ಮುಂಬಯಿ : ಸದೃಢ ಸಾಂಸ್ಥಿಕ ತ್ತೈಮಾಸಿಕ ಆದಾಯ ಮತ್ತು ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೋರಿಬಂದಿರುವ ಧನಾತ್ಮಕ ಸನ್ನಿವೇಶಗಳಿಂದ ಪ್ರೇರಿತವಾದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು ಮಂಗಳವಾರ ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 24 ಅಂಕಗಳ ಮುನ್ನಡೆಯನ್ನು ಕಂಡು ಹೊಸ ದಾಖಲೆಯ ಎತ್ತರವಾಗಿ 10,101 ಅಂಕಗಳ ಮಟ್ಟವನ್ನು ತಲುಪಿತು. ಇದೇ ವೇಳೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 100 ಅಂಕಗಳ ಜಿಗಿತವನ್ನು ಸಾಧಿಸಿತು.
ಭಾರತೀಯ ರಿಸರ್ವ್ ಬ್ಯಾಂಕ್ ನಾಳೆ ಬುಧವಾರ ಕೈಗೊಳ್ಳಲಿರುವ ಹಣಕಾಸು ನೀತಿಯಲ್ಲಿ ಶೇ.0.25ರಷ್ಟು ಬಡ್ಡಿ ದರ ಕಡಿತ ಮಾಡುವುದೆಂಬ ನಿರೀಕ್ಷೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆ ಇಂದು ತೇಜಿಯನ್ನು ಕಂಡಿರುವುದಾಗಿ ವಿಶ್ಲೇಷಕರು ಹೇಳಿದ್ದಾರೆ.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 44.07 ಅಂಕಗಳ ಮುನ್ನಡೆಯನ್ನು ಕಾಯ್ದುಕೊ,ಡು 32,559.01 ಅಂಕಗಳ ಮಟ್ಟದಲ್ಲೂ, ನಿಫ್ಟಿ 18.60 ಅಂಕಗಳ ಮುನ್ನಡೆಯೊಂದಿಗೆ 10,095.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟೆಕ್ ಮಹೀಂದ್ರ, ಎಸ್ ಬ್ಯಾಂಕ್, ಎಸ್‌ಬಿಐ, ಮಾರುತಿ ಸುಜುಕಿ, ಎಚ್ ಡಿ ಎಫ್ ಸಿ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಟೆಕ್ ಮಹೀಂದ್ರ, ಹಿಂಡಾಲ್ಕೋ, ಅರಬಿಂದೋ ಫಾರ್ಮಾ, ಡಾ. ರೆಡ್ಡೀಸ್ ಲ್ಯಾಬ್, ವಿಪ್ರೋ ಕಾಣಿಸಿಕೊಂಡರೆ ಟಾಪ್ ಲೂಸರ್‌ಗಳಾಗಿ ಎಚ್ ಡಿ ಎಫ್ ಸಿ, ಏಶ್ಯನ್ ಪೇಂಟ್ಸ್, ಲಾರ್ಸನ್, ಒಎನ್‌ಜಿಸಿ, ಎಚ್‌ಸಿಎಲ್ ಟೆಕ್ ಶೇರುಗಳು ಕಂಡು ಬಂದವು.