ಇಲ್ಲಿಯವರೆಗೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ, ಖಳ ನಟನಾಗಿ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ರಾಕೇಶ್ ಅಡಿಗ ಈಗ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ಹೌದು, ನಟನೆಯಿಂದ ನಿಧಾನವಾಗಿ ನಿರ್ದೇಶನದತ್ತ ಮುಖಮಾಡಿರುವ ರಾಕೇಶ್ ಅಡಿಗ ಸದ್ದಿಲ್ಲದೆ ತಮ್ಮ ಚೊಚ್ಚಲ ನಿರ್ದೇಶನದ “ನೈಟ್ ಔಟ್’ ಚಿತ್ರವನ್ನು ಪೂರ್ಣಗೊಳಿಸಿ ತೆರೆಗೆ ತರುವ ಸನ್ನಾಹದಲ್ಲಿದ್ದಾರೆ. ಅಂದಹಾಗೆ, ರಾಕೇಶ್ ಅಡಿಗ ನಿರ್ದೇಶನದ “ನೈಟ್ ಔಟ್’ ಚಿತ್ರ ಇಂದು ತೆರೆ ಕಾಣುತ್ತಿದ್ದು, ಚಿತ್ರದ ಬಿಡುಗಡೆಗೂ ಮುನ್ನ ಮಾತಿಗೆ ಸಿಕ್ಕಿದ್ದ “ನೈಟ್ ಔಟ್’ ಚಿತ್ರತಂಡ, ಚಿತ್ರದ ಬಗ್ಗೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದೆ.
ಮೊದಲಿಗೆ ಚಿತ್ರದ ಬಗ್ಗೆ ಮಾತಿಗಿಳಿದ ನಿರ್ದೇಶಕ ರಾಕೇಶ್ ಅಡಿಗ, “ಆರಂಭದಿಂದಲೂ ನನಗೆ ನಿರ್ದೇಶನದ ಕಡೆಗೆ ಆಸಕ್ತಿಯಿತ್ತು. ಅದರಲ್ಲೂ ನಾನು ನಟನಾಗಿ ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ನಿರ್ದೇಶಕರ ಕೆಲಸವನ್ನು, ನಿರ್ದೇಶನ ವಿಭಾಗವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಸಾಕಷ್ಟು ತಯಾರಿ ಮಾಡಿಕೊಂಡ ನಂತರ “ನೈಟ್ ಔಟ್’ ಮೂಲಕ ಸ್ವತಂತ್ರ ನಿರ್ದೇಶನಕ್ಕಿಳಿದೆ. ಮಾಮೂಲಿ ಕಥೆಗಳಿಗಿಂತ ಭಿನ್ನವಾಗಿ ಏನಾದ್ರೂ ಹೇಳಬೇಕು ಎನ್ನುವ ಕಾರಣಕ್ಕೆ, ಹೊಸಥರದ ಕಥೆಯೊಂದನ್ನು ಈ ಚಿತ್ರದಲ್ಲಿ ಹೇಳುತ್ತಿದ್ದೇವೆ. ಇದೊಂದು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯ ಚಿತ್ರ. ಟೈಟಲ್ಲೇ ಹೇಳುವಂತೆ ಒಂದು “ನೈಟ್ ಔಟ್’ ಸುತ್ತ ನಡೆಯುವ ಘಟನೆಗಳೇ ಚಿತ್ರದ ಕಥಾಹಂದರ. ಚಿತ್ರದ ಬಹುಭಾಗ ನೈಟ್‌ನಲ್ಲಿಯೇ ನಡೆಯಲಿದೆ. ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಪ್ರತಿಯೊಬ್ಬರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಚಿತ್ರವನ್ನು ಸುಮಾರು ನೂರಕ್ಕೂ ಹೆಚ್ಚು ಕೇಂದ್ರಗಳಲ್ಲಿ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ’ ಎಂಬ ವಿವರಣೆ ಕೊಟ್ಟರು.
ಈ ಹಿಂದೆ “ಸಂಕಷ್ಟಕರ ಗಣಪತಿ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಶ್ರುತಿ ಗೊರಾಡಿಯಾ ಈ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಶ್ರುತಿ, “ಈ ಚಿತ್ರದಲ್ಲಿ ಕೂಡ ನನ್ನ ಪಾತ್ರದ ಹೆಸರು ಶ್ರುತಿ ಅಂತಾನೆ ಇದೆ. ಸಣ್ಣ ಊರಿನಿಂದ ಬೆಂಗಳೂರಿಗೆ ಬರುವ ಮುಗ್ಧ ಹುಡುಗಿಯ ಪಾತ್ರ ನಿರ್ವಹಿಸಿದ್ದೇನೆ. ಭಯ ಮತ್ತು ಮುಗ್ಧತೆಯ ಜೊತೆ ಜೊತೆಯಲ್ಲಿ ಏನೇನು ಸವಾಲುಗಳನ್ನು, ಹೇಗೆಲ್ಲಾ ಎದುರಿಸುತ್ತೇನೆ ಅನ್ನೋದು ನನ್ನ ಪಾತ್ರ. ಚಿತ್ರದಲ್ಲಿ ಡಿ ಗ್ಲಾಮರ್ ಲುಕ್ ಇದ್ದರೂ, ನನ್ನ ಪಾತ್ರಕ್ಕೆ, ಅಭಿನಯಕ್ಕೆ ಸಾಕಷ್ಟು ಸ್ಕೋಪ್ ಇದೆ. ನನ್ನ ಪಾತ್ರಕ್ಕೆ ಬೇರೆ ಬೇರೆ ಶೇಡ್ ಕೂಡ ಇದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
ಚಿತ್ರದ ನಾಯಕ ಭರತ್ ಮಾತನಾಡಿ, “ಆರು ಗಂಟೆಯಲ್ಲಿ ಏನೇನು ನಡೆಯುತ್ತದೆ ಅನ್ನೋದೆ ಚಿತ್ರದ ಕಥೆ. ಇಲ್ಲಿ ಚಿತ್ರದ ಎಲ್ಲಾ ಪಾತ್ರಗಳೂ ಒಂದಕ್ಕೊಂದು ಕನೆಕ್ಟ್ ಆಗುತ್ತವೆ. ಥ್ರಿಲ್ಲರ್ ಜೊತೆ ಕಾಮಿಡಿ ಇದೆ. ಈಗಾಗಲೇ ಹಾಡುಗಳು, ಟ್ರೇಲರ್‌ಗಳಿಗೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಚಿತ್ರ ಕೂಡ ಆಡಿಯನ್ಸ್‌ಗೆ ಇಷ್ಟವಾಗಲಿದೆ’ ಎಂಬ ಭರವಸೆ ವ್ಯಕ್ತಪಡಿಸಿದರು.
ಇನ್ನು ಚಿತ್ರದಲ್ಲಿ ಅಕ್ಷಯ್, ಕಡ್ಡಿಪುಡಿ ಚಂದ್ರು, ಆಶಾರಾಣಿ, ಉಮಾ, ಚಂದನ್ ವಿಜಯ್, ಸಾರಿಕಾ, ರಾಜಶೇಖರ್ ಇತರರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ನೈಟ್ ಔಟ್’ ಚಿತ್ರವನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಸುಮಾರು 38 ದಿನಗಳ ಕಾಲ ಚಿತ್ರೀಕರಿಸಲಾಗಿದೆ. “ಆರ್ಯನ್ ಮೋಷನ್ ಪಿಕ್ಚರ್’ ಬ್ಯಾನರ್‌ನಲ್ಲಿ ಅನಿವಾಸಿ ಕನ್ನಡಿಗ ನವೀನ್ ಕೃಷ್ಣ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ದೃಶ್ಯಗಳಿಗೆ ಅರುಣ್ ಅಲೆಗ್ಸಾಂಡರ್ ಛಾಯಾಗ್ರಹಣ, ರಿತ್ವಿಕ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಸಮೀರ್ ಕುಲಕರ್ಣಿ ಸಂಗೀತ ಸಂಯೋಜಿಸಿದ್ದಾರೆ. ಕೆ. ಕಲ್ಯಾಣ್, ವಿಶ್ವಜಿತ್ ರಾವ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸದ್ಯ ಟ್ರೇಲರ್, ಹಾಡುಗಳ ಮೂಲಕ ಸದ್ದು ಮಾಡುತ್ತಿರುವ “ನೈಟ್ ಔಟ್’ ಹೇಗಿರಲಿದೆ ಎಂಬ ಪ್ರಶ್ನೆಗೆ ಇದೇ ವಾರಾಂತ್ಯಕ್ಕೆ ಉತ್ತರ ಸಿಗಲಿದೆ.