ಕಪುರ್ತಲಾ(ಪಂಜಾಬ್): ನಿಹಾಂಗ್ ಸಿಖ್ ಗುಂಪೊಂದು ಏಕಾಏಕಿ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಪೊಲೀಸ್ ಕಾನ್ಸ್ ಟೇಬಲ್ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಪಂಜಾಬ್ ನ ಕಪುರ್ತಲಾದಲ್ಲಿ ನಡೆದಿದೆ.
ಇದನ್ನೂ ಓದಿ:Nejar Case; ಪ್ರವೀಣ್ ಮತ್ತು ಅಯ್ನಾಝ್ ಗೆ ಎಂಟು ತಿಂಗಳಿನಿಂದ ಪರಿಚಯ: ಎಸ್.ಪಿ ಡಾ.ಅರುಣ್
ಕಪುರ್ತಲಾದಲ್ಲಿನ ಗುರುದ್ವಾರದ ಒಡೆತನಕ್ಕೆ ಸಂಬಂಧಿಸಿದಂತೆ ಘರ್ಷಣೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಮುಂದಾದ ಸಂದರ್ಭದಲ್ಲಿ ನಿಹಾಂಗ್ ಸಿಖ್ ಗುಂಪು ಗುಂಡಿನ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
ಗುರುದ್ವಾರವನ್ನು ಅತಿಕ್ರಮಿಸಿಕೊಂಡಿರುವ ಆರೋಪದಲ್ಲಿ ಹತ್ತು ಮಂದಿ ನಿಹಾಂಗ್ ಸಿಖ್ ರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕಾರ್ಯಾಚರಣೆ ಮುಂದುವರಿದಿರುವುದಾಗಿ ವರದಿ ತಿಳಿಸಿದೆ.
ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರವಾಯು ಪ್ರಯೋಗಿಸಿದ್ದು, ಘಟನಾ ಸ್ಥಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ಹಾಗೂ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಗುರುದ್ವಾರದ ಒಳಗೆ ಇನ್ನೂ ಕನಿಷ್ಠ 30ಕ್ಕೂ ಅಧಿಕ ನಿಹಾಂಗ್ ಸಿಖ್ ಗಳಿದ್ದಾರೆ ಎಂದು ವರದಿ ತಿಳಿಸಿದೆ. ಗುರುದ್ವಾದ ಒಡೆತನದ ವಿಚಾರದಲ್ಲಿ ಎರಡು ನಿಹಾಂಗ್ ಸಿಖ್ ಗುಂಪುಗಳ ನಡುವೆ ಮಾರಾಮಾರಿ ನಡೆದಿರುವುದಾಗಿ ವರದಿ ಹೇಳಿದೆ.