Advertisement
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ಪುತ್ರ ನಿಖಿಲ್ ನಾಯಕರಾಗಿ ನಟಿಸಿದ ಚೊಚ್ಚಲ ಚಿತ್ರ “ಜಾಗ್ವಾರ್’ ನೋಡಿದ ಅನೇಕರು ಕುಮಾರಸ್ವಾಮಿಯವರಿಗೆ ಫೋನ್ ಮಾಡಿ, “ಸಿನಿಮಾವೇನೋ ಚೆನ್ನಾಗಿದೆ. ಆದರೆ ಕನ್ನಡದ ನೇಟಿವಿಟಿ ಮಿಸ್ ಆಗಿದೆ. ನಿಮ್ಮ ಈ ಹಿಂದಿನ “ಸೂರ್ಯವಂಶ’, “ಚಂದ್ರಚಕೋರಿ’ ಶೈಲಿಯ ಹಾಡುಗಳು ಬೇಕಿತ್ತು’ ಎಂದರಂತೆ. ಅದು ಕುಮಾರಸ್ವಾಮಿ ಯರಿಗೆ ಹೌದು ಎನಿಸಿದೆ. ಜೊತೆಗೆ “ಜಾಗ್ವಾರ್’ ನಲ್ಲಿ ತೆಲುಗಿನ ವರಿಗೆ ಹೆಚ್ಚಿನ ಅವಕಾಶ ಕೊಡಲಾಗಿದೆ ಎಂಬ ಮಾತು ಕೂಡಾ ಕುಮಾರಸ್ವಾಮಿಯವರ ಕಿವಿಗೆ ಬಿದ್ದಿದೆ. ಈ ಕಾರಣದಿಂದಾಗಿ ಕುಮಾರಸ್ವಾಮಿ ಹಾಗೂ ನಿಖಿಲ್ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಅದು ನಿಖೀಲ್‌ನ ಎರಡನೇ ಸಿನಿಮಾದಲ್ಲಿ ಸಂಪೂರ್ಣವಾಗಿ ಕನ್ನಡದವರಿಗೆ ಅವಕಾಶ ನೀಡಲು ಮತ್ತು ಕನ್ನಡ ನೇಟಿವಿಟಿಯನ್ನು ಬಳಸಿಕೊಳ್ಳಲು. ಅದರಂತೆ ಈಗ ನಿಖೀಲ್‌ನ ಎರಡನೇ ಸಿನಿಮಾ ಆರಂಭವಾಗಿದೆ. ಇತ್ತೀಚೆಗೆ ಈ ಚಿತ್ರದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಈ ಚಿತ್ರದಲ್ಲಿ ಸಂಪೂರ್ಣವಾಗಿ ಕನ್ನಡದವರಿಗೆ ಅವಕಾಶ ನೀಡಲಾಗಿದೆ. ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾವನ್ನು “ಬಹದ್ದೂರ್’ ಚೇತನ್ ನಿರ್ದೇಶಿಸುತ್ತಿದ್ದಾರೆ. ಉಳಿದಂತೆ ತಾಂತ್ರಿಕ ವರ್ಗ ಕೂಡಾ ಸಂಪೂರ್ಣ ಕನ್ನಡದ್ದೇ ಆಗಿದೆ.
Related Articles
Advertisement
ನಾಯಕ ನಿಖೀಲ್‌ಗೆ ಮೊದಲ ಚಿತ್ರದಲ್ಲೇ ಜನ ಇಷ್ಟಪಟ್ಟು, ಒಪ್ಪಿಕೊಂಡ ಖುಷಿ ಇದೆ. ಅವರು ಮೊದಲ ಸಿನಿಮಾದ ಸಂಪೂರ್ಣ ಕ್ರೆಡಿಟ್ ಅನ್ನು ತಂದೆಗೆ ಅರ್ಪಿಸುತ್ತಾರೆ. “ಜಾಗ್ವಾರ್ ಕ್ರೆಡಿಟ್ ತಂದೆಗೆ ಹೋಗುತ್ತದೆ. ಕಳೆದ ಬಾರಿ ನನಗಾಗಿ ರಾಜಕೀಯದಿಂದ ದೂರವಿದ್ದು, ಸಿನಿಮಾದಲ್ಲಿ ತೊಡಗಿಕೊಂಡಿದ್ದರು. ಈ ಬಾರಿ ತಂದೆಗೆ ತೊಂದರೆ ಕೊಡುವುದಿಲ್ಲ. ನಿರ್ಮಾಣದ ಜವಾಬ್ದಾರಿಯೂ ನನಗೇ ಕೊಟ್ಟಿದ್ದಾರೆ. ಆದರೆ, ಅಂತಿಮ ನಿರ್ಧಾರ ತಂದೆಯದ್ದೇ ಆಗಿರುತ್ತದೆ. ಏನೇ ವಿಷಯವಿದ್ದರೂ ಅವರಲ್ಲಿ ಕೇಳಿಯೇ ಮುಂದುವರೆಯುತ್ತೇನೆ. ಚಿತ್ರದ ಕಥೆ ಚೆನ್ನಾಗಿ ಬಂದಿದೆ. ಅದೇ ರೀತಿ ಹಾಡುಗಳು ಕೂಡಾ ಬರಬೇಕೆಂಬುದು ನಮ್ಮ ಆಸೆ. ಸಂಗೀತ ನಿರ್ದೇಶಕ ಹರಿಕೃಷ್ಣ ಅವರಲ್ಲಿ ಐದಕ್ಕೇ ಐದು ಬ್ಲಾಕ್‌ಬ್ಲಿಸ್ಟರ್ ಹಾಡುಗಳನ್ನು ಕೊಡುವಂತೆ ಕೇಳಿದ್ದೇನೆ’ ಎಂದು ಸಿನಿಮಾ ಬಗ್ಗೆ ಹೇಳಿದರು ನಿಖೀಲ್. ಕನ್ನಡ ಹಾಗೂ ತೆಲುಗಿನಲ್ಲಿ ತಯಾರಾಗುತ್ತಿರುವ ಚಿತ್ರ ಇದಾಗಿದ್ದು, ಎರಡು ಭಾಷೆಗೂ ಹೊಂದಿಕೆಯಾಗುವಂತಹ ಟೈಟಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರಂತೆ.
ನಿರ್ದೇಶಕ ಚೇತನ್‌ಗೆ ಮೂರನೇ ಸಿನಿಮಾಕ್ಕೆ ದೊಡ್ಡ ಬ್ಯಾನರ್‌ನಲ್ಲಿ ಅವಕಾಶ ಸಿಕ್ಕ ಖುಷಿ ಇದೆ. “ಜಾಗ್ವಾರ್‌ನಲ್ಲಿ ಒಂದು ಹಾಡು ಬರೆದಿದ್ದೆ. ಈಗ ನಿಖೀಲ್‌ಗೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ದೊಡ್ಡ ಮನೆತನ, ದೊಡ್ಡ ಬ್ಯಾನರ್. ಸಹಜವಾಗಿಯೇ ಖುಷಿಗಿಂತ ಜಾಸ್ತಿ ಭಯ ಇದೆ. ನಿಖೀಲ್ ಅವರ ಎನರ್ಜಿಗೆ ತಕ್ಕಂತಹ ಸಿನಿಮಾ ಮಾಡುವ ಜವಾಬ್ದಾರಿ ನನ್ನ ಮೇಲಿದೆ. ನಿಖೀಲ್ ಅವರಿಗೂ ಕನ್ನಡ ಪ್ರೇಕ್ಷಕರು ಏನು ಬಯಸುತ್ತಾರೆಂಬುದು ಚೆನ್ನಾಗಿ ಗೊತ್ತು. ಈ ಸಿನಿಮಾದಲ್ಲಿ ಅವೆಲ್ಲವನ್ನು ಸೇರಿಸಿದ್ದೇವೆ. ಮುಖ್ಯವಾಗಿ ಸಂಪೂರ್ಣ ಸ್ವತಂತ್ರ ಕೊಟ್ಟು, ಮನೆಯ ವಾತಾವರಣ ಸೃಷ್ಟಿಸಿದ್ದಾರೆ’ ಎಂಬುದು ಚೇತನ್ ಮಾತು. ರಾಜಸ್ತಾನ ಬಿಟ್ಟರೆ ಚಿತ್ರೀಕರಣ ಸಂಪೂರ್ಣವಾಗಿ ಕರ್ನಾಟಕದಲ್ಲೇ ನಡೆಯಲಿದೆಯಂತೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತ, ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ, ಹರ್ಷ, ಇಮ್ರಾನ್ ನೃತ್ಯ, ರವಿ ಸಂತೆಹಕ್ಲು ಕಲೆ, ರಾಮ್-ಲಕ್ಷ್ಮಣ್ ಸಾಹಸ ಚಿತ್ರಕ್ಕಿದೆ. ಸುಮಾರು 100 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.