ಕೆ.ಆರ್.ಪುರ: ತಡ ರಾತ್ರಿ ಮನೆ ಕಳ್ಳತನೆಕ್ಕೆ ಯತ್ನಿಸುತ್ತಿದ್ದ ನೈಜೀರಿಯಾ ಪ್ರಜೆ ಸೇರಿ ಇಬ್ಬರನ್ನು ಸಾರ್ವಜನಿಕರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಕೆಆರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಾಣಸಿಯಲ್ಲಿ ಶನಿವಾರ ರಾತ್ರಿ ನಡೆದಿದೆ.
ವಾರಾಣಸಿಯಲ್ಲಿ ಕಳೆದ ಕೆಲ ದಿನಗಳಿಂದಲೂ ನಿರಂತರವಾಗಿ ಮನೆ ಕಳ್ಳತನಗಳು ನಡೆಯುತ್ತಿದ್ದವು. ಜೊತೆಗೆ ತಡ ರಾತ್ರಿ ಕಳ್ಳರು ಗುಂಪು ಗುಂಪಾಗಿ ಬಂದು ಒಂಟಿಯಾಗಿ ಓಡಾಡುವವರ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡುತ್ತಿದ್ದರು. ಇದರಿಂದ ಅತಂಕಕ್ಕೀಡಾಗಿದ್ದ ಸ್ಥಳೀಯರು, ಪೊಲೀಸರಿಗೆ ದೂರು ನೀಡಿದ್ದರು.
ಸ್ಥಳೀಯರೊಡನೆ ಸಭೆ ನಡೆಸಿದ ಪೊಲೀಸರು ಮನೆಗಳ ಬಳಿ ಸಿಸಿಟಿವಿ ಅಳವಡಿಸಿಕೊಳ್ಳುವಂತೆ ಸೂಚಿಸಿದ್ದರು. ಕೆಲ ಮನೆಗಳ ಮಾಲೀಕರು ಸಿಸಿಟಿವಿ ಅಳವಡಿಸಿದ್ದರು. ಕೆಲ ಸಿಸಿಟಿವಿಗಳಲ್ಲಿ ಕಳ್ಳರ ಚಲನವಲನಗಳು ಸೆರೆ ಆಗಿದೆ. ಈ ನಡುವೆ ಶನಿವಾರ ತಡ ರಾತ್ರಿ ಮಂಜುನಾಥ್ ಎಂಬುವರ ಮನೆಗೆ ಕಳ್ಳರು ನುಗ್ಗಲು ಪ್ರಯತ್ನಿಸಿದ್ದರು.
ಈ ವೇಳೆ ನಾಯಿಗಳು ಬೊಗಳಿವೆ. ಇದರಿಂದ ಎಚ್ಚರವಾದ ಮಂಜುನಾಥ್ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಪರಿಚಿತನೊಬ್ಬ ಮನೆ ಮೇಲೆ ಓಡಾಗುತ್ತಿರುವ ದೃಶ್ಯ ಕಂಡು ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರೆಲ್ಲ ಜತೆಗೂಡಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿ ಆಗಿದ್ದಾರೆ.
ಇತ್ತೀಚಿನ ಕಳ್ಳತನ ಪ್ರಕರಣಗಳಿಂದ ರೋಸಿ ಹೋಗಿದ್ದ ನಾಗರಿಕರು ಕಳ್ಳರು ಕೈಗೆ ಸಿಗುತ್ತಲೇ ತೀವ್ರವಾಗಿ ಥಳಿಸಿದ್ದಾರೆ. ನಂತರ ಕೆಆರ್‌ಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಂಧಿತರನ್ನು ನೈಜೀರಿಯಾದ ಸಿನಿಯಾನ್ ಮತ್ತು ಸ್ಥಳೀಯ ರಾಜೇಶ್ ಎಂದು ಗುರುತಿಸಲಾಗಿದೆ.