Advertisement

ಎರಡನೇ ತರಗತಿವರೆಗೂ ಒಂಬತ್ತೇ ಮಕ್ಕಳು!

09:01 AM Jul 29, 2019 | Suhan S |

ಲಕ್ಷ್ಮೇಶ್ವರ: ಒಂದನೇ ತರಗತಿಗೆ 2 ಮಕ್ಕಳು, ಎರಡನೇ ತರಗತಿಗೆ 7 ಮಕ್ಕಳು, 3, 4 ಮತ್ತು 5ನೇ ತರಗತಿಗೆ ಮಕ್ಕಳ ದಾಖಲಾತಿಯೇ ಆಗಿಲ್ಲ. ಒಟ್ಟು ಕೇವಲ 9 ವಿದ್ಯಾರ್ಥಿಗಳಿಗೆ ಇಬ್ಬರು ಶಿಕ್ಷಕರಿಂದ ಪಾಠಬೋಧನೆ.

Advertisement

ಹೌದು, ಇದು ಪಟ್ಟಣದ ರಂಭಾಪುರಿ ನಗರದಲ್ಲಿರುವ ಶ್ರೀ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸ್ಥಿತಿ.

ಮಕ್ಕಳ ಸಂಖ್ಯೆ ಹೆಚ್ಚಿದಂತೆ ಶಿಕ್ಷಣ ಸಂಸ್ಥೆಗಳು ತಲೆ ಎತ್ತುವುದು ಸಹಜ. ಅದರಂತೆ ರಂಭಾಪುರಿ ನಗರ ಮತ್ತು ಸಮೀಪದ ನೂಲಿನ ಗಿರಣಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ 2008ರಲ್ಲಿ ಈ ಶಾಲೆ ಪ್ರಾರಂಭಿಸಲಾಯಿತು. ಶಾಲೆಗೆ ನೂಲಿನ ಗಿರಣಿಯ ಆಡಳಿತ ಮಂಡಳಿಯವರು ಸುಮಾರು 2 ಎಕರೆ ಜಮೀನು ದಾನವಾಗಿ ನೀಡಿದ್ದಾರೆ. ಇದೇ ನಿವೇಶನದಲ್ಲಿ ಶಿಕ್ಷಣ ಇಲಾಖೆ ಅನುದಾನದಿಂದ ಕಾಂಪೌಂಡ್‌ ಸಹಿತ 2 ಕೊಠಡಿ, ಒಂದು ಕಾರ್ಯಾಲಯ ಮತ್ತು ಶೌಚಗೃಹ ಹೊಂದಿದ ಶಾಲಾ ಕಟ್ಟಡ ನಿರ್ಮಿಸಲಾಗಿದೆ.

ಮಕ್ಕಳ ಸಂಖ್ಯೆ ಕಡಿಮೆ: ವಿಶಾಲ ಮೈದಾನ, ಸುಂದರ ಪರಿಸರ, ಕಲಿಕಾ ವಾತಾವರಣ ಎಲ್ಲವೂ ಇದೆ. ಆದರೆ ಕಳೆದ 11 ವರ್ಷಗಳಿಂದಲೂ ಈ ಶಾಲೆ ಮಕ್ಕಳ ಸಂಖ್ಯೆ ಆರಕ್ಕೇರದೇ ಮೂರಕ್ಕಿಳಿಯದೇ ಕುಂಟುತ್ತ ಸಾಗುತ್ತಿರುವುದು ನೋವಿನ ಸಂಗತಿ.

ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಸ್ವಾಭಾವಿಕವಾಗಿ ಪಾಲಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ಸೇರಿಸುತ್ತಿದ್ದಾರೆ. ಮಕ್ಕಳ ಸಂಖ್ಯೆ ತೀರ ಕಡಿಮೆ ಇರುವುದರಿಂದ ಶಾಲೆ ಮಕ್ಕಳಿಗೆ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-4ರಿಂದ ಬಿಸಿಯೂಟ ತರಲಾಗುತ್ತದೆ. ಅಲ್ಲದೇ ನಂ-4ರ ಶಾಲೆಯು ಉನ್ನತೀಕರಣಗೊಂಡು 8ನೇ ವರ್ಗದವರೆಗೂ ಶಿಕ್ಷಣ ನೀಡುತ್ತಿದ್ದರಿಂದ ಈ ಭಾಗದ ಪಾಲಕರೂ ತಮ್ಮ ಮಕ್ಕಳನ್ನು ಇದೇ ಶಾಲೆಗೆ ಕಳುಹಿಸುತ್ತಿದ್ದಾರೆ.

Advertisement

ಇದರಿಂದಾಗಿ ರಂಭಾಪುರಿ ನಗರದ ಶಾಲೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಇದು ಹೀಗೆಯೇ ಮುಂದುವರಿದರೆ ಇಂದಲ್ಲ ನಾಳೆ ಈ ಶಾಲೆಯನ್ನು ಸಮೀಪದ ಶಾಲೆಯಲ್ಲಿ ವಿಲೀನಗೊಳಿಸಿ ಸರ್ಕಾರ ಕೈ ತೊಳೆದುಕೊಂಡರೆ ಅಚ್ಚರಿ ಪಡಬೇಕಿಲ್ಲ. ಆದ್ದರಿಂದ ಶಾಲೆಯ ಎಸ್‌ಡಿಎಂಸಿ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ, ಶಿಕ್ಷಕರು, ಈ ಭಾಗದ ನಿವಾಸಿಗಳು, ಜನಪ್ರತಿನಿಧಿಗಳು ಹಾಗೂ ಕನ್ನಡಪರ ಸಂಘಟನೆಗಳು ಎಚ್ಚೆತ್ತುಕೊಳ್ಳದಿದ್ದರೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ರಂಭಾಪುರಿ ನಗರದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳ ಸಂಖ್ಯೆ ಹೆಚ್ಚಿಸಲು ಶಿಕ್ಷಕರು, ಎಸ್‌ಡಿಎಂಸಿ ಸೇರಿ ಪಾಲಕರ ಮನವೊಲಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಈ ಭಾಗದ ಪಾಲಕರು ಮಾತ್ರ ಸ್ವಲ್ಪ ದೂರವಾದರೂ ಸರಿ 1ರಿಂದ 8 ನೇ ತರಗತಿವರೆಗೆ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.•ವಿ.ವಿ. ಸಾಲಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next