Advertisement

ನಿಮ್ಹಾನ್ಸ್‌ ಅಂದ್ರೆ ನಗೆಪಾಟಲಲ್ಲ!

12:37 PM Oct 23, 2018 | |

ಬೆಂಗಳೂರು: ಸಾರ್ವಜನಿಕರು ತನ್ನ ಬಗ್ಗೆ ಹೊಂದಿರುವ ಅಪನಂಬಿಕೆ, ತನ್ನ ಮೇಲೆ ಹೊರಿಸಿರುವ ಕಳಂಕಗಳನ್ನೆಲ್ಲಾ ತೊಡೆದುಹಾಕಿ, ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ “ವಾಕಿಂಗ್‌ ಟೂರ್‌ ಆಫ್ ನಿಮ್ಹಾನ್ಸ್‌’ ಎಂಬ ವಿಶೇಷ ಅಭಿಯಾನ ಒಂದನ್ನು ನಿಮ್ಹಾನ್ಸ್‌ ಸಂಸ್ಥೆ ಆರಂಭಿಸಿದೆ. ಅದರ ಮೊದಲ ಪ್ರವಾಸ ಅ.27ರಂದು ನಡೆಯಲಿದೆ.

Advertisement

ಮಾನಸಿಕ ಚಿಕಿತ್ಸಾ ಕೇಂದ್ರ ಎಂದರೆ ಜನರಲ್ಲಿ ಭಯ ಅಥವಾ ತಮಾಷೆ ರೀತಿಯ ಭಿನ್ನ, ತಾತ್ಸಾರ ಭಾವನೆಗಳಿವೆ. ಅಲ್ಲಿನ ರೋಗಿಗಳನ್ನಷ್ಟೇ ಅಲ್ಲ, ವೈದ್ಯರನ್ನೂ ಜನ ವಿಚಿತ್ರ ಭಾವದಿಂದಲೇ ನೋಡುತ್ತಾರೆ. ಇತ್ತೀಚೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್‌) “ಮಾನಸಿಕ ರೋಗಿಗಳ ಚಿಕಿತ್ಸಾ ಕೇಂದ್ರದ ಕುರಿತು ಜನರ ಅಭಿಪ್ರಾಯ’ ಎಂಬ ಸಂಶೋಧನೆ ಕೈಗೊಂಡಿತ್ತು.

ಮಾನಸಿಕ ರೋಗಿಗಳ ಆಸ್ಪತ್ರೆ ಕುರಿತು ಜನರು ಸಾಕಷ್ಟು ತಪ್ಪು ಕಲ್ಪನೆಗಳನ್ನು ಹೊಂದಿರುವುದು ಸಂಶೋಧನೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಜನರಿಗೆ ಜಾಗೃತಿ ಮೂಡಿಸಲು ನಿರ್ಧರಿಸಿದ ಸಂಸ್ಥೆಯ ವೈದ್ಯರು, ಈ ವಿಶೇಷ ಅಭಿಯಾನ ಹಮ್ಮಿಕೊಂಡಿದ್ದಾರೆ.

ನಿಮ್ಹಾನ್ಸ್‌ ಸುತ್ತಾಡಲು ಬನ್ನಿ: ಈ ಅಭಿಯಾನದ ಅಡಿಯಲ್ಲಿ ಒಂದು ದಿನದ ಮಟ್ಟಿಗೆ ನಿಮ್ಹಾನ್ಸ್‌ ಆಸ್ಪತ್ರೆಯ ಆವರಣವನ್ನು ಒಂದು ಸುತ್ತಲು ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. “ಹುಚ್ಚರ ಆಸ್ಪತ್ರೆ’ ಎಂದರೆ ಅದೊಂದು ಕತ್ತಲ ಕೋಣೆಯಲ್ಲ. ಇಲ್ಲಿ ಎಲ್ಲಾ ರೋಗಿಗಳಿಗೆ ಶಾಕ್‌ ಟ್ರೀಟ್‌ಮೆಂಟ್‌ ಕೊಡುವುದಿಲ್ಲ. ಮಾನಸಿಕ ರೋಗಿಗಳು ಸಾಮಾನ್ಯರಂತೆ ಸ್ವತಂತ್ರವಾಗಿ ಓಡಾಡಿಕೊಂಡು ಇರುತ್ತಾರೆ ಎಂಬ ಅಂಶವನ್ನು ಮನದಟ್ಟು ಮಾಡಿಕೊಡಲು ಒಟ್ಟು 300 ಎಕರೆ ವಿಸ್ತೀರ್ಣದ ಆಸ್ಪತ್ರೆಯನ್ನು ತೋರಿಸಲಾಗುತ್ತದೆ.

ಆಸ್ಪತ್ರೆಯ ಸುಸಜ್ಜಿತ ಕಟ್ಟಡ, 26 ಚಿಕಿತ್ಸಾ ವಿಭಾಗಗಳು, ಸಾಮಾನ್ಯ ಆಸ್ಪತ್ರೆಗಳಲ್ಲಿರುವಂತ ವಾರ್ಡ್‌ಗಳು ಜತೆಗೆ ಆಸ್ಪತ್ರೆ ಸೌಂದರ್ಯ ಹೆಚ್ಚಿಸಿರುವ ಬ್ರಿಟೀಷರ ಕಾಲದ ನೊರೋನಾ ಉದ್ಯಾನ, ಇಲ್ಲಿ ಸಾಕಲಾಗಿರುವ ವಿವಿಧ ಪ್ರಭೇದಗಳ ಪ್ರಾಣಿ, ಪಕ್ಷಿಗಳನ್ನು ತೋರಿಸಲಾಗುವುದು. ಆಸ್ಪತ್ರೆಯ ಅತ್ಯಮೂಲ್ಯ ಸಂಶೋಧನೆಗಳು, ಆಸ್ಪತ್ರೆಯ ಇತಿಹಾಸದ ಕುರಿತು ಸಿನಿಮಾ, ಕಲಾ ಕೇಂದ್ರಗಳ ಭೇಟಿ ಸೇರಿದಂತೆ ಸಂಪೂರ್ಣ ಮಾಹಿತಿ ನೀಡಿ ಭೇಟಿಕೊಟ್ಟವರ ಅಪನಂಬಿಕೆಗಳನ್ನು ದೂರವಾಗಿಸುವ ಪ್ರಯತ್ನ ಮಾಡಲಾಗುದು ಎಂದು ಮಾನಸಿಕ ಆರೋಗ್ಯ ಶಿಕ್ಷಣ ವಿಭಾಗದ ಪೊ›.ಕೆ.ಎಸ್‌.ಮೀನಾ ತಿಳಿಸಿದರು.

Advertisement

ಹೆಸರು ನೋಂದಣಿಗೆ 100 ರೂ.: ಈ ಅಭಿಯಾನದಲ್ಲಿ ಭಾಗವಹಿಸಿ ಆಸ್ಪತ್ರೆಯನ್ನು ನೋಡಲು 100 ರೂ. ನೀಡಿ ಇ-ಮೇಲ್‌ ಮೂಲಕ ನೋಂದಣಿ ಮಾಡಿಕೊಳ್ಳಬೇಕು. ಅ.27ರಂದು ನಡೆಯಲಿರು ಅಭಿಯಾನದ ಮೊದಲ ಪ್ರವಾಸಕ್ಕೆ 200ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ. ಆ ಪೈಕಿ ಮೊದಲ ಬಾರಿ 50 ಜನರಿಗೆ ಅವಕಾಶ ಮಾಡಿಕೊಡಲಾಗುತ್ತಿದ್ದು, ಬೆಳಗ್ಗೆ 9.30 ಹಾಗೂ 10.30ಕ್ಕೆ ಎರಡು ತಂಡಗಳಲ್ಲಿ ಆಸ್ಪತ್ರೆ ತೋರಿಸಲಾಗುತ್ತದೆ. ಮುಂದುವರಿದಂತೆ ವಾರಕ್ಕೆ ಒಮ್ಮೆ ಅಥವಾ ತಿಂಗಳಿಗೆ ಎರಡು ಬಾರಿ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ಆಸ್ಪತ್ರೆ ತೋರಿಸಲಾಗುವುದು ಎಂದು ನಿಮ್ಹಾನ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಹೆಸರು ನೋಂದಾಯಿಸಲು…: meenaksiyer@gmail.comಗೆ ಇ-ಮೇಲ್‌ ಮಾಡುವ ಮೂಲಕ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ 080 -26995157 ಸಂಪರ್ಕಿಸಬಹುದು.

ಬುದ್ಧಿಮಾಂದ್ಯ ಮಕ್ಕಳ ಕೆಫೆಯಲ್ಲಿ ಆತಿಥ್ಯ: ಅಭಿಯಾನದಡಿ ಸುತ್ತಾಟಕ್ಕೆ ಆಗಮಿಸುವ ಸಾರ್ವಜನಿಕರಿಗೆ ನಿಮ್ಹಾನ್ಸ್‌ನಲ್ಲಿರುವ ಬುದ್ಧಿಮಾಂದ್ಯ ಮಕ್ಕಳೇ ಮಾರ್ಗದರ್ಶಕರ ಸಹಾಯದಿಂದ ನಡೆಸುವ ಕೆಫೆಯಲ್ಲಿ ಆಥಿತ್ಯ ನೀಡುವ ವ್ಯವಸ್ಥೆ ಮಾಡಲಾಗಿದೆ. ಮಕ್ಕಳು ಸಿದ್ಧಪಡಿಸುವ ವಿವಿಧ ಬಗೆಯ ಕೇಕ್‌, ಬಿಸ್ಕೇಟ್‌, ಬ್ರೆಡ್‌ಗಳು, ಜ್ಯೂಸ್‌ಗಳು ಲಭ್ಯವಿರುತ್ತವೆ. ನೋಂದಣಿ ಶುಲ್ಕ ಪಡೆದಿರುವುದರಿಂದ ಒಂದಿಷ್ಟು ತಿನಿಸು ಹಾಗೂ ಕಾಫಿಯನ್ನು ಉಚಿತವಾಗಿ ನೀಡಲಾಗುವುದು. ಜತೆಗೆ ಮಕ್ಕಳು ತಮ್ಮ ಕೈಯಾರೆ ಮಾಡಿರುವ ಮೇಣದ ಬತ್ತಿ, ಇತರೆ ಕಲಾಕೃತಿಗಳು, ತಿನಿಸುಗಳನ್ನು ಖರೀದಿಸಿ ಮನೆಗೆ ಕೊಂಡೋಯ್ಯಬಹುದು ಎಂದು ನಿಮ್ಹಾನ್ಸ್‌ ವೈದ್ಯರು ತಿಳಿಸಿದ್ದಾರೆ.

ಮಾನಸಿಕ ರೋಗ ಒಂದು ವಿಸ್ಮಯಕಾರಿ ಸಂಗತಿಯಲ್ಲ. ಸಮಾಜ ಬಹಿಷ್ಕರಿಸುತ್ತೆ ಎಂಬ ಭಯವೂ ಬೇಡ. ಎಲ್ಲ ರೋಗಿಗಳಂತೆಯೇ ಇಲ್ಲಿನ ಮಾನಸಿಕ ರೋಗಿಗಳು ಚಿಕಿತ್ಸೆ ಪಡೆದು ಗುಣವಾಗುತ್ತಾರೆ ಎಂಬ ಕಲ್ಪನೆಯನ್ನು ಜನರಲ್ಲಿ ಮೂಡಿಸಲು ಈ ಅಭಿಮಾನ ಹಮ್ಮಿಕೊಂಡಿದ್ದೇವೆ. ಮೊದಲ ಸುತ್ತಾಟ ಯಶಸ್ವಿಯಾದ ಕೂಡಲೇ ಸಾಲು ಸಾಲು ಪ್ರವಾಸಗಳನ್ನು ಆಯೋಜಿಸಲಾಗುವುದು.
-ಡಾ.ಗಂಗಾಧರ್‌, ನಿಮ್ಹಾನ್ಸ್‌ ನಿರ್ದೇಶಕರು

* ಜಯಪ್ರಕಾಶ್‌ ಬಿರಾದಾರ್‌

Advertisement

Udayavani is now on Telegram. Click here to join our channel and stay updated with the latest news.

Next