ಕೆ.ಆರ್.ಪುರ: ಪಡೆದ ಹಣವನ್ನು ಹಿಂದಿರುಗಿಸಲು ನಿರಾಕರಿಸಿದ ವ್ಯಕ್ತಿಯನ್ನು ಅಪಹರಣ ಮಾಡಿದ್ದ ನೈಜೀರಿಯಾ ಪ್ರಜೆಯನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಸ್ಯಾಮ್ಯುಯಲ್ (34) ಬಂಧಿತ. ಪ್ರಕರಣದ ಪ್ರಮುಖ ಆರೋಪಿ ಸಿಟೇಜ್ ಹಾಗೂ ಇನ್ನೊಬ್ಬ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ.
ಕೆ.ಆರ್.ಪುರದ ಅಯ್ಯಪ್ಪ ನಗರದ ನಿವಾಸಿ ಶೈಲೇಂದ್ರ (18) ಅಪಹರಣಕ್ಕೊಳಗಾದವ. ಖಾಸಗಿ ಕಂಪನಿಯೊಂದರಲ್ಲಿ ಟೆಲಿಪೋನ್ ಅಪರೇಟ್‌ರ್ ಆಗಿರುವ ಶೈಲೇಂದ್ರ, ತಿಂಗಳ ಹಿಂದೆ ಬೆಂಗಳೂರಿಗೆ ಬಂದ ಆರೋಪಿ ಸಿಟೇಜ್‌ನನ್ನು ಪರಿಚಯಿಸಿಕೊಂಡಿದ್ದ. ಈ ನಡುವೆ “ನೈಜೀರಿಯಾದಿಂದ ಹಣ ಬರಬೇಕಿದೆ.
ಸದ್ಯ ನನ್ನ ಬಳಿ ಇಲ್ಲಿನ ಬ್ಯಾಂಕ್ ಖಾತೆ ಇಲ್ಲ. ಹೀಗಾಗಿ ನಿನ್ನ ಖಾತೆಗೆ ಹಣ ಜಮೆ ಮಾಡುತ್ತೇನೆ’ ಎಂದು ಸೀಟೇಜ್ ಶೈಲೇಂದ್ರಗೆ ಹೇಳಿದ್ದ. ಅದರಂತೆ ಶೈಲೇಂದ್ರ ಬ್ಯಾಂಕ್ ಖಾತೆ ವಿವರ ಕೊಟ್ಟಿದ್ದು, ಆರೋಪಿಯು ಆತನ ಖಾತೆಗೆ 49 ಸಾವಿರ ರೂ. ಜಮೆ ಮಾಡಿದ್ದಾನೆ. ಹಣ ಖಾತೆಗೆ ಬಿಳುತ್ತಿದ್ದಂತೆ ಶೈಲೇಂದ್ರ ರಾಗ ಬದಲಿಸಿದ್ದು, ಹಣ ಕೊಡುವುದಿಲ್ಲ ಎಂದು ಸೀಟೇಜ್‌ಗೆ ಧಮ್ಕಿ ಹಾಕಿದ್ದಾನೆ.
ಇದರಿಂದ ಕೋಪಗೊಂಡ ಸಿಟೇಜ್, ಫೆ.10ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಶೈಲೇಂದ್ರನಿಗೆ ಕರೆ ಮಾಡಿ ಹಣದ ವಿಚಾರ ಮಾತನಾಡಲು ಕೆ.ಆರ್.ಪುರಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ತನ್ನ ಸ್ನೇಹಿತ ಸ್ಯಾಮ್ಯುಯಲ್ ಹಾಗೂ ಮತ್ತೂಬ್ಬನ ನೆರವಿನೊಂದಿಗೆ ಶೈಲೇಂದ್ರನನ್ನು ಕಾರಿನಲ್ಲಿ ಅಪಹರಿಸಿ, ಹಳೇ ಮದ್ರಾಸ್ ರಸ್ತೆ ಕಡೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತಾವು ನೀಡಿದ್ದ ಹಣವನ್ನು ಆನ್‌ಲೈನ್ ಮೂಲಕ ತಮ್ಮ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ಬಿಟ್ಟು ಕಳುಹಿಸಿದ್ದಾರೆ.
ಘಟನೆ ನಡೆದ ದಿನ ರಾತ್ರಿ 11 ಗಂಟೆಗೆ ಕೆ.ಆರ್.ಪುರ ಪೊಲೀಸರಿಗೆ ಶೈಲೇಂದ್ರ ದೂರು ನೀಡಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಸ್ಯಾಮ್ಯುಯಲ್‌ನನ್ನು ಬಂಧಿಸಿದ್ದಾರೆ. ಇತರೆ ಇಬ್ಬರಿಗೆ ಹುಡುಕಾಟ ನಡೆಯುತ್ತಿದೆ.
ವಾಣಿಜ್ಯ ವೀಸಾದಡಿ ಸೀಟೇಜ್ ಬೆಂಗಳೂರಿಗೆ ಬಂದಿದ್ದು, ಆನ್‌ಲೈನ್ ವಂಚನೆ ಮೂಲಕ ಹಣವನ್ನು ಶೈಲೇಂದ್ರನ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾನೆ ಎಂಬ ಶಂಕೆಯಿದೆ. ಆರೋಪಿ ಸಿಕ್ಕ ಬಳಿಕವೇ ಸತ್ಯಾಂಶ ಬೆಳಕಿಗೆ ಬರಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದ್ದಾರೆ.