ನವದೆಹಲಿ: ಹಾಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಲವ್ಲಿನಾ ಬೊರ್ಗೊಹೇನ್ ನಿರೀಕ್ಷೆಯಂತೆ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್ ಅರ್ಹತೆ ಸಂಪಾದಿಸಿದ್ದಾರೆ.
ಇಬ್ಬರೂ ವನಿತಾ ಅರ್ಹತಾ ಸುತ್ತಿನ ಸ್ಪರ್ಧೆಯ ಫೈನಲ್‌ನಲ್ಲಿ ಗೆಲುವು ಸಾಧಿಸಿದರು. ಇವರೊಂದಿಗೆ ನೀತು (48 ಕೆಜಿ) ಮತ್ತು ಜಾಸ್ಮಿನ್ (60 ಕೆಜಿ) ಕೂಡ ಗೇಮ್ಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಎರಡು ಬಾರಿಯ ಸ್ಟ್ರಾಂಜಾ ಮೆಮೋರಿಯಲ್’ ಚಿನ್ನದ ಪದಕ ವಿಜೇತೆ ನಿಖತ್ ಜರೀನ್ 50 ಕೆಜಿ ಫೈನಲ್‌ನಲ್ಲಿ ಹರ್ಯಾಣದ ಮೀನಾಕ್ಷಿ ಅವರನ್ನು 7-0 ಅಂತರದಿಂದ ಪರಾಭವಗೊಳಿಸಿದರು. 70 ಕೆಜಿ ವಿಭಾಗದಲ್ಲಿ ಲವ್ಲಿನಾ ರೈಲ್ವೇಸ್‌ನ ಪೂಜಾ ವಿರುದ್ಧ ಗೆದ್ದು ಬಂದರು. ಎರಡು ಬಾರಿಯ ಯುವ ಚಾಂಪಿಯನ್ ನೀತು (48 ಕೆಜಿ) 2019ರ ಬೆಳ್ಳಿ ಪದಕ ವಿಜೇತೆ ಮಂಜು ರಾಣಿ ಅವರನ್ನು ಸೋಲಿಸಿದರು. ಸ್ಟ್ರಾಂಜಾ ಮೆಮೋರಿಯಲ್‌ನಲ್ಲಿ ಬಂಗಾರ ಗೆದ್ದ ಹಿರಿಮೆಯೂ ನೀತು ಅವರದಾಗಿದೆ.
2021ರ ಏಷ್ಯನ್ ಯುವ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಜಾಸ್ಮಿನ್ (60 ಕೆಜಿ) 2022ರ ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚು ಗೆದ್ದ ಪ್ರವೀಣಾ ಹೂಡಾ ಅವರನ್ನು ಪರಾಭವಗೊಳಿಸಿದರು.
ಭಾರತ ತಂಡ: ನೀತು (48 ಕೆಜಿ), ನಿಖತ್ ಜರೀನ್ (50 ಕೆಜಿ), ಜಾಸ್ಮಿನ್ (60 ಕೆಜಿ), ಲವ್ಲಿನಾ ಬೊರ್ಗೊಹೇನ್ (70 ಕೆಜಿ).