ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ಮೂರನೇ ತಲೆಮಾರು ಕಣಕ್ಕೆ ಇಳಿಯುವುದು ಖಚಿತವಾಗಿ ದೆ. ಮಂಡ್ಯದಿಂದ ನಿಖಿಲ್, ಹಾಸನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ರಾಜಕೀಯ ವಿರೋಧಿಗಳು ಕುಟುಂಬದ ಮೂರನೇ ತಲೆಮಾರು ಚುನಾವಣೆಗೆ ಸ್ಪರ್ಧೆ ಮಾಡುವುದು ತಪ್ಪಿಸುವ ಹಿನ್ನೆಲೆಯಲ್ಲಿ ತಂತ್ರಗಾರಿಕೆಯಲ್ಲಿ ತೊಡಗಿದ್ದರೂ ತಲೆಕೆಡಿಸಿಕೊಳ್ಳದೆ ಇಬ್ಬರನ್ನು ಸ್ಪರ್ಧೆಗಿಳಿಸಲು ಗೌಡರ ಕುಟುಂಬ ನಿರ್ಧರಿಸಿದೆ.
ನಟ ಅಂಬರೀಶ್ ಪತ್ನಿ ಸುಮಲತಾ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ, ಸಿಎಂ ಕುಮಾರಸ್ವಾಮಿ ಪುತ್ರ ನಿಖೀಲ್‌ಕುಮಾರಸ್ವಾಮಿ ಮೈಸೂರು ಕ್ಷೇತ್ರದಿಂದ ಕಣಕ್ಕಿಳಿಸುವ ಕುರಿತು ಚಿಂತನೆ ನಡೆದಿತ್ತಾದರೂ ಅಂತಿಮವಾಗಿ ಮಂಡ್ಯದಿಂದಲೇ ಸ್ಪರ್ಧೆ ಮಾಡಲಿ ಎಂಬ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. ಮಂಡ್ಯದಿಂದ ನಿಖೀಲ್, ಹಾಸನದಿಂದ ಪ್ರಜ್ವಲ್ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ ದೇವೇಗೌಡರು ಬೆಂಗಳೂರು ಉತ್ತರ ಅಥವಾ ಮೈಸೂರು ಕ್ಷೇತ್ರದಿಂದ ಸ್ಪರ್ಧೆ ಮಾಡಬಹುದು. ತುಮಕೂರು ಕ್ಷೇತ್ರದವರೂ ದೇವೇಗೌಡರೇ ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹಾಕುತ್ತಿದ್ದಾರಾದರೂ ಆ ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್ ಹಿಂದೇಟು ಹಾಕುತ್ತಿದೆ. ಹೀಗಾಗಿ, ಎರಡರಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿ ಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಮೈಸೂರಿನಿಂದ ಪ್ರೊ.ಕೆ.ಎಸ್.ರಂಗಪ್ಪ ಇಲ್ಲವೇ ಜಿ.ಟಿ.ದೇವೇಗೌಡರ ಪುತ್ರ ಹರೀಶ್‌ಗೌಡ ಅವರಹೆಸರು ಪ್ರಸ್ತಾಪವಾಗುತ್ತಿದೆ ಆದರೆ, ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಸಾ.ರಾ.ಮಹೇಶ್ ಅವರು ದೇವೇಗೌಡರ ಕುಟುಂಬದವರು ಸ್ಪರ್ಧೆ ಮಾಡಿದರೆ ಸೂಕ್ತ ಎಂಬ ವಾದ ಮುಂದಿಟ್ಟಿದ್ದಾರೆ.
ಸಿದ್ದು ರಂಗಪ್ರವೇಶ: ಮತ್ತೂಂದೆಡೆ ಸಿದ್ದರಾಮಯ್ಯರ ತವರು ಜಿಲ್ಲೆ ಮೈಸೂರು ಕ್ಷೇತ್ರ ಜೆಡಿಎಸ್‌ಗೆ ಬಿಟ್ಟುಕೊಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ದೇವೇಗೌಡರ ಜತೆಗೆ ಮಾತನಾಡಿ ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಮನವೊಲಿಸಲಿದ್ದಾರೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದಿರುವ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮೈಸೂರಿನಿಂದ ಕಣಕ್ಕಿಳಿಸಬೇಕು ಎಂಬುದು ಸಿದ್ದರಾಮಯ್ಯ ಅವರ ಲೆಕ್ಕಾಚಾರ. ಹಳೇ ಮೈಸೂರು ಭಾಗದಲ್ಲಿ ಕುರುಬ ಸಮುದಾಯಕ್ಕೆ ಎಲ್ಲಿಯೂ ಟಿಕೆಟ್ ಕೊಡಲು ಅವಕಾಶವಿಲ್ಲ.
ಜೆಡಿಎಸ್-ಕಾಂಗ್ರೆಸ್ ಮೈತ್ರಿಯಾದರೂ ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಉತ್ತರ, ದಕ್ಷಿಣ, ಗ್ರಾಮಾಂತರ, ಸೆಂಟ್ರಲ್, ದಾವಣಗೆರೆ ಕ್ಷೇತ್ರಗಳಲ್ಲೂ ಕುರುಬ ಸಮುದಾಯಕ್ಕೆ ಟಿಕೆಟ್ ಸಿಗುವುದು ಕಷ್ಟವಾಗಬಹುದು. ಹೀಗಾಗಿ, ಮೈಸೂರು ಕ್ಷೇತ್ರ ಕಾಂಗ್ರೆಸ್‌ಗೆ ಇಟ್ಟುಕೊಂಡು ಸಿ.ಎಸ್. ವಿಜಯಶಂಕರ್‌ಗೆ ಟಿಕೆಟ್ ನೀಡಬೇಕು ಎಂದು ಸಿದ್ದರಾಮಯ್ಯ ಹೈಕಮಾಂಡ್ ಮುಂದೆಯೂ ಪ್ರಸ್ತಾವನೆ ಇಟ್ಟಿದ್ದಾರೆ ಎಂದುಹೇಳಲಾಗಿದೆ.
ಒಂದೊಮ್ಮೆ ಮೈಸೂರು ಜೆಡಿಎಸ್‌ಗೆ ಬಿಟ್ಟು ಕೊಡದಿದ್ದರೆ ತುಮಕೂರು ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್ ಮೇಲೆ ಒತ್ತಡ ಹಾಕಲು ಜೆಡಿಎಸ್ ನಿರ್ಧರಿಸಿದೆ.
ಕಾಂಗ್ರೆಸ್-ಜೆಡಿಎಸ್ ಜತೆಗೂಡಿ ಚುನಾವಣೆ ಎದುರಿಸಿದರೂ ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಇತರೆ ಕ್ಷೇತ್ರಗಳಲ್ಲಿ ಎಲ್ಲ ಸಮುದಾಯಕ್ಕೂ ಅವಕಾಶ ಕಲ್ಪಿಸಬೇಕಾಗಿದೆ. ಅದರಲ್ಲೂ ಒಕ್ಕಲಿಗ, ಕುರುಬ, ಲಿಂಗಾಯಿತ, ಮುಸ್ಲಿಂ, ಈಡಿಗ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ದೇವೇಗೌಡರು ಕಾಂಗ್ರೆಸ್ ನಾಯಕರಿಗೆ ಈಗಾಗಲೇ ತಿಳಿಸಿದ್ದಾರೆ ಎನ್ನಲಾಗಿದೆ.
ಇಂದಿನ ಸಭೆಯಲ್ಲಿ ತೀರ್ಮಾನವಾಗುತ್ತಾ?
ಸೋಮವಾರ ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಯಲಿದ್ದು ಅಲ್ಲಿ ಸೀಟು ಹಂಚಿಕೆ ಬಗ್ಗೆಯೂ ಚರ್ಚೆ ಆಗಲಿದೆ. ಸಮನ್ವಯ ಸಮಿತಿಯಲ್ಲಿ ಒಮ್ಮತ ಮೂಡದಿದ್ದರೆ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಾತುಕತೆ ನಡೆಸಿ ಸೀಟು ಹಂಚಿಕೆ ಅಂತಿಮಗೊಳಿಸುವ ಸಾಧ್ಯತೆಯಿದೆ. ಜೆಡಿಎಸ್ 12 ಕ್ಷೇತ್ರಗಳಿಗೆ ಪಟ್ಟು ಹಿಡಿದಿದೆಯಾದರೂ 8 ರಿಂದ 9 ಕ್ಷೇತ್ರ ಸಿಗುವ ಸಾಧ್ಯತೆಯಿದೆ. ಜೆಡಿಎಸ್‌ಗೆ ಎಂಟು ಸ್ಥಾನ ಬಿಟ್ಟುಕೊಟ್ಟರೂ ಆ ಕ್ಷೇತ್ರಗಳು ಯಾವುವು ಎಂಬುದೇ ಇದೀಗ ಕುತೂಹಲದ ಪ್ರಶ್ನೆಯಾಗಿದೆ. ಹಾಸನ, ಮಂಡ್ಯ, ಶಿವಮೊಗ್ಗ, ಬೆಂಗಳೂರು ಉತ್ತರ, ವಿಜಯಪುರ ಕ್ಷೇತ್ರಗಳು ಜೆಡಿಎಸ್‌ಗೆ ಸಿಗುವುದು ಖಚಿತ. ಉಳಿದ ಕ್ಷೇತ್ರಗಳು ಯಾವುವು ಎಂಬುದು ಕಾದು ನೋಡಬೇಕಾಗಿದೆ.