ರಾಮನಗರ: ನಮ್ಮ ಕುಟುಂಬಕ್ಕೆ ರಾಜಕೀಯ ಪುನರ್ಜನ್ಮ ನೀಡಿ ಬೆಳೆಸುತ್ತಿರುವ ಕ್ಷೇತ್ರದಲ್ಲಿ 2023ಕ್ಕೆ ನಮ್ಮ ಮಗ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ. ನಿಮ್ಮೆಲ್ಲರ ಸಹಕಾರ ನಮಗೆ ನೀಡಿದಂತೆ, ಆತನಿಗೂ ಇರಲಿ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿ ಭಾವುಕರಾದರು.
ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಪಂಚರತ್ನ ರಥಯಾತ್ರೆ ವೇಳೆ 2023ರ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಕ್ಷೇತ್ರದ ಅಭ್ಯರ್ಥಿ ಎಂದು ಸ್ವತಃ ಅನಿತಾ ಕುಮಾರಸ್ವಾಮಿ ಅವರೇ ಘೋಷಣೆ ಮಾಡುವ ಮೂಲಕ ತಮ್ಮ ಪುತ್ರನಿಗೆ ಕ್ಷೇತ್ರ ತ್ಯಾಗ ಮಾಡಿದರು. ಈ ವೇಳೆ ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದರು.
ನಮ್ಮ ಮಾವ, ನನ್ನ ಪತಿ ಹಾಗೂ ನನಗೆ ಕೊಟ್ಟ ಬೆಂಬಲವನ್ನು ನನ್ನ ಮಗನಿಗೂ ಕೊಡಬೇಕು. ಕೆಲವರು ಅಪಪ್ರಚಾರ ಮಾಡುತ್ತಿದ್ದರು, ಅವೆಲ್ಲಕ್ಕೂ ತೆರೆ ಎಳೆಯಬೇಕು ಎಂದು ನಿರ್ಧಾರ ಮಾಡಿದ್ದೆ. ಆತನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ, ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ನಿಖಿಲ್ ಅವರನ್ನು ಅಭ್ಯರ್ಥಿಯನ್ನಾಗಿಸಬೇಕೆಂದು ಕಾರ್ಯಕರ್ತರು, ಮುಖಂಡರು ಒತ್ತಡ ಹಾಕುತ್ತಿದ್ದರು. ನಾನು ತೀರ್ಮಾನ ಮಾಡುವ ಮೊದಲೇ ಅನಿತಾ ಕುಮಾರಸ್ವಾಮಿ ಘೋಷಿಸಿ ಬಿಟ್ಟಿದ್ದಾರೆ. ಅನಿರೀಕ್ಷಿತವಾಗಿ ಘೋಷಣೆಯಾಗಿದೆ. ಇಲ್ಲಿಯೂ ಕುತಂತ್ರ ರಾಜಕಾರಣ ನಡೆಯಬಹುದು. ಅದ್ಯಾವುದನ್ನೂ ಲೆಕ್ಕಿಸದೆ ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವನ ಮುಂದಿನ ರಾಜಕೀಯ ಬದುಕು ನಿಮಗೆ ಬಿಟ್ಟಿದ್ದೇನೆ.
– ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ