ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್ ಉದ್ಯೋಗಿಗಳಿಗೆ ಗಾಂಜಾ, ಚರಸ್, ಹೆರಾಯಿನ್ ಮೊದಲಾದ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ನೈಜೀರಿಯಾ ಪ್ರಜೆ ಸೇರಿ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಾದಕವಸ್ತು ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನೈಜಿರಿಯಾ ಮೂಲದ ಓಂಕೋನೋವ್ ಬಸಿ ದುಬ್ಸಿ ಹಾಗೂ ಆತನ ಸಹಚರ ಮಹಾರಾಷ್ಟ್ರ ಮೂಲದ ಅಬ್ಟಾಸ್ ಮಸ್ತಾನಿ ಎಂಬಾತನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 4 ಕೆ.ಜಿ 200 ಗ್ರಾಂ. ಗಾಂಜಾ 120 ಗ್ರಾಂ. ಚರಸ್, 5 ಗ್ರಾಂ. ಕೊಕೇನ್, ಎರಡು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಮಾದಕವಸ್ತು ಮಾರಾಟ ದಂಧೆಯಲ್ಲಿ ಭಾಗಿಯಾಗಿರುವ ಆರೋಪಿ ಈ ಹಿಂದೆಯೂ ಮೈಕೋಲೇಔಟ್ ಠಾಣೆ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದು, ಆ ಪ್ರಕರಣ ನ್ಯಾಯಾಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೆಲ ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಾಡಿ ನಗರಕ್ಕೆ ಬಂದಿದ್ದ ಆರೋಪಿಯ ವೀಸಾ ಅವಧಿ ಈಗಾಗಲೇ ಪೂರ್ಣಗೊಂಡಿದ್ದರೂ ನವೀಕರಣಗೊಳಿಸಿಕೊಳ್ಳದೆ ಅಕ್ರಮವಾಗಿ ನೆಲೆಸಿದ್ದಾನೆ.
ಮತ್ತೋರ್ವ ಆರೋಪಿ ಜತೆಗೂಡಿ ಮಾದಕ ವಸ್ತುಗಳನ್ನು ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾಫ್ಟ್ವೇರ್ ಉದ್ಯೋಗಿಗಳಿಗೆ ಮಾರಾಟ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾನೆ. ಈತನಿಗೆ ಮಾದಕವಸ್ತು ಸರಬರಾಜು ಮಾಡುತ್ತಿದ್ದ ಮತ್ತೋರ್ವ ನೈಜೀರಿಯಾ ಮೂಲದ ವ್ಯಕ್ತಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಣಿಪುರ ಮೂಲದ ಆರೋಪಿಗಳು: ಮತ್ತೂಂದು ಪ್ರಕರಣದಲ್ಲಿ ಹೆರಾಯಿನ್ ಮಾರಾಟ ಸಂಬಂಧ ಮಣಿಪುರ ಮೂಲದ ಮೂವರು ಆರೋಪಿಗಳನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮದ್ ಎಜಾಜ್ (24), ಮೊಹಮದ್ ಸೈಯದ್ ಜಿಯಾ ಉಲ್ ಹಕ್, ಮೊಹಮದ್ ಹಬೀಬುರ್ ರೆಹಮಾನ್ ಬಂಧಿತರು. ಆರೋಪಿಗಳಿಂದ 103 ಗ್ರಾಂ. ಹೆರಾಯಿನ್ ಹಾಗೇ 3 ಮೊಬೈಲ್ ಫೋನ್, 25 ಖಾಲಿ ಚಿಕ್ಕ ಪ್ಲಾಸ್ಸಿಕ್ ಡಬ್ಬಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂವರು ಆರೋಪಿಗಳು ನಗರದ ಬೇರೆ ಬೇರೆ ಭಾಗಗಳಲ್ಲಿ ವಾಸವಾಗಿದ್ದು, ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದಾರೆ. ಮಣಿಪುರದ ತಮ್ಮ ಪರಿಚಯಸ್ಥ ಅಮೀರ್ ಎಂಬಾತನಿಂದ ಹೆರಾಯಿನ್ ಖರೀದಿಸಿ, ಇಲ್ಲಿನ ಕಲೇಜು ವಿದ್ಯಾರ್ಥಿಗಳಿಗೆ 1 ಗ್ರಾಂ.ಗೆ 5ರಿಂದ 6 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದರು.
ವಿದೇಶಿ ವಿದ್ಯಾರ್ಥಿಗಳ ಗಡಿಪಾರು ಶೀಘ್ರ: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನಗರದಲ್ಲಿ ಉಳಿದುಕೊಂಡು ಮಾದಕವಸ್ತು ಮಾರಾಟ ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ವಿದೇಶಿಗರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಶೀಘ್ರವೇ ಪಟ್ಟಿ ಸಿದ್ಧವಾದ ಬಳಿಕ ವಿದೇಶಿಗರನ್ನು ಅವರ ದೇಶಕ್ಕೆ ಗಡಿಪಾರು ಮಾಡಲಾಗುವುದು. ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಉಳಿದುಕೊಂಡಿರುವ ಆರೋಪಿಗಳ ಗಡಿಪಾರಿನ ಬಗ್ಗೆಯೂ ಚರ್ಚೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದರು.