Advertisement
ರೈತ ದ್ಯಾಮಣ್ಣನವರಿಗೆ ಪುಷ್ಪ ಕೃಷಿಯೇ ಅವರ ಬದುಕು. ಚೆಂಡು, ಗಲಾಟೆ, ಕಾಕಡ ಹೀಗೆ ತನ್ನ ಒಂದೂವರೆ ಎಕರೆಯಲ್ಲಿ ಬೆಳೆಯದ ಹೂವುಗಳೆ ಇಲ್ಲ. ಏನೇ ಬೆಳೆಯುವುದಿದ್ದರೂ ಸಾವಯವ ಪದ್ಧತಿಯನ್ನು ಅನುಸರಿಸಿಕೊಂಡು ಬೆಳೆಯಬೇಕೆನ್ನುವುದು ಅವರ ಯೋಚನೆಯಾಗಿತ್ತು. ಅದರಂತೆ ಕಳೆದ ಮೂರು ವರ್ಷಗಳ ಹಿಂದೆ ತನ್ನ ಒಂದು ಎಕರೆಯಲ್ಲಿ ನಿಂಬೆ ಗಿಡ ನೆಡುವ ಪ್ರಯತ್ನಕ್ಕಿಳಿದರು. ಇದೀಗ ಕುಷ್ಠಗಿ ತಾಲೂಕಿನ ಮದ್ನಾಳದ ದ್ಯಾಮಣ್ಣಹಟ್ಟಿ ನಿಂಬೆಯಿಂದಲೇ ಅತ್ಯಧಿಕ ಆದಾಯವನ್ನು ಪಡೆಯುತ್ತಿದ್ದಾರೆ. ನಿಂಬೆ ಕೃಷಿ ಮಾಡುವುದಕ್ಕೆ ಮುಂಚೆ ಹಲವು ನಿಂಬೆ ತೋಟಗಳಿಗೆ ಭೇಟಿ ಕೊಟ್ಟಿದ್ದರು. ಪ್ರಾರಂಭದಲ್ಲಿಯೇ ಅವರು ನೈಸರ್ಗಿಕ ವಿಧಾನಗಳನ್ನು ಬಳಸಿ ನಿಂಬೆ ಬೆಳೆಯುತ್ತಿದ್ದವರಿಂದ ಪ್ರಭಾವಿತರಾಗಿದ್ದರು. ಅವರಿಂದಲೇ ಮಾರ್ಗದರ್ಶನ ಪಡೆದು ನೆಟ್ಟ 200 ನಿಂಬೆ ಗಿಡಗಳು ಇದೀಗ ಇಳುವರಿಯನ್ನು ನೀಡುತ್ತಿವೆ. ಪುಷ್ಪ ಕೃಷಿಯೊಂದಿಗೆ ನಿಂಬೆಯು ನಿತ್ಯ ಆದಾಯ ನೀಡುತ್ತಿದೆ.
ನಾಟಿಗೆ ಬೇಕಾದ ಗಿಡವನ್ನು ನರ್ಸರಿಯಿಂದ ತಂದು, ಇಪ್ಪತ್ತು ಅಡಿ ಅಂತರ ಬಿಟ್ಟು ಎರಡು ಅಡಿ ಸುತ್ತಳತೆಯ ಗುಂಡಿ ತೆಗೆದು ಗಿಡಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡುವಾಗ ಪ್ರತಿ ಬುಡಕ್ಕೆ ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರವನ್ನು ನೀಡಿದರು. ನಂತರ ವರ್ಷಕ್ಕೊಂದು ಬಾರಿ, ಅಂದರೆ ಜುಲೈ ತಿಂಗಳಲ್ಲಿ ಪ್ರತಿ ಬುಡಕ್ಕೆ ಒಂದು ಬುಟ್ಟಿಯಂತೆ ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಿದ್ದಾರೆ. ನಿಂಬೆ ಬೆಳೆಗೆ ಹೆಚ್ಚು ನೀರಾವರಿಯ ಅಗತ್ಯವಿದೆ. ಅವರು ನೀರಿನ ಖರ್ಚನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರತಿದಿನ ಕೊಟ್ಟಿಗೆ ತೊಳೆದ ನೀರು ಗಿಡಗಳಿಗೆ ಹರಿದು ಬರುವ ವ್ಯವಸ್ಥೆ ಮಾಡಿದ್ದಾರೆ. ವರ್ಷಪೂರ್ತಿ ಹನಿ ನೀರಾವರಿ ವಿಧಾನದ ಮೂಲಕ ಜೀವಾಮೃತವನ್ನು ನೀಡುತ್ತಿದ್ದಾರೆ. ಇದರಿಂದಾಗಿ ಗಿಡಗಳು ಚೆನ್ನಾಗಿ ಬೆಳೆಯುವುದರ ಜೊತೆಗೆ ನೆಟ್ಟು ಎರಡೇ ವರ್ಷಗಳಲ್ಲಿ ಕಾಯಿ ನೀಡಲು ಆರಂಭಿಸಿವೆ. ಮೂರನೇ ವರ್ಷದಿಂದ ಉತ್ತಮ ಫಸಲು ಇವರಿಗೆ ದೊರೆಯುತ್ತಿದೆ. ಸಾವಯವಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತೆ
ನಿಂಬೆ ಗಿಡ ವರ್ಷದುದ್ದಕ್ಕೂ ಕಾಯಿಯನ್ನು ನೀಡುತ್ತದೆ. ಸಾಮಾನ್ಯವಾಗಿ ಒಂದು ಗಿಡ ವರ್ಷಕ್ಕೆ ಎರಡು ಸಾವಿರ ಕಾಯಿಗಳಷ್ಟನ್ನು ನೀಡುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲೇ ಒಂದು ನಿಂಬೆ ಹಣ್ಣಿಗೆ ಒಂದು ರೂಪಾಯಿ ಸಿಗುತ್ತದೆ. ಮೊದಲ ಬೆಳೆಯಲ್ಲೇ ದ್ಯಾಮಣ್ಣನವರು ಹಾಕಿದ್ದ ಬಂಡವಾಳ ಕೈಸೇರಿತ್ತು.
Related Articles
Advertisement
ಸಂಪರ್ಕ: 9731416007 (ದ್ಯಾಮಣ್ಣ ಹಟ್ಟಿ)
– ಚಂದ್ರಹಾಸ ಚಾರ್ಮಾಡಿ