ದಾಂಡೇಲಿ : ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿ ನಿಲೇಶ್ ಶಿಂಧೆಯವರು ಅಧಿಕಾರ ಸ್ವೀಕರಿಸಿದ್ದಾರೆ. ಮರಿಯ ಕ್ರಿಸ್ತರಾಜ್ ಅವರಿಂದ ತೆರವಾದ ಸ್ಥಾನಕ್ಕೆ ಕರ್ನಾಟಕ ಸರಕಾರ ನಿಲೇಶ್ ಶಿಂಧೆಯವರನ್ನು ನಿಯೋಜನೆ ಮಾಡಿದೆ.
ಮೂಲತ: ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ವಾಶಿಮ್ ತಾಲ್ಲೂಕಿನ ನಿವಾಸಿಯಾಗಿರುವ ನಿಲೇಶ್ ಶಿಂಧೆಯವರು ಕೃಷಿ ವಿಜ್ಞಾನದಲ್ಲಿ ಮಹಾರಾಷ್ಟ್ರದ ಎಂ.ಪಿ.ಕೆ.ವಿ ಕೃಷಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಶಿಕ್ಷಣ ಮುಗಿದು ಕೆಲವೇ ವರ್ಷಗಳೊಳಗೆ ಮಹಾರಾಷ್ಟ್ರದಲ್ಲಿ ಕೃಷಿ ಅಧಿಕಾರಿಯಾಗಿ ನೇಮಕಗೊಂಡು ಎರಡು ವರ್ಷಗಳವರೆಗೆ ಸೇವೆಯನ್ನು ಸಲ್ಲಿಸಿದ್ದರು. ಕೃಷಿ ಅಧಿಕಾರಿಯಾಗಿದ್ದುಕೊಂಡೇ ಬಿಡುವಿನ ವೇಳೆಯಲ್ಲಿ ಐ.ಎಫ್.ಎಸ್ ಪರೀಕ್ಷೆಗಾಗಿ ಅಧ್ಯಯನ ನಡೆಸಿ, ಪರೀಕ್ಷೆ ಬರೆದಿದ್ದರು.
2017ರ ಭಾರತೀಯ ಅರಣ್ಯ ಸೇವೆ ಬ್ಯಾಚಿನ ಅಧಿಕಾರಿಯಾಗಿರುವ ನಿಲೇಶ್ ಶಿಂಧೆಯವರು ತರಬೇತಿ ಅವಧಿಯನ್ನು ಮುಗಿಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಮಡಿಕೇರಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡರು. ಅಲ್ಲಿ ಒಂದುವರೆ ವರ್ಷ ಸೇವೆ ಸಲ್ಲಿಸಿ, ಆನಂತರ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಅರಣ್ಯ ವಿಭಾಗದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ್ದರು.
ಇದೀಗ ಅಲ್ಲಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿ ನಿಯೋಜನೆಗೊಂಡು ಅಧಿಕಾರ ಸ್ವೀಕರಿಸಿದ್ದಾರೆ. ಸರಳ, ಸಹೃದಯಿ ಅಧಿಕಾರಿಯಾಗಿ ಈಗಾಗಲೇ ಮಡಿಕೇರಿ ಮತ್ತು ಕೊಪ್ಪ ಅರಣ್ಯ ವಿಭಾಗದಲ್ಲಿ ನಿಲೇಶ್ ಶಿಂಧೆಯವರು ಹೆಸರನ್ನು ಗಳಿಸಿಕೊಂಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಇದನ್ನೂ ಓದಿ: ಪಡಿತರ ಕಳವು ಆರೋಪ: ಅಧಿಕಾರಿ ಬಂಧನ