Advertisement

ಆನೆ ದಾಳಿ ಬಳಿಕ ಮಲೆ ಚೌಟಲು ರಾತ್ರಿ ನಿರ್ಬಂಧ

12:45 AM Jan 13, 2019 | |

ಶಬರಿಮಲೆ: ಎರುಮಲೆ – ಪಂಬಾ ನಡುವೆ ಯಾತ್ರಾರ್ಥಿಗಳ ರಾತ್ರಿ ವೇಳೆ ಸಂಚರಿಸಲು ಮಲೆ ಚೌಟಲುಗೆ ಇಡುಕ್ಕಿ ಜಿಲ್ಲೆಯ ಸ್ಥಳೀಯ ಆಡಳಿತ ನಿರ್ಬಂಧ ಹೇರಿದೆ.

Advertisement

ಜ.8ರಂದು ರಾತ್ರಿ ಕಾಡಾನೆ ದಾಳಿಗೆ ವ್ಯಕ್ತಿಯೋರ್ವರು ಮೃತಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಮಲೆ ಚೌಟಲುಗೆ ನಿಷೇಧ ಹೇರಲಾಗಿದೆ.

ತಕ್ಷಣದಿಂದಲೇ ಈ ಆದೇಶವನ್ನು ಜಾರಿಗೆ ತರಲಾಗಿದ್ದು, ರಾತ್ರಿಯಾಗುತ್ತಿದ್ದಂತೆ ಸಮೀಪದ ಬೀರಿಗಳಲ್ಲಿ ಉಳಿದುಕೊಳ್ಳುವಂತೆ ಪೊಲೀಸರು,ಅರಣ್ಯ ಇಲಾಖೆ ಸಿಬ್ಬಂದಿ ಯಾತ್ರಾರ್ಥಿಗಳಿಗೆ ಸೂಚಿಸುತ್ತಿದ್ದಾರೆ. ಮೈಕ್‌ನಲ್ಲಿಯೂ ಪ್ರಕಟಣೆ ಹೊರಡಿಸುತ್ತಿದ್ದು, ರಾತ್ರಿ ವೇಳೆ ಕಾಡಿನ ಹಾದಿಯಲ್ಲಿ ನಡೆದುಕೊಂಡು ಹೋಗುವುದು ಅಪಾಯಕಾರಿ ಎಂಬ ಮುನ್ನೆಚ್ಚರಿಕೆ ನೀಡಲಾಗುತ್ತಿದೆ.

ಕಾಡುಪ್ರಾಣಿಗಳ ಹಾವಳಿ: ಅಲುದಾ ಬೆಟ್ಟದಿಂದ ಪಂಬಾ ನದಿವರೆಗಿನ ಕಾಡು ಹಾದಿಯಲ್ಲಿ ಈ ಹಿಂದೆಯೂ ಹಲವು ದುರ್ಘ‌ಟನೆಗಳು ಸಂಭವಿಸಿದ್ದವು. ಈ ದುರ್ಗಮ ಕಾಡು ಹಲವು ವನ್ಯಜೀವಿಗಳ ಆವಾಸ ಸ್ಥಾನ. ಆದ್ದರಿಂದ ರಾತ್ರಿ ವೇಳೆ ಅಂದರೆ ಸಂಜೆ 6 ಗಂಟೆ ಬಳಿಕ ಕಾಡು ಹಾದಿಯಲ್ಲಿ ನಡೆದು ಹೋಗುವುದಕ್ಕೆ ಈ ಹಿಂದೆಯೇ ನಿಷೇಧ ಹೇರಲಾಗಿತ್ತು. ಆದರೆ ಇದುವರೆಗೆ ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದರಿಂದಾಗಿಯೇ ರಾತ್ರಿ ವೇಳೆ ದುರ್ಘ‌ಟನೆಗಳು ಸಂಭವಿಸುತ್ತಿವೆ. ಈ ಬಾರಿ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.

ಕರಿಮಲ, ಘನಘೋರ ಕಾಡು. ಇಲ್ಲಿ ಎಲ್ಲ ಜಾತಿಯ ಪ್ರಾಣಿಗಳು ಕಾಣಸಿಗುತ್ತವೆ. ಸಿಂಹ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಪ್ರಾಣಿಗಳನ್ನು ಕಂಡಿದ್ದೇನೆ. ಒಂದು ವೇಳೆ ಪ್ರಾಣಿಗಳು ದಾಳಿ ನಡೆಸಿದರೆ ಕಟ್ಟಿಗೆ ರಾಶಿ ಹಾಕಿ ಬೆಂಕಿ ಹಚ್ಚುತ್ತೇವೆ. ಮಕರ ಸಂಕ್ರಮಣದ ದಿನವೇ ವ್ಯಾಪಾರವನ್ನು ಕೊನೆ ಮಾಡಿ,ಹಿಂದಿರುಗುತ್ತೇವೆ ಎಂದು ಕಾಡು ಹಾದಿಯಲ್ಲಿ ಬೀರಿ ನಿರ್ಮಿಸಿಕೊಂಡಿರುವ ವ್ಯಾಪಾರಿ ಶಂಕರನ್‌ ಹೇಳಿದ್ದಾರೆ.

Advertisement

ಯಾತ್ರಾರ್ಥಿ ಬಲಿ: ಜ.8ರಂದು ರಾತ್ರಿ ಸುಮಾರು 11 ಗಂಟೆಗೆ ಸುಮಾರು 15 ಜನ ಯಾತ್ರಾರ್ಥಿಗಳ ತಂಡ ಕಾಡು ಹಾದಿಯಲ್ಲಿ ಶಬರಿಮಲೆಗೆ ಪ್ರಯಾಣ ಬೆಳೆಸಿತ್ತು. ಮುಕ್ಕುಯಿ ಎಂಬಲ್ಲಿಗೆ ತಲುಪುವಾಗ ಆನೆಗಳ ಹಿಂಡು ದಾಳಿ ನಡೆಸಿತ್ತು. ಎಲ್ಲರೂ ತಪ್ಪಿಸಿಕೊಂಡರಾದರೂ ತಮಿಳುನಾಡಿನ ಸೇಲಂ ನಿವಾಸಿ ಪರಮಶಿವಂ (35) ಎಂಬುವರುಕಾಡಾನೆ ದಾಳಿಗೆ ಬಲಿಯಾದರು. ಇವರ ಜತೆಗಿದ್ದ ಬಾಲಕಿಯ ಕೈಗೆ ಸಣ್ಣ ಪುಟ್ಟ ಗಾಯವಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಪರಮಶಿವಂ ಅವರನ್ನು ಯಾತ್ರಾರ್ಥಿಗಳು ಹಾಗೂ ಅರಣ್ಯ ಸಿಬ್ಬಂದಿ ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ನಡೆಸಿದರು.ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಕೊನೆಯುಸಿರೆದಿದ್ದಾರೆ. ಹಿಂದಿನ ವರ್ಷವೂ ಈ ಹಾದಿಯಲ್ಲಿ ಅವಘಡ ಸಂಭವಿಸಿತ್ತು.

ದುರ್ಗಮ ಕಾಡುಗಳು: ಸಮುದ್ರತೀರದಿಂದ 480 ಮೀ.ಎತ್ತರದಲ್ಲಿ, ಕಾಡಿನ ನಡುವೆ ಶಬರಿಮಲೆ ಅಯ್ಯಪ್ಪನ ಸನ್ನಿಧಾನವಿದೆ. ಕೆಲವರು ಪಂಬಾದ ವರೆಗೆ ಬಸ್‌ನಲ್ಲಿ ಆಗಮಿಸಿ, ಬಳಿಕ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ದೈವಿಕ ಅನುಭವ ಪಡೆಯಲು ಬಯಸುವವರು ಮಲೆ ಚೌಟಲು ಮುಂದಾಗುತ್ತಾರೆ. ಎರುಮಲೆಯಲ್ಲಿ ವಾವರ ಮಸೀದಿಗೆ ಬೇಟೆ ತುಲ್ಲಾದೊಂದಿಗೆ ಪ್ರದಕ್ಷಿಣೆ ಹಾಕಿದ ಬಳಿಕ, ಮಲೆ ಚೌಟಲು ಆರಂಭಿಸುತ್ತಾರೆ. ಮೊದಲಿಗೆ ಪೀರೂರತೋಡೆ, ಕಾಲಕಟ್ಟಿ, ಅಲುದಾ, ಕಲ್ಲಿಡಾಂಕುನ್ನು,ಇಂಚಿಪ್ಪಾರಾಕೋಟ್ಟ, ಕರಿಮಲ, ಕಿರುಪಂಬಾ,ಪಂಬಾ ಸಿಗುತ್ತವೆ. ಪಂಬಾದಲ್ಲಿ ಸ್ನಾನ ಮಾಡಿ ಬಳಿಕ, ಪಂಬಾ ಗಣಪತಿ ದೇವಸ್ಥಾನ, ಪಂದಲ ರಾಜನಿಗೆ ಅಯ್ಯಪ್ಪ ಸ್ವಾಮಿ ಸಿಕ್ಕಿದ ಸ್ಥಳ,ನೀಲಿಮಲ ಬೆಟ್ಟ, ಅಪ್ಪಚಿ ಮೇಡು, ಶಬರಿ ಪೀಠ, ಮರಕ್ಕೂಟಂ, ಶರಂಗುತ್ತಿ ದಾಟಿ ಅಯ್ಯಪ್ಪ ಸ್ವಾಮಿಯ ಸನ್ನಿಧಾನ ಎದುರಾಗುತ್ತದೆ.

– ಗಣೇಶ್‌ ಎನ್‌.ಕಲ್ಲಪೆì

Advertisement

Udayavani is now on Telegram. Click here to join our channel and stay updated with the latest news.

Next