“ನೀವು ಕಥೆ ಮಾಡ್ತೀರಾ?’ ಅಂತ ಕೇಳಿದರಂತೆ ಸತೀಶ್. ಹೂಂ ಎನ್ನುವುದಷ್ಟೇ ಅಲ್ಲ, ಕಥೆಯನ್ನೂ ಹೇಳಿದ್ದಾರೆ ಐಶಾನಿ ಶೆಟ್ಟಿ. ಅದು ಇಷ್ಟವಾಗಿದ್ದೇ ತಡ, ಐಶಾನಿ ನಿರ್ದೇಶನದಲ್ಲಿ “ಕಾಜಿ’ ಎಂಬ ಚಿತ್ರ ನಿರ್ಮಿಸುವುದಕ್ಕೆ ಸತೀಶ್ ಮುಂದಾಗಿದ್ದಾರೆ. ಆ ಚಿತ್ರಕ್ಕೆ ಇತ್ತೀಚೆಗೆ ಫಾಲ್ಕೆ ಅಕಾಡೆಮಿಯ ಪ್ರಶಸ್ತಿ ಸಹ ಸಿಕ್ಕಿದ್ದು, ಇತ್ತೀಚೆಗೆ ತಮ್ಮ ತಂಡದೊಂದಿಗೆ ಬಂದು, ಆ ಚಿತ್ರವನ್ನು ತೋರಿಸಿದರು ಸತೀಶ್.
“ಚೌಕ-ಬಾರ’ ನಂತರ ಸತೀಶ್ ನಿರ್ಮಿಸುತ್ತಿರುವ ಎರಡನೆಯ ಕಿರುಚಿತ್ರ ಇದು. ಹೊಸಬರಿಗೆ ಅವಕಾಶ ಕಲ್ಪಿಸಬೇಕು ಎಂಬ ಕಾರಣಕ್ಕೆ ಈ ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ ಸತೀಶ್. ಜೊತೆಗೆ ಕಥೆಯೂ ಚೆನ್ನಾಗಿದ್ದರಿಂದ, ಅವರು ಈ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಚಿತ್ರಕ್ಕೆ ದುಡಿದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರನ್ನು ಪ್ರಶಂಸಿಸುವ ಜೊತೆಗೆ, ಎಲ್ಲರ ಸಹಕಾರವನ್ನೂ ಸತೀಶ್ ನೆನೆದರು. “ಈ ಚಿತ್ರಕ್ಕೆ ದುಡಿದ ಯಾರೂ ಒಂದು ರೂಪಾಯಿ ಸಹ ತೆಗೆದುಕೊಂಡಿಲ್ಲ. ಎಲ್ಲರೂ ಸಂಪೂರ್ಣ ಸಹಕರಿಸಿದ್ದಾರೆ’ ಎಂದರು ಸತೀಶ್.
ನಂತರ ಮಾತನಾಡಿದ ಐಶಾನಿ, “ನನಗೆ ಈ ಕಥೆ ಬರೆಯೋಕೆ ಕಾರಣ, ಕೆಲವು ನೈಜ ಘಟನೆಗಳು. ಉತ್ತರ ಕರ್ನಾಟಕದಲ್ಲಿ ನಾನು ನೋಡಿದ ಘಟನೆ ಚುಚುತ್ತಲೇ ಇತ್ತು. ಅದನ್ನೊಂದು ಕಥೆ ಮಾಡಿದ್ದೆ. ಚಿತ್ರ ಮಾಡೋಕೆ ಆಸೆ ಇತ್ತಾದರೂ, ಯಾರು ಈ ಚಿತ್ರ ನಿರ್ಮಿಸುವುದಕ್ಕೆ ಮುಂದೆ ಬರುತ್ತಾರೆ ಅಂತ ಗೊತ್ತಿರಲಿಲ್ಲ. ಒಮ್ಮೆ ಸತೀಶ್‌ಗೆ ಹೇಳಿದೆ. ಅವರಿಗೆ ಇಷ್ಟವಾಗಿ, ಒಂದು ತಂಡ ಕೊಟ್ಟರು. ಆ ತಂಡ ಇಲ್ಲದಿದ್ದರೆ ಈ ಚಿತ್ರ ಆಗುತ್ತಿರಲಿಲ್ಲ’ ಎನ್ನುತ್ತಾರೆ ಐಶಾನಿ.
ಈ ಚಿತ್ರದಲ್ಲಿ ಸಿಹಿಕಹಿ ಚಂದ್ರು ಮಗಳು ಹಿತ ನಟಿಸಿದ್ದಾರೆ. ಕಥೆ ಕೇಳಿದ ತಕ್ಷಣವೇ, ಈ ಚಿತ್ರದಲ್ಲಿ ನಟಿಸಬೇಕು ಅಂತ ಅವರಿಗನ್ನಿಸಿತಂತೆ. ಹಾಗಾಗಿ ಡಿಗ್ಲಾಮರ್ ಪಾತ್ರವಾದರೂ, ಒಂದು ಮಗುವಿನ ತಾಯಿಯ ಪಾತ್ರವಾದರೂ ಅವರು ಒಪ್ಪಿಕೊಂಡರಂತೆ. “ನನಗೆ ಸ್ವಲ್ಪ ಕಷ್ಟವಾಗಿದ್ದು ಮಂಡ್ಯ ಭಾಷೆ. ಇದುವರೆಗೂ ಕೇಳಿದ್ದೇ ಹೊರತು, ಮಾತನಾಡಿರಲಿಲ್ಲ. ಹಾಗಾಗಿ ಸ್ವಲ್ಪ ಭಯ ಇತ್ತು. ಆದರೆ, ಸತೀಶ್ ಬಹಳ ಸಹಾಯ ಮಾಡಿದರು’ ಎಂದರು ಹಿತ.
ಅಂದು ಚಿತ್ರಕ್ಕೆ ಸಂಗೀತ ಸಂಯೋಜಿಸಿರುವ ಮಿಥುನ್ ಮುಕುಂದನ್, ಛಾಯಾಗ್ರಹಣ ಮಾಡಿರುವ ಪ್ರವೀಣ್ ತೆಗ್ಗಿನಮನೆ, ಸೌಂಡ್ ಡಿಸೈನ್ ಮಾಡಿರುವ ಹರಿ, ಮಾಸ್ಟರ್ ಸುಬ್ಬಣ್ಣ ಮುಂತಾದವರಿದ್ದರು.