Advertisement

ಅಪಾಯ ಕೈಬೀಸಿ ಕರೆಯುತ್ತಿರುವ ನೀಲೇಶ್ವರ-ಕೋಟಪ್ಪುರ ಕಾಲುಸಂಕ

07:20 AM Jul 28, 2017 | |

ಕಾಸರಗೋಡು: ಯಾವುದೇ ಕ್ಷಣದಲ್ಲಿ ಜೀವಾಹುತಿಗಾಗಿ ಬಾಯ್ದೆರೆದು ನಿಂತಿರುವ ನೀಲೇಶ್ವರ ಕೋಟಪ್ಪುರ- ಮಾಟ್ಟುಮ್ಮಲ್‌- ಕಡಿಞಿ ಮೂಲೆ ಕಾಲುಸಂಕಕ್ಕೆ ಕೊನೆಗೂ ಶಾಪಮೋಕ್ಷ ದೊರಕುವ ಸಮಯ ಹತ್ತಿರ ಬಂದಂತಾಗಿದೆ.

Advertisement

ಹಲವು ದಶಕಗಳಿಂದ ದುರಸ್ತಿ ಕಾಣದೆ ಶಿಥಿಲಗೊಂಡು ಯಾವುದೇ ಕ್ಷಣದಲ್ಲೂ ಕುಸಿದು ಬೀಳಲು ಕ್ಷಣಗಣನೆ ಮಾಡುತ್ತಿರುವ ಈ ಕಾಲುಸಂಕದಲ್ಲಿ ಆಚೆ ದಡವನ್ನು ಸೇರಬೇಕಾದರೆ ಪ್ರಯಾಣಿಕರು ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಾಗಿ ಬರುತ್ತಿತ್ತು. ಜೋರಾಗಿ ಗಾಳಿ ಬೀಸಿದರೂ ಬೀಳಲು ಸಿದ್ಧವಾಗಿರುವ ಈ ಸೇತುವೆಯ ಬದಲಿಗೆ ದೃಢವಾದ ಸೇತುವೆಯನ್ನೇ ನಿರ್ಮಿಸಲು ಊರವರ ಅಭಿವೃದ್ಧಿ ಸಮಿತಿಯನ್ನು ಇತ್ತೀಚೆಗೆ ರಚಿಸಲಾಯಿತು.
ಹಲವು ದಶಕಗಳಿಂದ ಕೋಟ್ಟಪ್ಪುರ- ಕಡಿಞಿಮೂಲೆ ಪ್ರದೇಶದ ನಿವಾಸಿಗಳಿಗೆ ಹಾಗೂ ಪುರತ್ತೆಕೈ,ತೈಕಡಪ್ಪುರ, ಅಯಿತ್ತಲ, ಬೋಟ್‌ಜೆಟ್ಟಿ, ಕೊಟ್ಟಾರ ಮೊದಲಾದ ಪ್ರದೇಶಗಳಿಗೆ ಹೊರ ಜಗತ್ತಿನ ಸಂಪರ್ಕಕ್ಕಾಗಿ ಈ ಕಾಲು ಸಂಕವನ್ನೇ ಆಶ್ರಯಿಸಬೇಕಾಗಿ ಬರುತ್ತಿತ್ತು. ಮೊದಲಾಗಿದ್ದರೆ ದೋಣಿ ಗಳನ್ನು ಆಶ್ರಯಿಸಬೇಕಾಗಿ ಬರುತ್ತಿತ್ತು. 

ಇದಕ್ಕಾಗಿ ನಿರ್ಮಿಸಲಾದ ನಡೆದು ಹೋಗಲು ಮಾತ್ರ ಅವಕಾಶವಿರುವ ಈ ಕಾಲುಸಂಕ ಶಿಥಿಲಗೊಂಡರೂ ಅಧಿಕಾರಿಗಳು ಇದನ್ನು ದುರಸ್ತಿ ಗೊಳಿಸುವ ಗೊಡವೆಗೆ ಹೋಗಲೇ ಇಲ್ಲ. ಇದರಿಂದಾಗಿ ಈ ಕಾಲುಸಂಕ ಹಲವು ವರ್ಷಗಳಿಂದ ಮೃತ್ಯು ಭಯವನ್ನು ಒಡ್ಡುತ್ತಾ ಬರುತ್ತಿತ್ತು.

ಇತ್ತೀಚೆಗೆ ನಿರ್ಮಿಸಿದ ಅಚ್ಚಾಂ ತುರ್ತಿ- ಕೋಟಪ್ಪುರ ಸೇತುವೆಯು ವಾಹನ ಸಂಚಾರಕ್ಕೆ ಮುಕ್ತಗೊಳಿಸುತ್ತಲೇ ಇದೇ ರೀತಿಯಲ್ಲಿದ್ದ ಅಚ್ಚಾಂತುರ್ತಿಯ ಮಂದಿಗೆ ಮಡಕ್ಕರ, ಚೆರುವತ್ತೂರು ಮೂಲಕ ಪಯ್ಯನ್ನೂರಿಗೆ ಸುಲಭದಲ್ಲಿ ತಲುಪಬಹುದಾಗಿದೆ. 

ಅದೇ ರೀತಿಯಲ್ಲಿ ಕೋಟಪ್ಪುರಂ- ಮಾಟ್ಟುಮ್ಮಲ್‌ – ಕಡಿಞಿಮೂಲೆಗೆ ಕಾಲುಸಂಕದ ಬದಲಿಗೆ ದೊಡ್ಡ ಸೇತುವೆ ಯನ್ನೇ ನಿರ್ಮಿಸಲು ನೀಲೇಶ್ವರ ನಗರ ಸಭೆಯು ಕ್ರಿಯಾ ಸಮಿತಿಯನ್ನು ಇತ್ತೀಚೆಗೆ ರಚಿಸಿದೆ.
 
ತೃಕ್ಕರಿಪುರ ಶಾಸಕ ಎಂ. ರಾಜಗೋ ಪಾಲ್‌, ನಗರಸಭಾಧ್ಯಕ್ಷ ಪ್ರೊ| ಕೆ.ಪಿ. ಜಯರಾಜನ್‌ ಮೊದ ಲಾದ ಗಣ್ಯರ ಸಮಕ್ಷಮದಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ. ಪಿ.ಪಿ. ಮುಹಮ್ಮದ್‌ ರಾಫಿ (ಅಧ್ಯಕ್ಷರು), ಮಾಟ್ಟುಮ್ಮಲ್‌ ಕೃಷ್ಣನ್‌ (ಪ್ರಧಾನ ಕಾರ್ಯದರ್ಶಿ), ಇಬ್ರಾಹಿಂ ಪರಂಬತ್ತ್ (ಕೋಶಾಧಿಕಾರಿ) ಅವರನ್ನೊಳಗೊಂಡ ಕ್ರಿಯಾ ಸಮಿತಿಯು ಇದೀಗ ಸೇತುವೆ ನಿರ್ಮಾಣಕ್ಕಿರುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next