ಹನೂರು : ಸ್ಯಾಂಡಲ್‍ವುಡ್ ನಟ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಾಳಬೆಟ್ಟದಿಂದ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಕೈಗೊಂಡರು.
ಸೋಮವಾರ ಸಂಜೆ 5 ಗಂಟೆ ವೇಳೆಗೆ ತಾಳಬೆಟ್ಟಕ್ಕೆ ಆಗಮಿಸುದ ನಿಖಿಲ್ ತಾತ್ಕಾಲಿಕ ಶೆಡ್‍ಗಳಲ್ಲಿ ಭಕ್ತಾದಿಗಳಿಗೆ ವಿತರಿಸುತ್ತಿದ್ದ ಪ್ರಸಾದವನ್ನು ಸ್ವೀಕರಿಸಿ ಪ್ರಸಾದ ಸವಿದರು. ಬಳಿಕ ತಾಳಬೆಟ್ಟದ ಪ್ರವೇಶ ದ್ವಾರದಲ್ಲಿ ಮಲೆ ಮಾದಪ್ಪನಿಗೆ ನಮಿಸಿ ಧೂಪಸೇವೆ ಸಮರ್ಪಿಸಿ ಪಾದಯಾತ್ರೆಗೆ ಚಾಲನೆ ನೀಡಿದರು. ಈ ವೇಳೆ ನಿಖಿಲ್‍ರ ಪಾದಯಾತ್ರೆಗೆ ಮಳವಳ್ಳಿ ಶಾಸಕ ಅನ್ನದಾನಿ, ಟಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್, ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮತ್ತು ನಿಖಿಲ್ ಅಭಿಮಾನಿಗಳು ಪಾದಯಾತ್ರೆಯಲ್ಲಿ ಹೆಜ್ಜೆಹಾಕಿದರು.
ನಮ್ಮದು ಶಿವಭಕ್ತರ ಕುಟುಂಬ: ತಾಳಬೆಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಪ್ರಜ್ವಲ್ ರೇವಣ್ಣ ಅವರು ಕೈಗೊಂಡಿರುವ ಪಾದಯಾತ್ರೆಗೂ, ನನ್ನ ಪಾದಯಾತ್ರೆಗೂ ಯಾವುದೇ ಕನೆಕ್ಷನ್‍ಯಿಲ್ಲ. ಅವರು ಹೊಳೆನರಸೀಪುರದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದಾರೆ, ನಾನು ಇಲ್ಲಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದೇನೆ. ನನ್ನ ತಾತನವರು, ಅಜ್ಜಿಯವರು, ತಂದೆ-ತಾಯಿಯರು ಇಡೀ ಕುಟುಂಬ ಶಿವಭಕ್ತರ ಕುಟುಂಬ. ಕಳೆದ 3-4 ದಿನಗಳಿಂದ ಲಕ್ಷಾಂತರ ಭಕ್ತಾದಿಗಳು ಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿರುವುನ್ನು ನೋಡಿ ನನಗೂ ಹೋಗಬೇಕು ಅಂತ ಮನಸ್ಸಿಗೆ ಬಂತು, ಆದುದರಿಂದ ತೆರಳುತ್ತಿದ್ದೇನೆ. ಅದನ್ನು ಹೊರತುಪಡಿಸಿ ಬೇರೆ ಏನೂ ಇಲ್ಲ, ನಮ್ಮ ಪಾದಯಾತ್ರೆ ಶಿವನ ಭಕ್ತಿಯಿಂದ ನಡೆಯುತ್ತಿದೆಯೇ ಹೊರತು ಮೇಕೆದಾಟು ಪಾದಯಾತ್ರೆಗೆ ಠಕ್ಕರ್ ಕೊಡಲೂ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆ ದೇವೇಗೌಡರ ದೂರದೃಷ್ಠಿಯದ್ದು: ಮೇಕೆದಾಟು ಯೋಜನೆ ನಮ್ಮ ತಾತನವರಾದ ದೇವೇಗೌಡರ ಕಾಲದ್ದು, ಅವರು ನೀರಾವರಿ ಮಂತ್ರಿಯಾಗಿದ್ದಾಗ ದೂರದೃಷ್ಠಿಯಿಂದ ಯೋಜನೆ ರೂಪಿಸಿದ್ದರು. ಈ ಯೋಜನೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 2018ರಲ್ಲಿ ಮಉಖ್ಯಮಂತ್ರಿಯಾಗಿದ್ದಾಗ ಟಿಪಿಆರ್ ಹಂತದವರೆಗೆ ಕೊಂಡೊಯ್ದರು. ಮೇಕೆದಾಟು ಹೋರಾಟ ಮುಂದಿನ ಒಂದು ವರ್ಷದಲ್ಲಿ ಚುನಾವಣೆಯಿದೆ ಎಂದು ಚುನಾವಣಾ ಪ್ರಚಾರಕ್ಕೆ ಸೀಮಿತವಾಗಿರಬಾರದು. ನಾಡು, ನೆಲ, ಜಲ ವಿಷಯದಲ್ಲಿ ಯಾವುದೇ ರಾಜಕೀಯ ಪಕ್ಷ ನಿಂತಲ್ಲಿ ಅದರ ಬೆಂಬಲಕ್ಕೆ ನಿಲ್ಲುತ್ತೇವೆ. ಅದರಲ್ಲಿ ಯಾವುದೇ ತಕರಾರಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ : ಹಿಟ್ನೆಹೆಬ್ಬಾಗಿಲು ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಛಾಯಾ ಮಹದೇವ್ ಅವಿರೋಧ ಆಯ್ಕೆ
ಹನೂರಿನಲ್ಲೂ ಅದ್ದೂರಿ ಸ್ವಾಗತ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳಲು ತೆರಳುತ್ತಿದ್ದ ನಿಖಿಲ್ ಅವರಿಗೆ ಹನೂರು ಪಟ್ಟಣದಲ್ಲಿಯೂ ಅದ್ದೂರಿ ಸ್ವಾಗತ ಕೋರಲಾಯಿತು. ನಿಖಿಲ್ ಹನೂರು ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಮುಖ್ಯವೃತ್ತದಲ್ಲಿ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಜೈಕಾರಗಳನ್ನು ಮೊಳಗಿಸಿ ಪುಚ್ಪಮಾಲಿಕೆ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಖಾಸಗಿ ಬಸ್ ನಿಲ್ದಾಣದವರೆಗೆ ನಡೆದುಬಂದು ಅಲ್ಲಿದ್ದ ಅಭಿಮಾನಿಗಳಿಗೆ ಕೈಬೀಸಿ ನಮಸ್ಕರಿಸಿದರು. ಈ ವೇಳೆ ಖಾಸಗಿ ಬದ್ ನಿಲ್ದಾಣದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಪುಷ್ಪಮಾಲಿಕೆ ಹಾಕಿ ಅಭಿನಂಧಿಸಿದರು.