿಹಕೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಏಪ್ರಿಲ್ ತಿಂಗಳಲ್ಲೇ ತೆರೆ ಕಾಣಬೇಕಿತ್ತು. ಅಷ್ಟರಲ್ಲಿ ಎರಡನೇ ಲಾಕ್‌ಡೌನ್ ಘೋಷಿಸಿದ್ದರಿಂದ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡಿತ್ತು ಚಿತ್ರತಂಡ. ಇದೀಗ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಕ್ಕೆ ಅನುಮತಿ ಸಿಗುತ್ತಿದ್ದಂತೆ ಈಗ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಅಕ್ಟೋಬರ್ 8ರಂದು ಚಿತ್ರ ಬಿಡುಗಡೆಯಾಗುತ್ತಿದೆ.
ರಘು ದೀಕ್ಷಿತ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಿಟ್ ಲಿಸ್ಟ್ ಸೇರಿಕೊಂಡಿವೆ. ವಿಶೇಷವೆಂದರೆ ಲಾಕ್‌ಡೌನ್ ಸಮಯದಲ್ಲಿ ಕವರ್ ಸಾಂಗ್ಸ್ ಮೂಲಕ ಈ ಚಿತ್ರದ “ನೀ ಪರಿಚಯ’ ಎಂಬ ಹಾಡು ಕಮಾಲ್ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಸುಮಾರು 250ಕ್ಕೂ ಹೆಚ್ಚು ಬಗೆಯಲ್ಲಿ ಈ ಹಾಡಿನ ಕವರ್ ವರ್ಷನ್ ಮಾಡಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಹಿಟ್ ಆಗಿರೋ ಈ ಹಾಡು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಯೂಟ್ಯೂಬ್ ನಲ್ಲಿ ಮಿಲಿಯನ್ಸ್ ಹಿಟ್ಸ್ ದಾಖಲಿಸಿದೆ. ಈ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ.