ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ್ದ 48 ವರ್ಷದ ವ್ಯಕ್ತಿಗೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿನ ಕಾರಣದಿಂದ ಮೃತಪಟ್ಟ ಮೂರನೇ ಪ್ರಕರಣವಾಗಿದೆ.
ಜಿಲ್ಲೆಯಲ್ಲಿಂದು ಒಂಬತ್ತು ಜನರಿಗೆ ಕೋವಿಡ್-19 ಸೋಂಕು ತಾಗಿರುವುದು ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1206ಕ್ಕೆ ಏರಿಕೆಯಾಗಿದೆ.
ಇಂದು ಒಂಬತ್ತು ಮಂದಿ ಸೋಂಕಿತರ ಪೈಕಿ ಆರು ಮಂದಿ ಪುರುಷರು ಮತ್ತು ಮೂವರು ಮಹಿಳೆಯರಾಗಿದ್ದಾರೆ. ಮೂವರು ಮಹಾರಾಷ್ಟ್ರದಿಂದ ಬಂದಿದ್ದರೆ, ಓರ್ವ ಹೈದರಾಬಾದ್ ನಿಂದ ಆಗಮಿಸಿದ್ದರು. ಇಬ್ಬರು ಕೋವಿಡ್ ಸೋಂಕಿತರ ಸಂಪರ್ಕದಿಂದ ಸೋಂಕು ತಾಗಿದೆ. ಓರ್ವ ಬಟ್ಟೆಯಂಗಡಿ ಮಾಲೀಕನಿಗೆ ಸೋಂಕು ದೃಢವಾಗಿದ್ದರೆ, ಇಬ್ಬರು ಕುಂದಾಪುರ- ಬೆಂಗಳೂರು ಬಸ್ ಚಾಲಕರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ.
ಒಟ್ಟು 1206 ಕೋವಿಡ್ ಸೋಂಕಿತರಲ್ಲಿ 1067 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೂವರು ಸೋಂಕಿತರು ಮೃತಪಟ್ಟರೆ, ಇನ್ನೂ 136 ಸಕ್ರಿಯ ಪ್ರಕರಣಗಳಿವೆ. ಇವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರನೇ ಬಲಿ: ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿಗೆ ಮೂರನೇ ಬಲಿಯಾಗಿದೆ. ಮುಂಬೈ ನಿಂದ ಆಗಮಿಸಿದ್ದ 48 ವರ್ಷದ ವ್ಯಕ್ತಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು. ಮುಂಬೈನಲ್ಲಿ ಚಿಕಿತ್ಸೆ ಪಡೆದು ಬಂದಿದ್ದರೂ ಆ ವಿಷಯವನ್ನು ಇಲ್ಲಿ ಅಧಿಕಾರಿಗಳ ಮುಂದೆ ಮರೆಮಾಚಿದ್ದರು. ಸದ್ಯ ವ್ಯಕ್ತಿ ಮೃತಪಟ್ಟಿದ್ದು, ನಂತರ ಪರೀಕ್ಷೆ ನಡೆಸಿದಾಗ ಕೋವಿಡ್ ಇರುವ ಬಗ್ಗೆ ಖಚಿತವಾಗಿದೆ. ಮಾರ್ಗಸೂಚಿಯ ಪ್ರಕಾರ ಅಂತ್ಯ ಸಂಸ್ಕಾರ ನಡೆಸಲಾಗಿದೆ.