ನೈಜೀರಿಯಾ: ಇಲ್ಲಿ ಈಶಾನ್ಯ ಬೊರ್ನೊ ರಾಜ್ಯದಲ್ಲಿ ಶನಿವಾರ (ಸ್ಥಳೀಯ ಕಾಲಮಾನ) ಶಂಕಿತ ಮಹಿಳಾ ಆತ್ಮಹತ್ಯಾ ಬಾಂಬರ್ ಗಳ ಸರಣಿ ದಾಳಿಯಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಗ್ವೋಜಾ ಪಟ್ಟಣದಲ್ಲಿ ಮದುವೆ, ಅಂತ್ಯಕ್ರಿಯೆ ಮತ್ತು ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು ದಾಳಿಗಳು ನಡೆದಿದೆ. ಈ ಪ್ರದೇಶದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಇಸ್ಲಾಮಿಸ್ಟ್ ದಂಗೆಯ ನಡುವೆ ಈ ಬ್ಲಾಸ್ಟ್ ನಡೆದಿದೆ.
ಬೋರ್ನೊ ಈ 15 ವರ್ಷಗಳ ಸಂಘರ್ಷದ ಕೇಂದ್ರಬಿಂದುವಾಗಿದೆ. ಈ ದಂಗೆ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರ ಸ್ಥಳಾಂತರಕ್ಕೆ ಕಾರಣವಾಗಿದೆ.
ನೈಜೀರಿಯಾದ ಮಿಲಿಟರಿಯು ಉಗ್ರಗಾಮಿ ಗುಂಪುಗಳನ್ನು ದುರ್ಬಲಗೊಳಿಸಿದೆ, ಈ ಗುಂಪುಗಳು ನಾಗರಿಕರು ಮತ್ತು ಭದ್ರತಾ ಪಡೆಗಳ ಮೇಲೆ ಮಾರಣಾಂತಿಕ ದಾಳಿಗಳನ್ನು ನಡೆಸುತ್ತಿದ್ದಾರೆ.
ಬೊರ್ನೊ ಸ್ಟೇಟ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಏಜೆನ್ಸಿಯ ಮುಖ್ಯಸ್ಥ ಬಾರ್ಕಿಂಡೋ ಸೈದು ಅವರು ಸರಣಿ ಸ್ಪೋಟದಲ್ಲಿ ಮಕ್ಕಳು, ವಯಸ್ಕರು ಮತ್ತು ಗರ್ಭಿಣಿಯರ ಒಳಗೊಂಡಿರುವ ಸಾವುಗಳನ್ನು ದೃಢಪಡಿಸಿದ್ದಾರೆ. ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾಳಿಯ ಹೊಣೆಯನ್ನು ಯಾವುದೇ ಗುಂಪು ಇನ್ನೂ ಹೊತ್ತುಕೊಂಡಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.