ಬೆಂಗಳೂರು: ನಗರದಲ್ಲಿ ಸುರಿದ ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ನಿಂಗಮ್ಮ ಅವರ ಮೃತದೇಹ 10 ದಿನಗಳ ನಂತರ ಕುಂಬಳಗೋಡು ಬಳಿಯ ರಾಜಕಾಲುವೆಯಲ್ಲಿ ಪತ್ತೆಯಾಗಿದೆ. ಕುರುಬರಹಳ್ಳಿಯಲ್ಲಿ ಅ.13ರಂದು ಸುರಿದ ಭಾರಿ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಸುರಕ್ಷಿತ ಪ್ರದೇಶಕ್ಕೆ ತೆರಲುವ ವೇಳೆ ತಾಯಿ ಮಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ಅಗ್ನಿಶಾಮಕದಳ, ಬಿಬಿಎಂಪಿ ಹಾಗೂ ಪೌರರಕ್ಷಕ ದಳ ಸಿಬ್ಬಂದಿ ನಿರಂತರವಾಗಿ ಶೋಧ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಅ.15ರಂದು ಮಗಳು ಪುಷ್ಟ ಮೃತದೇಹ ಜ್ಞಾನಭಾರತಿ ಬಳಿಯ ರಾಜಕಾಲುವೆಯಲ್ಲಿ ಪತ್ತೆಯಾಗಿತ್ತು. ಆದರೆ, ನಿಂಗಮ್ಮ ಅವರ ಸುಳಿವು ಮಾತ್ರ ಸಿಕ್ಕಿರಲಿಲ್ಲ.
ಭಾನುವಾರ ಕುಂಬಳಗೋಡು ಬಳಿಕ ರಾಜಕಾಲುವೆಯಲ್ಲಿ ಅಪರಿಚಿತ ಮೃತದೇಹ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಗ್ನಿಶಾಮಕದಳ ಸಿಬ್ಬಂದಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಿದ್ದಾರೆ.
ಪೊಲೀಸರು ಮೃತದೇಹ ಸಿಕ್ಕಿರುವ ಕುರಿತು ಕುಟುಂಬ ಸದಸ್ಯರು ಹಾಗೂ ಪಾಲಿಕೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಆಸ್ಪತ್ರೆಗೆ ಬಂದ ಕುಟುಂಬಸ್ಥರು ಮೃತದೇಹ ನಿಂಗಮ್ಮ ಅವರದೇ ಎಂದು ಗುರುತಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮುಗಿಸಿರುವ ವೈದ್ಯರು ಮೃತದೇಹವನ್ನು ಸೋಮವಾರ ಬೆಳಗ್ಗೆ ಹಸ್ತಾಂತರಿಸಲಿದ್ದು,
ಸುಮ್ಮನಹಳ್ಳಿಯ ವಿದ್ಯುತ್ ಚಿತಾಗಾರದಲ್ಲಿ ಶವಸಂಸ್ಕಾರ ನೆರವೇರಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಮೇಯರ್ ಸಂಪತ್‌ರಾಜ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ವೈದ್ಯರು ಮೃತದೇಹ ಹಸ್ತಾಂತರಿಸಿದ ಬಳಿಕ ಅಂತ್ಯ ಸಂಸ್ಕಾರಕ್ಕೆ ಅಗತ್ಯ ಸಹಕಾರ ನೀಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.