Advertisement

ಜೆಡಿಎಸ್‌ ಕೋಟೆಗೆ ಲಗ್ಗೆ ಹಾಕೀತೇ ಕೈ, ಕಮಲ?

11:28 PM Mar 03, 2023 | Team Udayavani |

ರಾಮನಗರ: ರಾಷ್ಟ್ರಕ್ಕೆ ಒಬ್ಬರು ಪ್ರಧಾನಮಂತ್ರಿ, ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಕೊಡುಗೆ ನೀಡಿದ ಕ್ಷೇತ್ರ ರೇಷ್ಮೆನಗರ ಎಂದೇ ಖ್ಯಾತವಾಗಿರುವ ರಾಮನಗರ ಕ್ಷೇತ್ರ. ಇದು ಜೆಡಿಎಸ್‌ ಭದ್ರಕೋಟೆಯಾಗಿದೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಿಡಿತದಲ್ಲಿರುವ ಕ್ಷೇತ್ರದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೆಚ್ಚಿದೆ. ಪಕ್ಷದಿಂದ ಈ ಬಾರಿ ದೇವೇಗೌಡರ ಕುಟುಂಬದ 3ನೇ ಕುಡಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಖಚಿತವಾಗಿದೆ.

Advertisement

ಮೊದಲಿಗೆ ಕೆಂಗಲ್‌ ಹನುಮಂತಯ್ಯನವರು ಅನಂತರ ಎಚ್‌. ಡಿ. ದೇವೇಗೌಡರು ಬಳಿಕ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ಹೆಗ್ಗಳಿಕೆಯ ರೇಷ್ಮೆನಗರ ರಾಮ ನಗರಕ್ಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿದ್ದ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಮೂಲಕ ಕುಮಾರಸ್ವಾಮಿ ಹೊಸ ಅಧ್ಯಾಯವನ್ನೇ ಬರೆದರು. ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡ ಕ್ಷೇತ್ರ ಇದು. 1994ರಲ್ಲಿ ದೇವೇಗೌಡರು ಚುನಾವಣೆಯಲ್ಲಿ ಸೋಲು ಕಂಡಿದ್ದರು. ಅಲ್ಲದೆ ದೇವೇಗೌಡರ ರಾಜಕೀಯ ಜೀವನ ಮುಗಿದೇ ಹೋಯಿತು ಎನ್ನುತ್ತಿದ್ದ ಕಾಲಘಟ್ಟದಲ್ಲಿ ಅವರಿಗೆ ರಾಜಕೀಯ ಪುನರ್ಜನ್ಮ ನೀಡಿ ಕೈ ಹಿಡಿದದ್ದೇ ರಾಮನಗರ ಕ್ಷೇತ್ರ. ದೇವೇಗೌಡರ ರಾಜೀ ನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಚಿತ್ರರಂಗದಲ್ಲಿ ಮೇರುನಟರಾಗಿ ಖ್ಯಾತರಾಗಿದ್ದ ರೆಬೆಲ್‌ ಸ್ಟಾರ್‌ ಅಂಬರೀಶ್‌ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗಿತ್ತು. ಆ ವೇಳೆ ಸ್ವಾಭಿಮಾನದ ಹೆಸರಲ್ಲಿ ಸಿ.ಎಂ. ಲಿಂಗಪ್ಪ ಗೆಲ್ಲುವ ಮೂಲಕ ಜೆಡಿಎಸ್‌ ಓಟಕ್ಕೆ ಬ್ರೇಕ್‌ ಹಾಕಿದ್ದರು.

ಅನಂತರದ ಚುನಾವಣೆಯಲ್ಲಿ ಕ್ಷೇತ್ರವನ್ನು ಜೆಡಿಎಸ್‌ ತೆಕ್ಕೆಗೆ ತೆಗೆದುಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದ ಪರಿಣಾಮ ಎಚ್‌.ಡಿ. ಕುಮಾರಸ್ವಾಮಿ ಇಲ್ಲಿ ಸ್ಪರ್ಧೆ ಮಾಡಿ ವಿಜಯ ಸಾಧಿಸುವ ಮೂಲಕ ಪ್ರಥಮ ಬಾರಿಗೆ ಶಾಸಕರಾದಾಗಲೇ ಮುಖ್ಯಮಂತ್ರಿ ಸ್ಥಾನಕ್ಕೇರುವ ಯೋಗ ಕೂಡಿ ಬಂತು. ಅನಂತರ ಎಚ್‌ಡಿಕೆ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿಸಿ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದರು.

ಇದೀಗ ಜೆಡಿಎಸ್‌ನಿಂದ ಎಚ್‌ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದು, ರಾಮನಗರ ಜಿಪಂ ಮಾಜಿ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಕಾಂಗ್ರೆಸ್‌ ಅಭ್ಯರ್ಥಿ ರೇಸ್‌ನಲ್ಲಿದ್ದಾರೆ. ಇಲ್ಲಿ ಇನ್ಯಾರೂ ಟಿಕೆಟ್‌ ಕೇಳಿಲ್ಲ. ಜತೆಗೆ ಡಿ.ಕೆ.ಬ್ರದರ್ ಕೃಪಾಕಟಾಕ್ಷವೂ ಇರುವುದರಿಂದ ಅಂತಿಮ ಅಭ್ಯರ್ಥಿ ಆಗಲಿದ್ದಾರೆ ಎನ್ನಲಾಗಿದೆ.
ಜಿಪಂ ಅಧ್ಯಕ್ಷರಾಗಿದ್ದಾಗ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿದ್ದರು. ಈ ಕಾರ್ಯಕ್ರಮಗಳೇ ಗೆಲುವಿಗೆ ಶ್ರೀರಕ್ಷೆ ಎನ್ನುವ ಉತ್ಸಾಹ ಹೊಂದಿದ್ದಾರೆ.

ಕ್ಷೇತ್ರದಲ್ಲಿರುವ 40 ಸಾವಿರಕ್ಕೂ ಅಧಿಕ ಮುಸ್ಲಿಮರ ಮತ ಕಾಂಗ್ರೆಸ್‌ಗೆ ಬೀಳಲಿವೆ ಎನ್ನುವ ಅಚಲವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಸುಮಾರು ದೊಡ್ಡದಿರುವಂತೆ ಕಾಣಿಸುತ್ತಿದೆ. ಮನೆಯೊಂದು ಮೂರು ಬಾಗಿಲು ಎನ್ನುವಂತೆ ನಾಲ್ಕೈದು ಬಣಗಳಾಗಿ ಹೊಡೆದು ಹೋಳಾಗಿದೆ. ಇದೀಗ ಬಿಜೆಪಿ ಕೂಡ ತನ್ನ ಪ್ರಾಬಲ್ಯ ಗಟ್ಟಿ ಮಾಡಿಕೊಳ್ಳಲೇಬೇಕೆಂಬ ಹಠಕ್ಕೆ ಬಿದ್ದಿದೆ. ಹೊಂದಾಣಿಕೆ ರಾಜಕೀಯದ ವಾಸನೆ ಹಲವು ಮಜಲುಗಳಲ್ಲಿ ರಾಜಕೀಯ ವಿಶ್ಲೇಷಕರ ಪಡಸಾಲೆಯಲ್ಲಿ ಹರಿದಾಡುತ್ತಿದೆ. ಎಚ್‌ಡಿಕೆ ತಮ್ಮ ಪುತ್ರನ ಗೆಲುವಿಗೆ ತಂತ್ರ-ರಣತಂತ್ರ ಹೆಣೆದಿದ್ದು, ಅದಕ್ಕಾಗಿ ಬಿಜೆಪಿಯಲ್ಲಿ ಬಣ ರಾಜಕೀಯ ಮೇಲ್ನೋಟಕ್ಕೆ ಹೆಚ್ಚಾದಂತೆ ಕಾಣಿಸುತ್ತಿದೆ.

Advertisement

ಬಿಜೆಪಿಯಿಂದ ಯಾರು ಕಣಕ್ಕೆ?
ಜೆಡಿಎಸ್‌ ಭದ್ರಕೋಟೆಯಾಗಿರುವ ರಾಮನಗರದಲ್ಲಿ ಹೇಗಾದರೂ ಮಾಡಿ ಬೇರು ಊರಬೇಕೆಂದು ಇನ್ನಿಲ್ಲದ ಸರ್ಕಸ್‌ ಮಾಡುತ್ತಿದೆ ಬಿಜೆಪಿ. ಈ ಕಾರಣದಿಂದಲೇ ಇಲ್ಲಿನ ಉಸ್ತುವಾರಿ ಹೊತ್ತಿದ್ದ ಸಚಿವ ಅಶ್ವತ್ಥ್ ನಾರಾಯಣ್‌ ಅವರು ಆಕ್ರಮಣಕಾರಿಯಾಗಿ ಇಲ್ಲಿ ಬಿಜೆಪಿ ಬೆಳೆಸಲು ಮುಂದಾದರು. ಪರಿಣಾಮವಾಗಿ ಇಲ್ಲಿನ ಸಂಸದ ಡಿ.ಕೆ.ಸುರೇಶ್‌, ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಅಶ್ವತ್ಥ್ ನಾರಾಯಣ್‌ ನಡುವೆ ಬಹಿರಂಗ ಜಟಾಪಟಿ ನಡೆದಿದೆ. ಈ ಕ್ಷೇತ್ರವನ್ನು ಗೆಲ್ಲಬೇಕೆಂದು ರಾಮಮಂದಿರ ತಂತ್ರ ಹೂಡಿರುವ ಬಿಜೆಪಿಯಿಂದ ಯಾರು ಸ್ಪರ್ಧಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು. ಆಕಾಂಕ್ಷಿತರ ಪಟ್ಟಿ ಬಹುದೊಡ್ಡದಿದ್ದು, ಪ್ರಮುಖವಾಗಿ ರಾಜ್ಯ ನಾಯಕರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಗೊಂಡ ಪದ್ಮಾವತಿ, ಕರ್ನಾಟಕ ರೇಷ್ಮೇ ನಿಗಮದ ಅಧ್ಯಕ್ಷ ಗೌತಮ್‌ಗೌಡ, ಸಮಾಜಸೇವಕ ಗೋವಿಂದರಾಜ್‌, ಬಿಡದಿ ಸ್ಮಾರ್ಟ್‌ಸಿಟಿ ಅಧ್ಯಕ್ಷ ವರದರಾಜ್‌ ಗೌಡ, ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಪ್ರವೀಣ್‌ಗೌಡ, ಮುಖಂಡ ನರೇಂದ್ರ ಮುಂತಾದ ಹೆಸರುಗಳು ಕೇಳಿ ಬರುತ್ತಿವೆ.

-ಎಂ.ಎಚ್‌. ಪ್ರಕಾಶ ರಾಮನಗರ

Advertisement

Udayavani is now on Telegram. Click here to join our channel and stay updated with the latest news.

Next