ರಾಮನಗರ: ಚುನಾವಣೆ ಸೋಲಿನ ಬಳಿಕ ರಾಜಕೀಯದಿಂದ ದೂರ ಉಳಿಯಲಿದ್ದಾರೆ ಎಂಬ ವಿಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವಿಟರ್ ಎಕ್ಸ್ ನಲ್ಲಿ ಟ್ವೀಟ್ ಮಾಡಿದ ನಿಖಿಲ್ ‘ಅರೂವರೆ ಕೋಟಿ ಕನ್ನಡಿಗರು, ದೃಶ್ಯ ಮತ್ತು ಮುದ್ರಣ ಮಾಧ್ಯಮಕ್ಕೆ ನಿನ್ನೆಯ ದಿನ ಚರ್ಚೆಗೆ ಗ್ರಾಸವಾದ ವಿಷಯದ ಬಗ್ಗೆ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆ, ವಿಧಾನಸಭೆ ಚುನಾವಣೆಯ ಸೋಲಿನ ಬಳಿಕ ನಾನು ರಾಜಕಾರಣದಿಂದ ಒಂದು ಹೆಜ್ಜೆ ಹೊರಗಡೆ ಇಟ್ಟಿದ್ದೇನೆ ಎನ್ನುವ ಭಾವನೆ ಯಾರಿಗೂ ಬೇಡ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.
ನಾನು ಜವಾಬ್ದಾರಿಯನ್ನು ಅರಿತಿದ್ದೇನೆ. ಚುನಾವಣೆಯ ಸೋಲು ತಾತ್ಕಾಲಿಕ. ಜನರು ನನಗೆ ಸದಾ ಕಾಲ ಪ್ರೀತಿ, ವಿಶ್ವಾಸ, ಗೌರವದಲ್ಲಿ ಎಂದೂ ಕೊರತೆ ಮಾಡಿಲ್ಲ. ಸಮಯ, ಸಂದರ್ಭ, ಕಾಲ ಎಲ್ಲದ್ದಕ್ಕೂ ಉತ್ತರ ಕೊಡುತ್ತದೆ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಮಂತ್ರಿಗಳ ಮೊಮ್ಮಗ, ಮಾಜಿ ಮುಖ್ಯಮಂತ್ರಿಗಳ ಮಗ ಎನ್ನುವುದು ಒಂದು ಭಾಗವಾದರೆ, ಕನ್ನಡ ಚಿತ್ರರಂಗದಲ್ಲಿ ಒಬ್ಬ ಕಲಾವಿದನ ಸ್ಥಾನ ಕೊಟ್ಟಿರುವ ಸಮಸ್ತ ಕಲಾಭಿಮಾನಿಗಳಿಗೆ ನಾನು ಎಂದೆಂದಿಗೂ ಚಿರಋಣಿ ಎಂದು ಹೇಳಿದ್ದಾರೆ.
ನನ್ನ ಮೊದಲ ಚಿತ್ರ ಜಾಗ್ವಾರ್ ಮತ್ತು ನಾನು ನಟಿಸಿರುವ ಎಲ್ಲಾ ಸಿನಿಮಾಗಳಲ್ಲೂ ಬೆನ್ನುತಟ್ಟಿ ಆಶೀರ್ವದಿಸಿ, ಪ್ರೋತ್ಸಾಹಿಸಿ ನನ್ನ ಯಶಸ್ಸಿಗೆ ನೀವೆಲ್ಲರೂ ಕಾರಣರಾಗಿದ್ದಿರಿ. ಅದಕ್ಕೆ ನಾನು ಆಭಾರಿ. ಇನ್ನೂ ಬೆಟ್ಟದಷ್ಟು ಕನಸು ಹೊತ್ತು ಹಲವಾರು ಚಿತ್ರಗಳಲ್ಲಿ ನಟಿಸಿ ನಿಮ್ಮನ್ನು ಮನರಂಜಿಸಬೇಕು ಎನ್ನುವುದು ನನ್ನ ಜೀವನದ ಗುರಿ. ಇಲ್ಲಿಯವರೆಗೂ ನನ್ನ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ಮುಂದೆಯೂ ನಾನು ನಿಮ್ಮ ನಿರೀಕ್ಷೆಗೂ ಮೀರಿ ಚಿತ್ರಗಳನ್ನು ಮಾಡುವವನಿದ್ದೇನೆ. ಕೊನೆಯದಾಗಿ ಎಲ್ಲಾ ಮಾಧ್ಯಮದ ಮಿತ್ರರಿಗೆ ರಾಜಕಾರಣ ಮತ್ತು ಸಿನಿಮಾದ ವಿಚಾರವಾಗಿ ನನಗೆ ಸಂಬಂಧಿಸಿದ ವಿಷಯಗಳಿದ್ದರೆ ಆ ಪ್ರಶ್ನೆಗಳಿಗೆ ನಾನೇ ಉತ್ತರ ನೀಡಲು ಬಯಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.