ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದಿರು ಧನಾತ್ಮಕತೆ ಮತ್ತು ಹೊಸದಾಗಿ ವಿದೇಶಿ ಬಂಡವಾರ ಹರಿದು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 235 ಅಂಕಗಳ ಭರ್ಜರಿ ಜಿಗಿತವನ್ನು ಸಾಧಿಸಿ ಅಚ್ಚರಿ ಉಂಟುಮಾಡಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 10,167.15 ಅಂಕಗಳನ್ನು ತಲುಪುವ ಮೂಲಕ ಹೊಸ ಎತ್ತರವನ್ನು ಏರಿದ ಸಾಧನೆಯನ್ನು ದಾಖಲಿಸಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 189.31 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,461.92 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.60 ಅಂಕಗಳ ಮುನ್ನಡೆಯೊಂದಿಗೆ 10,156 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬ್ಯಾಂಕ್ ನಿಫ್ಟಿ ಇಂದು 224.40 ಅಂಕಗಳ ಜಿಗಿತವನ್ನು ಸಾಧಿಸಿರುವುದು ಮತ್ತು ಐಟಿ ನಿಪ್ಟಿ 56.05 ಅಂಕಗಳ ಏರಿಕೆಯನ್ನು ಸಾಧಿಸಿರುವುದು ಇಂದಿನ ಆರಂಭಿಕ ವಹಿವಾಟಿನ ವಿಶೇಷ. ನಿಫ್ಟಿ 50 ಶೇರುಗಳ ಪೈಕಿ 42 ಶೇರುಗಳು ಮುನ್ನಡೆ ಸಾಧಿಸಿದರೆ 19 ಶೇರುಗಳು ಹಿನ್ನಡೆಗೆ ಗುರಿಯಾದವು.
ಎಚ್ ಡಿ ಎಫ್ ಸಿ, ಲಾರ್ಸನ್, ಇನ್‌ಫೋಸಿಸ್, ಟಾಟಾ ಮೋಟರ್ ಮತ್ತು ಐಸಿಐಸಿಐ ಬ್ಯಾಂಕ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಭಾರ್ತಿ ಇನ್‌ಫ್ರಾಟೆಲ್, ಲಾರ್ಸನ್, ಇಂಡಸ್‌ಇಂಡ್ ಬ್ಯಾಂಕ್, ಬಜಾಜ್ ಆಟೋ, ಟಾಟಾ ಮೋಟರ್ ಶೇರುಗಳು ಮುನ್ನಡೆ ಸಾಧಿಸಿದವು.
ಟಾಪ್ ಲೂಸರ್‌ಗಳಾಗಿ ಸನ್ ಫಾರ್ಮಾ, ಡಾ. ರೆಡ್ಡಿ ಲ್ಯಾಬ್, ಅರಬಿಂದೋ ಫಾರ್ಮಾ, ಲೂಪಿನ್ ಮತ್ತು ಟಾಟಾ ಸ್ಟೀಲ್ ಶೇರುಗಳು ಹಿನ್ನಡೆಗೆ ಗುರಿಯಾದವು.