ಮಧ್ಯಪ್ರದೇಶ: ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ ಪರಿಣಾಮ ಕನಿಷ್ಠ ಒಂಬತ್ತು ಮಂದಿ ಗಂಭೀರ ಗಾಯಗೊಂಡು ಹಲವರು ಫ್ಯಾಕ್ಟರಿ ಒಳಗೆ ಸಿಲುಕಿರುವ ಘಟನೆ ಮಧ್ಯಪ್ರದೇಶದ ಜಬಲ್‌ಪುರದಲ್ಲಿ ಮಂಗಳವಾರ(ಅ.22) ರಂದು ಸಂಭವಿಸಿದೆ.
ಖಮಾರಿಯಾದಲ್ಲಿರುವ ಸ್ಫೋಟಕಗಳನ್ನು ತಯಾರಿಸುವ ಸೆಂಟ್ರಲ್ ಸೆಕ್ಯುರಿಟಿ ಇನ್‌ಸ್ಟಿಟ್ಯೂಟ್ ಆರ್ಡನೆನ್ಸ್ ಫ್ಯಾಕ್ಟರಿಯಲ್ಲಿ ಮಂಗಳವಾರ ಬೆಳಗ್ಗೆ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಖಾನೆಯ ಉದ್ಯೋಗಿಗಳಾಗಿರುವ ಗಾಯಾಳುಗಳಲ್ಲಿ 10 ಮಂದಿಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ತುರ್ತು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾರ್ಖಾನೆಯ F-6 ವಿಭಾಗದ ಕಟ್ಟಡದಲ್ಲಿ ಬಾಂಬ್ ಸಂಗ್ರಹಿಸುವ ಪ್ರಕ್ರಿಯೆ ನಡೆಯುತ್ತಿದ್ದ ವೇಳೆ ಹೈಡ್ರಾಲಿಕ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಪರಿಣಾಮ ಸ್ಫೋಟ ಸಂಭವಿಸಿದೆ ಇದರ ತೀವ್ರತೆ ಎಷ್ಟಿತ್ತೆಂದರೆ ಐದು ಕಿಲೋಮೀಟರ್ ದೂರದವರೆಗೆ ಸ್ಫೋಟದ ಸದ್ದು ಕೇಳಿಸಿದೆ ಎಂದು ಹೇಳಲಾಗಿದೆ. ಕಾರ್ಖಾನೆಯ ಬಳಿ ವಾಸಿಸುವ ನಿವಾಸಿಗಳು ಭೂಕಂಪ ಸಂಭವಿಸಿದೆ ಎಂದು ಭಾವಿಸಿ ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಕಾರ್ಖಾನೆಯ ಜನರಲ್ ಮ್ಯಾನೇಜರ್ ಮತ್ತು ಇತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಕಟ್ಟಡದ ಒಳಗೆ ಕೆಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಅಗ್ನಿಶಾಮಕ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.