ಹೊಸವರ್ಷದ ಆರಂಭದ ಮೊದಲ ಶುಕ್ರವಾರವಾಗಿರುವ ಇಂದು (ಜ.6) ಕನ್ನಡದಲ್ಲಿ ಒಂಬತ್ತು ಸಿನಿಮಾಗಳು ತೆರೆ ಕಾಣುತ್ತಿವೆ. ಹಾರರ್, ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್, ಲವ್, ರೊಮ್ಯಾಂಟಿಕ್ ಹೀಗೆ ಬೇರೆ ಬೇರೆ ಜಾನರ್‌ನ ವಿಭಿನ್ನ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಬರುತ್ತಿರುವುದರಿಂದ, ತಮ್ಮ ಅಭಿರು ಚಿಗೆ ತಕ್ಕಂತ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಆಯ್ಕೆ ಪ್ರೇಕ್ಷಕರ ಮುಂದಿದೆ. ಸದ್ಯ ಇಂದು ತೆರೆಗೆ ಬರುತ್ತಿರುವ ಸಿನಿಮಾಗಳ ಒಂದಷ್ಟು ಹೈಲೈಟ್ಸ್ ಇಲ್ಲಿದೆ.
ಈಗಾಗಲೇ ತನ್ನ ಟೈಟಲ್, ಟೀಸರ್ ಮತ್ತು ಟ್ರೇಲರ್ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿರುವ “ಸ್ಫೂಕಿ ಕಾಲೇಜ್’ ಇಂದು ರಾಜ್ಯಾದ್ಯಂತ ಸುಮಾರು 80ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ. “ರಂಗಿ ತರಂಗ’, “ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ನಿರ್ಮಾಪಕ ಹೆಚ್.ಕೆ ಪ್ರಕಾಶ್ “ಶ್ರೀದೇವಿ ಎಂಟರ್‌ಟೈನರ್’ ಬ್ಯಾನರ್‌ನಲ್ಲಿ ನಿರ್ಮಿಸಿರುವ ಈ ಚಿತ್ರಕ್ಕೆ ಭರತ್ ಜಿ. ನಿರ್ದೇಶನವಿದೆ. ಸೈಕಾಲಜಿಕಲ್ ಹಾರರ್ ಥ್ರಿಲ್ಲರ್ ಶೈಲಿಯ “ಸ್ಫೂಕಿ ಕಾಲೇಜ್’ ಸಿನಿಮಾದಲ್ಲಿ ಖುಷಿ ರವಿ, ವಿವೇಕ್ ಸಿಂಹ, ಶ್ರೀಧರ್, ಅಜೇಯ್ ಪೃಥ್ವಿ, ಶರಣ್ಯಾ ಶೆಟ್ಟಿ, ರಘು ರಾಮನಕೊಪ್ಪ, ವಿಜಯ್ ಚೆಂಡೂರ್, ಅಶ್ವಿನ್ ಹಾಸನ್ ಮೊದಲಾದ ಕಲಾವಿದರ ಬೃಹತ್ ತಾರಾಗಣವಿದೆ.
“ಸೃಜನ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ವೆಂಕಟೇಶ್ವರ ರಾವ್ ನಿರ್ಮಿಸಿರುವ, ರಾಜೇಶ್ ಧ್ರುವ ನಿರ್ದೇಶನದ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಈ ವಾರ 70ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ. ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತರಾವ್, ಸಂಪತ್ ಜೆ. ರಾಮ್, ಶುಭಲಕ್ಷ್ಮೀ, ನಕುಲ್‌ಶರ್ಮ, ರಕ್ಷಿತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾದ ಟ್ರೇಲರ್, ಹಾಡುಗಳು ಒಂದಷ್ಟು ಗಮನ ಸೆಳೆಯುತ್ತಿದ್ದು, ಸಸ್ಪೆನ್ಸ್-ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಫೋಟೋಗ್ರಫರ್ ಒಬ್ಬನ ಜೀವನದಲ್ಲಿ ನಡೆಯುವ ಏರಿಳಿತಗಳನ್ನು ತೆರೆಮೇಲೆ ಹೇಳಲಾಗಿದೆ.
ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಥಗ್ಸ್ ಆಫ್ ರಾಮಗಡ’ ಸಿನಿಮಾ ಸುಮಾರು 50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬರುತ್ತಿದೆ. ಉತ್ತರ ಕರ್ನಾಟಕದ ನೈಜ ಘಟನೆ ಆಧಾರಿತ ಎಂದು ಹೇಳಲಾದ “ಥಗ್ಸ್ ಆಫ್ ರಾಮಗಡ’ ಸಿನಿಮಾದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ರಾಘವೇಂದ್ರ, ವಿಶಾಲ್ ಪಾಟೀಲ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಭಾರತ್ ಟಾಕೀಸ್’ ಬ್ಯಾನರ್‌ನಲ್ಲಿ ನಿರ್ಮಾಣ ವಾಗಿರುವ ಈ ಸಿನಿಮಾಕ್ಕೆ ಕಾರ್ತಿಕ್ ಮಾರಲಬಾವಿ ನಿರ್ದೇಶನವಿದೆ.
“ವಿಜಯಲಕ್ಷ್ಮೀ ಕಂಬೈನ್ಸ್’ ಬ್ಯಾನರಿನಲ್ಲಿ ಡಾ. ಶಿವಪ್ಪ ನಿರ್ಮಿಸಿರುವ “ಕಾಕ್ಟೆಲ್’ ಸಿನಿಮಾ ಈ ವಾರ ಸುಮಾರು 50ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆ ಕಾಣುತ್ತಿದೆ. ಯುವ ಪ್ರತಿಭೆ ವೀರೇನ್ ಕೇಶವ್ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾದಲ್ಲಿ ಚರಿಷ್ಮಾ ನಾಯಕಿಯಾಗಿದ್ದಾರೆ. ಉಳಿದಂತೆ ಶಿವಮಣಿ, ರಮೇಶ್ ಪಂಡಿತ್, ಚಂದ್ರಕಲಾ, ಮೋಹನ್, ಕರಿಸುಬ್ಬು, ಚಂದ್ರಕಲಾ ಮೋಹನ್, ಶೋಭರಾಜ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ರೊಮ್ಯಾಂಟಿಕ್ ಕಂ ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಸಿನಿಮಾಕ್ಕೆ ಶ್ರೀರಾಮ್ ನಿರ್ದೇಶನವಿದೆ.
ಉಳಿದಂತೆ ಬೇಗಾರ್ ರಮೇಶ್ ನಿರ್ದೇಶನದ ಕಾದಂಬರಿ ಆಧಾರಿತ “ವೈಶಂಪಾಯನ ತೀರ’, ಪ್ರಿಯಾಂಕಾ ಉಪೇಂದ್ರ ಅಭಿನಯದ “ಮಿಸ್. ನಂದಿನಿ’, ಡಾರ್ಲಿಂಗ್ ಕೃಷ್ಣ ಅಭಿನಯದ “ಮಿ. ಬ್ಯಾಚುಲರ್’, ಭರತ್ ಭೋಪಣ್ಣ ಅಭಿನಯದ “ಮರೆಯದೇ ಕ್ಷಮಿಸು’ ಮತ್ತು ಬಹುತೇಕ ಬಾಲ ಪ್ರತಿಭೆಗಳೇ ಅಭಿನಯಿಸಿರುವ “ಸದ್ಗುರು’ ಸಿನಿಮಾಗಳು ಈ ವಾರ ಬಿಡುಗಡೆಯಾಗಿ ಥಿಯೇಟರ್‌ಗೆ ಬರುತ್ತಿವೆ. ಇಷ್ಟೊಂದು ವೆರೈಟಿ ಸಿನಿಮಾಗಳ ಪೈಕಿ ಪ್ರೇಕ್ಷಕ ಪ್ರಭುಗಳು ಯಾವ ಸಿನಿಮಾಕ್ಕೆ ಗೆಲುವಿನ ಮಾಲೆ ತೊಡಿಸುತ್ತಾರೆ ಎಂಬುದು ವಾರಾಂತ್ಯದಲ್ಲಿ ಗೊತ್ತಾಗಲಿದೆ.