ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿಯ ಗೆಲುವನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಶಾಸಕ ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ.
ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ನನಗೆ 54 ಸಾವಿರ ಲೀಡ್ ಬಂದಿತ್ತು. ಈ ಚುನಾವಣೆಯಲ್ಲಿ ನಿಖಿಲ್‌ಗೆ 20 ಸಾವಿರ ಮತಗಳ ಅಂತರ ಕಡಿಮೆಯಾಗಬಹುದು. ಮೈತ್ರಿ ಪಕ್ಷದ ಕೆಲವರು ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿದ್ದಾರೆ. ಮಾಜಿ ಶಾಸಕರು, ಬೆಂಬಲಿಗರು ಹಾಗೂ ನಮ್ಮ ಪಕ್ಷದ ಜನಪ್ರತಿನಿಧಿಗಳ ವಿರುದ್ಧ ಈ ಸಂಬಂಧ ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಇಂತವರನ್ನು ಪಕ್ಷದಿಂದ ದೂರ ಇಡಲಾಗುವುದು ಎಂದರು.
“ನಾನು ರಾಜಕೀಯದಲ್ಲಿ ಮುಂದುವರಿಯಬೇಕೇ, ಬೇಡವೇ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ. ಆದರೆ, ಚುನಾವಣಾ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರ ಪತನವಾಗಲಿದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಠಿ’ ಎಂದರು.
ಶೇ.15ರಷ್ಟು ಬಸ್ ದರ ಹೆಚ್ಚಳ ಮಾಡುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಬಸ್ ದರ ಏರಿಕೆ ತೀರ್ಮಾನವನ್ನು ಕೈಬಿಡಲಾಗಿತ್ತು. ದರ ಏರಿಕೆ ಬಗ್ಗೆ ಮುಖ್ಯಮಂತ್ರಿ ತೀರ್ಮಾನವೇ ಅಂತಿಮ. ಇದರಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ.
-ಡಿ.ಸಿ.ತಮ್ಮಣ್ಣ, ಸಚಿವ.