Advertisement

ಈ ವಾರ ತೆರೆಗೆ ಒಂಭತ್ತು ಚಿತ್ರಗಳು

09:32 AM Mar 29, 2019 | Lakshmi GovindaRaju |

ಒಂದು ಕಡೆ ಸಿನಿಮಾ ಮಂದಿಯ ಚುನಾವಣಾ ಪ್ರಚಾರದ ಬಿಸಿ. ಮತ್ತೂಂದು ಕಡೆ ಸಿನಿಮಾ ಬಿಡುಗಡೆಯ ಭರಾಟೆ … ಗಾಂಧಿನಗರವಂತೂ ರಂಗೇರಿದೆ. ಸ್ವಲ್ಪ ದಿನ ಸಿನಿಮಾ ಬಿಡುಗಡೆಯ ಕಾವು ಕಡಿಮೆ ಇತ್ತು. ವಾರಕ್ಕೆ ಎರಡೋ, ಮೂರೋ ಚಿತ್ರಗಳಷ್ಟೇ ಬಿಡುಗಡೆಯಾಗುತ್ತಿದ್ದವು. ಆದರೆ, ಇತ್ತೀಚಿನ ಎರಡು ವಾರಗಳಿಂದ ಚಿತ್ರ ಬಿಡುಗಡೆಯ ಭರಾಟೆ ಜೋರಾಗಿದೆ.

Advertisement

ಕಳೆದ ವಾರ ಆರು ಸಿನಿಮಾ ತೆರೆಕಂಡಿತ್ತು. ಈ ವಾರದ ಪಟ್ಟಿ ನೋಡಿದರೆ ಅದನ್ನು ಮೀರಿಸುವಂತಿದೆ. ಬರೋಬ್ಬರಿ 9 ಸಿನಿಮಾಗಳು ಈ ವಾರ ತೆರೆಕಾಣುತ್ತಿವೆ. ಈ ಮೂಲಕ ಮತ್ತೂಮ್ಮೆ ಗಾಂಧಿನಗರದಲ್ಲಿ ಸಿನಿಸ್ಪರ್ಧೆ ಏರ್ಪಟ್ಟಿದೆ. ಮಾರ್ಚ್‌ ಕೊನೆಯ ವಾರದಲ್ಲಿ ಒಂಭತ್ತು ಸಿನಿಮಾಗಳು ತಮ್ಮ ಅದೃಷ್ಟ ಪರೀಕ್ಷೆಯನ್ನು ಘೋಷಿಸಿಕೊಂಡಿವೆ.

“ಪಂಚತಂತ್ರ’, “ಧರ್ಮಪುರಿ’, “ಧರ್ಮಸ್ಯ’, “ಗಂಧದ ಕುಡಿ’, “ಹನಿಗಳು’, “ಲಂಡನ್‌ನಲ್ಲಿ ಲಂಬೋದರ’, “ರವಿ ಹಿಸ್ಟರಿ’, “ರಣರಣಕ’ ಹಾಗೂ “ರಗಡ್‌’ ಚಿತ್ರಗಳು ಈ ವಾರ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿವೆ. ಕೊನೆ ಕ್ಷಣದಲ್ಲಿ ಯಾವ ಚಿತ್ರ ತನ್ನ ಬಿಡುಗಡೆಯನ್ನು ಹಿಂಪಡೆಯುತ್ತದೋ ಕಾದು ನೋಡಬೇಕು.

ಈ ವಾರ ತೆರೆಕಾಣುತ್ತಿರುವ ಒಂಭತ್ತು ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ನಿಮಗೆ ವಿಭಿನ್ನ ಜಾನರ್‌ಗಳು ಕಾಣಸಿಗುತ್ತವೆ. ಮುಖ್ಯವಾಗಿ ಯೋಗರಾಜ್‌ ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಅದಕ್ಕೆ ಕಾರಣ ಚಿತ್ರದ ಕಥೆ ಹಾಗೂ ಹಿಟ್‌ ಆಗಿರುವ ಹಾಡುಗಳು.

ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿವೆ. ಅದರ ಜೊತೆಗೆ ಭಟ್ಟರು ಈ ಬಾರಿ ಜನರೇಶನ್‌ ಗ್ಯಾಪ್‌ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಜೊತೆಗೆ ಹೊಸ ಕಲಾವಿದರು. ಈ ಎಲ್ಲಾ ಕಾರಣಗಳಿದ “ಪಂಚತಂತ್ರ’ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ. ಉಳಿದಂತೆ ಹೊಸಬರ “ಲಂಡನ್‌ನಲ್ಲಿ ಲಂಬೋದರ’ ಚಿತ್ರದ ಟ್ರೇಲರ್‌ ಗಮನ ಸೆಳೆಯುತ್ತಿದೆ.

Advertisement

ಬೆಂಗಳೂರಿನಿಂದ ಲಂಡನ್‌ಗೆ ಹೋದ ಯುವಕನೊಬ್ಬನ ಪರದಾಟದ ಕಥೆಯನ್ನು ಇಲ್ಲಿ ಹೇಳಲಾಗಿದೆ. ಈ ಚಿತ್ರದಲ್ಲಿ ಸಂತೋಷ್‌ ನಾಯಕರಾಗಿ ನಟಿಸಿದ್ದಾರೆ. ಏನಾದರೂ ಸಾಧಿಸಬೇಕೆಂದು ಲಂಡನ್‌ಗೆ ಹೋಗಿ ಅಲ್ಲಿ ಪರದಾಡುವ ಸ್ಥಿತಿಯ ಸುತ್ತ ಇವರ ಪಾತ್ರ ಸಾಗುತ್ತದೆಯಂತೆ. ಚಿತ್ರದಲ್ಲಿ ಶೃತಿ ಪ್ರಕಾಶ್‌ ನಾಯಕಿ.

ಅವರಿಲ್ಲಿ ಕನ್ನಡ, ಕರ್ನಾಟಕವನ್ನು ಪ್ರೀತಿಸುವ ಪ್ರತಿಭಾವಂತ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಮಧುಚಂದ್ರ ನಿರ್ದೇಶನದ “ರವಿ ಹಿಸ್ಟರಿ’ಯಲ್ಲಿ ಸಾಮಾನ್ಯ ಹುಡುಗನ ಹಿಸ್ಟರಿ ಕುರಿತಾದ ಚಿತ್ರ. ಆ ರವಿ ಯಾರು, ಏನೆಲ್ಲಾ ಮಾಡ್ತಾನೆ, ಅವನ ಹಿಸ್ಟರಿ ಇತ್ಯಾದಿ ಕುರಿತು ತಿಳಿಯಬೇಕೆಂದರೆ, ಚಿತ್ರ ಬಿಡುಗಡೆವರೆಗೂ ಕಾಯಬೇಕು.

ಉಳಿದಂತೆ “ಗಂಧದ ಕುಡಿ’ ಮಕ್ಕಳ ಚಿತ್ರವಾದರೆ, ವಿನೋದ್‌ ಪ್ರಭಾಕರ್‌ ಅವರ “ರಗಡ್‌’ ಹಾಗೂ ವಿಜಯರಾಘವೇಂದ್ರ ನಟನೆಯ “ಧರ್ಮಸ್ಯ’ ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾ. ಮೊದಲ ಬಾರಿಗೆ ವಿಜಯರಾಘವೇಂದ್ರ “ಧರ್ಮಸ್ಯ’ದಲ್ಲಿ ಆ್ಯಕ್ಷನ್‌ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲಾ ಓಕೆ, ಈ ಎಲ್ಲಾ ಚಿತ್ರಗಳಿಗೆ ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರಗಳು ಸಿಗುತ್ತಾ ಎಂಬ ಪ್ರಶ್ನೆ ಬರಬಹುದು.

ಖಂಡಿತಾ ಇಲ್ಲ, ಏಕೆಂದರೆ ಕಳೆದ ವಾರ ತೆರೆಕಂಡಿರುವ ಚಿತ್ರಗಳು ಚಿತ್ರಮಂದಿರದಲ್ಲಿವೆ. ಹಾಗಾಗಿ, ಎಲ್ಲಾ ಚಿತ್ರಗಳಿಗೂ ಸಿಗೋದಿಲ್ಲ. ಆದರೆ, ಈಗಾಗಲೇ ಕೆಲವು ಚಿತ್ರಗಳು ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಹಿಡಿಯುವಲ್ಲಿ ಯಶಸ್ವಿಯಾಗಿವೆ.

ಚುನಾವಣೆ, ಕ್ರಿಕೆಟ್‌ ಎನ್ನುತ್ತಾ ಸಿನಿಮಾ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಾ ಹೋದರೆ ಕಷ್ಟ ಎಂಬ ಲೆಕ್ಕಾಚಾರಕ್ಕೆ ಬಂದ ಚಿತ್ರತಂಡಗಳು ಈಗ ಸಿನಿಮಾ ಬಿಡುಗಡೆಗೆ ಮುಂದಾಗಿವೆ. ಸಿನಿಮಾ ಚೆನ್ನಾಗಿದ್ದರೆ ಜನ ನೋಡುತ್ತಾರೆಂಬ ನಂಬಿಕೆ ಅವರದು. ಈ ನಂಬಿಕೆಯೇ ಒಂಭತ್ತು ಸಿನಿಮಾಗಳ ಬಿಡುಗಡೆಗೆ ನಾಂದಿಯಾಡಿವೆ ಎಂದರೆ ತಪ್ಪಲ್ಲ.

Advertisement

Udayavani is now on Telegram. Click here to join our channel and stay updated with the latest news.

Next