ರಾಮನಗರ: ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜ ಕಾರಣ ಇದೆ. ಬಿಜೆಪಿ, ಕಾಂಗ್ರೆಸ್ ಇದಕ್ಕೆ ಹೊರತಾಗಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿರುಗೇಟು ನೀಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಟೆಕ್ವಾಂಡೋ ಸಂಸ್ಥೆ ಹಮ್ಮಿಕೊಂಡಿದ್ದ ಮ್ಯಾಟ್ ಹಾಗೂ ಕರಾಟೆ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ವಿತರಣೆ ಮಾಡಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದಲ್ಲಿ ವಂಶಪಾರಂಪರ್ಯತೆ ಇಲ್ಲ ಹೇಳಿ, ಎಲ್ಲರೂ ಅದೇ ಹಾದಿಯಲ್ಲಿದ್ದಾರೆ ಎಂದು ಹೇಳಿದರು.
ಆತ್ಮಾವಲೋಕನ ಮಾಡಿಕೊಳ್ಳಲಿ: ಬಿಜೆಪಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮಾಜಿ ಡೀಸಿಎಂ ಕೆ.ಎಸ್.ಈಶ್ವರಪ್ಪ ಅವರ ಮಕ್ಕಳಿದ್ದಾರೆ. ಹಾಗೆಯೇ ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ್ ಮನೆ ಯಲ್ಲೇ ನಾಲ್ಕು ಮಂದಿ ಸಂಸದ – ಶಾಸಕರಾಗಿದ್ದಾರೆ. ಹೀಗಾಗಿ ರಾಜಕೀಯದಲ್ಲಿ ಕುಟುಂಬ ರಾಜಕಾರಣದ ಪ್ರಶ್ನೆಯೇ ಬರುವುದಿಲ್ಲ. ಕೆಲವರು ಜೆಡಿಎಸ್‌ನಲ್ಲಿ ಮಾತ್ರ ಕುಟುಂಬ ರಾಜಕಾರಣ ಎನ್ನುವಂತೆ ಚರ್ಚೆ ಮಾಡ್ತಾರೆ. ಅದರ ಬಗ್ಗೆ ಆತ್ಮಾವಲೋಕನ ಮಾಡಿ ಕೊಳ್ಳಲಿ ಎಂದು ತಿಳಿಸಿದರು.
ಬೇರೆಯವರಿಗೂ ಟಿಕೆಟ್ ನೀಡಿದ್ದೆವು: ರಾಮನಗರ ಜಿಲ್ಲೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರದ್ದು ವಂಶಪಾರಂಪರ್ಯ ರಾಜಕಾರಣ ಎಂಬ ಸಿ.ಪಿ.ಯೋಗೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಹಿಂದೆ ನಾವು ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿ ಕೆ. ರಾಜುಗೆ ಟಿಕೆಟ್ ನೀಡಿದ್ದೆವು. ಆ ವ್ಯಕ್ತಿ ಕೃತಜ್ಞತೆ ಮರೆತು ಕಾಂಗ್ರೆಸ್ ಸೇರಿಕೊಂಡರು. ಚನ್ನಪಟ್ಟಣದಲ್ಲಿ ಈ ಹಿಂದೆ ಸಿಂ.ಲಿಂ.ನಾಗರಾಜು ಅವರಿಗೆ ಟಿಕೆಟ್ ನೀಡಿದ್ದೆವು. ಬಳಿಕ ಕಾರ್ಯಕರ್ತರು, ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದು ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದ ಅಭ್ಯರ್ಥಿ ಆಗಬೇಕಾಯಿತು ಎಂದು ಸಮರ್ಥಿಸಿಕೊಂಡರು.
ವಿರೋಧ ಪಕ್ಷಗಳಿಗೆ ಭಯ: ಚನ್ನಪಟ್ಟಣದಲ್ಲಿ ನಡೆದ ಜೆಡಿಎಸ್ ಪಂಚರತ್ನ ರಥಯಾತ್ರೆಯ ಸಮಾವೇಶ ದಿಂದ ಯೋಗೇಶ್ವರ್ ಹತಾಶರಾಗಿದ್ದಾರೆ. ಹಣ ಕೊಟ್ಟರೂ ರಾಷ್ಟ್ರೀಯ ಪಕ್ಷಗಳ ಕಾರ್ಯಕ್ರಮಗಳಿಗೆ ಜನ ಸೇರುತ್ತಿಲ್ಲ. ಆದರೆ, ಅದೇ ಜನ ಮಧ್ಯರಾತ್ರಿವರೆಗೂ ನಿಂತು ಕುಮಾರಸ್ವಾಮಿಗೆ ಸ್ವಾಗತ ಮಾಡುತ್ತಿದ್ದಾರೆ. ಅವರಿಗೆ ಬೆಂಬಲ ಕೊಟ್ಟು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಇದನ್ನೆಲ್ಲ ಕಂಡು ವಿರೋಧ ಪಕ್ಷದವರಿಗೆ ಭಯ ಹುಟ್ಟಿದೆ ಎಂದು ವಿವರಿಸಿದರು.
130 ಕೆರೆ ತುಂಬಿವೆ: ಮಾಜಿ ಸಚಿವ ಸಿ.ಪಿ.ಯೋಗೇ ಶ್ವರ್ 18 ವರ್ಷ ಚನ್ನಪಟ್ಟಣ ಕ್ಷೇತ್ರದ ಶಾಸಕರಾಗಿ ದ್ದರೂ ಕ್ಷೇತ್ರದ ರಸ್ತೆಗಳು ಅಭಿವೃದ್ಧಿ ಆಗಿರಲಿಲ್ಲ. ಈಗ ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದ ಬಳಿಕ, ಪ್ರತಿ ರಸ್ತೆ ಅಚ್ಚುಕಟ್ಟಾಗಿದೆ. ಅಲ್ಲದೆ, ಕ್ಷೇತ್ರದಲ್ಲಿ ಕುಮಾರಸ್ವಾಮಿ ಕಾಲದಲ್ಲಿ 130 ಕೆರೆ ತುಂಬಿವೆ ಎಂದು ತಿಳಿಸಿದರು.
ಸರಿಯಾದ ಮಾಹಿತಿ ಇಲ್ಲ: ಮಾಜಿ ಸಿಎಂ ಎಚ್‌ಡಿಕೆ ಚನ್ನಪಟ್ಟಣಕ್ಕೆ ಒಂದೂ ವರೆ ಸಾವಿರ ಕೋಟಿ ರೂ. ಅನುದಾನ ತರುವ ಮೂಲಕ ಕ್ಷೇತ್ರಾಭಿವೃದ್ಧಿಗೆ ಶ್ರಮಿಸಿದ್ದಾರೆ. ಇದು ಯೋಗೇಶ್ವರ್ ಅವರಿಗೆ ಸರಿಯಾದ ಮಾಹಿ ತಿಯೇ ಇಲ್ಲ ಎಂದು ಲೇವಡಿ ಮಾಡಿದ ನಿಖೀಲ್, ರಾಜ್ಯದಲ್ಲಿ ಬಿಜೆಪಿಯವರು ಸಹ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಕೋವಿಡ್ ವಿಚಾರವಾಗಿ ಸರ್ಕಾರ ಏನೇ ನಿಯಮ ಮಾಡಿದರೂ ಅದು ಎಲ್ಲರಿಗೂ ಅನ್ವಯಿಸಬೇಕು ಎಂದು ಹೇಳಿದರು