ಶಿವಮೊಗ್ಗ: “ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕನಿಷ್ಠ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆಲುವು ಸಾ ಧಿಸಲಿದ್ದಾರೆ. ಒಂದು ವೇಳೆ ಸೋತರೆ ನಾನು ರಾಜಕೀಯ ಸನ್ಯಾಸತ್ವ ಸ್ವೀಕರಿಸುವೆ’ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈತ್ರಿ ಅಭ್ಯರ್ಥಿ ಭಾರೀ ಅಂತರದಿಂದ ಗೆಲ್ಲಲಿದ್ದಾರೆ. ಅದಕ್ಕೆ ಬದ್ಧವಾಗಿ ಪಕ್ಷದಿಂದ ಕೆಲಸವನ್ನೂ ಮಾಡಿದ್ದೇವೆ. ಹೀಗಾಗಿ, ಗೆಲ್ಲುವ ಭರವಸೆ ಇದೆ.
ಒಂದು ವೇಳೆ, ಸುಮಲತಾ ಸೋತರೆ, ಬಿಎಸ್‌ವೈ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ಮಂಡ್ಯದಲ್ಲಿ ಸುಮಲತಾರನ್ನು ಬಿಜೆಪಿಯವರು ಬೆಂಬಲಿಸಿದ್ದಾರೆ. ಆದರೆ, ಒಬ್ಬ ಬಿಜೆಪಿ ಅಭ್ಯರ್ಥಿಯನ್ನು ನಿಲ್ಲಿಸಲಿಲ್ಲ. ಉರಿಯುವ ಮನೆಯಲ್ಲಿ ಮೈ ಕಾಯಿಸಿಕೊಳ್ಳುವುದೇ ಬಿಜೆಪಿ ಜಾಯಮಾನ ಎಂದು ಕಿಡಿಕಾರಿದರು.
ಎಚ್‌ಎಂಟಿ ಬಂದ್ ಕುರಿತು ಪ್ರಶ್ನಿಸಿದ್ದಕ್ಕೆ ಕೆಂಡಾಮಂಡಲವಾದ ಪುಟ್ಟರಾಜು, “ಹೇಳಿಕೆ ನೀಡಿರುವ ಮಾಜಿ ಸಚಿವ ಬಿ.ಸೋಮಶೇಖರ್‌ಗೆ ರಾಜಕೀಯ ನೆಲೆ ಇಲ್ಲ. ಅಂತವರಿಗೆ ಹಾಸನ, ಮಂಡ್ಯ ಮತ್ತು ತುಮಕೂರಿನಲ್ಲಿ ಜೆಡಿಎಸ್ ಬಂದ್ ಬಗ್ಗೆ ಹೇಳಿಕೆ ನೀಡುವ ಯೋಗ್ಯತೆ ಇಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪಾಪ ರಾಜಕೀಯವಾಗಿ ಇಂತಹ ಸ್ಥಿತಿ ಬರಬಾರದಿತ್ತು. ಎಲ್ಲವನ್ನು ಕಾಂಗ್ರೆಸ್‌ನಲ್ಲಿ ಅನುಭವಿಸಿ ಈಗ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿರುವ ಅವರನ್ನು ಯಾರು ತಾನೇ ನಂಬಲು ಸಾಧ್ಯ ಎಂದು ಪ್ರಶ್ನಿಸಿದರು.
ಜೆಡಿಎಸ್ ನಾಯಕರು ಚುನಾವಣೆ ಮುಗಿದ ಮೇಲೂ ಕಿರುಕುಳ ಕೊಡುತ್ತಿದ್ದಾರೆ ಎಂಬ ಸುಮಲತಾ ಆರೋಪಕ್ಕೆ ಪ್ರತಿಕ್ರಿಯಿಸಿ, “ನಾನು ಆ ಕ್ಷೇತ್ರದ ಉಸ್ತುವಾರಿ ಸಚಿವನಾಗಿ ಆಶ್ವಾಸನೆ ಕೊಡುತ್ತೇನೆ. ಚುನಾವಣೆಯಲ್ಲಿ ನಡೆದ ಘಟನೆಯಲ್ಲಿ ದ್ವೇಷ ರಾಜಕಾರಣ ಮಾಡೋಲ್ಲ. ಭಯಪಡುವ ಅಗತ್ಯವಿಲ್ಲ’ ಎಂದು ಹೇಳಿದರು.