ಪಟಿಯಾಲಾ:ರಖಂ ತರಕಾರಿ ಮಾರುಕಟ್ಟೆ ಪ್ರದೇಶದ ಹೊರಭಾಗದಲ್ಲಿದ್ದ ನಿಹಾಂಗ್ ಸಿಖ್ ಗುಂಪಿನ ಬಳಿ ಕರ್ಫ್ಯೂ ಪಾಸ್ ತೋರಿಸಿ ಎಂದು ಕೇಳಿದ ಸಬ್ ಇನ್ಸ್ ಪೆಕ್ಟರ್ ಕೈಯನ್ನು ಕತ್ತರಿಸಿದ್ದಲ್ಲದೇ, ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಭಾನುವಾರ ಪಂಜಾಬ್ ನ ಸಾನೌರ್ ನಗರದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ನಿಹಾಂಗ್ ಸಿಖ್ ಗುಂಪು ವಾಹನದಲ್ಲಿ ತೆರಳುತ್ತಿದ್ದ ವೇಳೆ ಕರ್ಫ್ಯೂ ಪಾಸ್ ತೋರಿಸುವಂತೆ ಪೊಲೀಸರು ಕೇಳಿದ್ದರು. ಈ ವೇಳೆ ಎಎಸ್ ಐ ಹರ್ಜೀತ್ ಸಿಂಗ್ ಹಾಗೂ ಇತರ ಪೊಲೀಸ್ ಸಿಬ್ಬಂದಿಗಳ ಮೇಲೆ ತಲವಾರಿನಿಂದ ಹಲ್ಲೆ ನಡೆಸಿರುವುದಾಗಿ ವಿವರಿಸಿದೆ.
ಸಹಾಯಕ ಸಬ್ ಇನ್ಸ್ ಪೆಕ್ಟರ್ ಅವರನ್ನು ಕೂಡಲೇ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ಕರೆದೊಯ್ದು ಸರ್ಜರಿ ನಡೆಸುವಂತೆ ಸಲಹೆ ನೀಡಿದ್ದರು. ಘಟನೆಯಲ್ಲಿ ಸಾದಾರ್ ಪಟಿಯಾಲಾ ಪೊಲೀಸ್ ಠಾಣಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗಾಯಗೊಂಡಿದ್ದರು ಎಂದು ವರದಿ ತಿಳಿಸಿದೆ.
ಘಟನೆ ನಡೆದ ಒಂದು ಗಂಟೆ ಬಳಿಕ ಬಲ್ ಬೇರಾ ಗ್ರಾಮದ ಗುರುದ್ವಾರದ ಸಮೀಪ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿದ್ದು, ಇದರಲ್ಲಿ ಐವರು ಹಲ್ಲೆಕೋರರು ಸೇರಿರುವುದಾಗಿ ವರದಿ ವಿವರಿಸಿದೆ.
Related Articles
ಕೋವಿಡ್ 19 ವೈರಸ್ ಹಿನ್ನೆಲೆಯಲ್ಲಿ ಪಂಜಾಬ್ ನಲ್ಲಿ ಲಾಕ್ ಡೌನ್ ಮುಂದುವರಿಸಿದ್ದು, ಬ್ಯಾರಿಕೇಡ್ ಗಳನ್ನು ಹಾಕಿದ್ದು, ಯಾರ ಬಳಿ ಕರ್ಫ್ಯೂ ಪಾಸ್ ಇದೆಯೋ ಅವರಿಗೆ ಮಾತ್ರ ಓಡಾಟಕ್ಕೆ ಅವಕಾಶ ಎಂದು ಸರ್ಕಾರ ತಿಳಿಸಿತ್ತು.