Advertisement

Nipah: ನಿಫಾ ವೈರಸ್‌: ಆರೋಗ್ಯ ಇಲಾಖೆ ಅಲರ್ಟ್‌

11:02 PM Sep 13, 2023 | Team Udayavani |

ಬೆಂಗಳೂರು: ಕೇರಳದಲ್ಲಿ ಭೀತಿ ಮೂಡಿಸಿರುವ ನಿಫಾ ವೈರಸ್‌ ರಾಜ್ಯಕ್ಕೂ ಕಾಲಿಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಬುಧವಾರ ಮಹತ್ವದ ಸಭೆ ನಡೆಯಿತು.

Advertisement

ಕೇರಳದಲ್ಲಿ ನಿಫಾ ವೈರಸ್‌ ಉಲ್ಬಣಗೊಳ್ಳುವ ಲಕ್ಷಣ ಗೊಚರಿಸಿದ್ದು, ನಿಫಾ ವೈರಸ್‌ ತಗುಲಿ ತೀವ್ರ ಜ್ವರದಿಂದ ಬಳಲುತ್ತಿದ್ದ ಇಬ್ಬರು ಸಾವನ್ನಪ್ಪಿರುವುದು ಆತಂಕಕ್ಕೀಡು ಮಾಡಿದೆ. ನೆರೆ ರಾಜ್ಯದಲ್ಲಿ ನಿಫಾ ವೈರಸ್‌ ವರದಿಯಾದ ಬೆನ್ನಲ್ಲೇ ಕರ್ನಾಟಕದಲ್ಲೂ ಆರೋಗ್ಯ ಇಲಾಖೆ ಅಲರ್ಟ್‌ ಆಗಿದ್ದು, ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ನಿಗಾಕ್ಕೆ ಸೂಚಿಸಲಾಗಿದೆ. ದ.ಕ.ದ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಶಂಕಿತ ಪ್ರಕರಣ ದಾಖಲಿಸಿಕೊಂಡು, ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಪ್ರತಿ ಜಿಲ್ಲೆಯ ಡಿಎಚ್‌ಒಗಳ ಜತೆಗೆ ವೀಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿ ರಾಜ್ಯದಲ್ಲಿ ನಿಫಾ ವೈರಸ್‌ನಿಂದಾಗುವ ಪರಿಣಾಮ ಹಾಗೂ ಮುನ್ನೆಚ್ಚರಿಕೆ ವಹಿಸುವ ಕುರಿತು ಚರ್ಚಿಸಿದರು.

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌, ಆಯುಕ್ತ ರಂದೀಪ್‌, ಆರೋಗ್ಯ ಸೇವೆ ನಿರ್ದೇಶಕ ನವೀನ್‌ ಭಟ್‌ ಸೇರಿದಂತೆ ಕೆಲವು ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ನಿಫಾ ವೈರಸ್‌ ಪತ್ತೆಯಾಗಿಲ್ಲ
ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ನಿಫಾ ಕುರಿತು ಎಚ್ಚರಿಕೆ ವಹಿಸಲು ಹೇಳಿದ್ದು, ರಾಜ್ಯದಲ್ಲಿ ನಿಫಾ ವೈರಸ್‌ ಪತ್ತೆಯಾಗಿಲ್ಲ. ಹೀಗಾಗಿ ಆತಂಕಪಡುವ ಪರಿಸ್ಥಿತಿ ಇಲ್ಲ. ಇದು ಗಾಳಿಯಲ್ಲಿ ಹರಡುವ ರೋಗವಲ್ಲ. ಬಾವಲಿಗಳು, ಮನುಷ್ಯರಿಂದ ಇದು ಬರುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರಬೇಕು. ನಿಫಾ ಲಕ್ಷಣ ಕಂಡು ಬಂದರೆ ಕ್ಷಿಪ್ರ ನಿರ್ವಹಣೆ ಮಾಡುವ ತಂಡಗಳು ಸಭೆ ನಡೆಸಿ ಪೂರ್ವಭಾವಿ ಕ್ರಮ ತೆಗೆದುಕೊಳ್ಳಲು ತಯಾರಾಗಿರಬೇಕು ಎಂದು ಹೇಳಿದ್ದೇವೆ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ನಿಫಾ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಫಾ ಲಕ್ಷಣಗಳು ಕಂಡು ಬಂದರೆ ತತ್‌ಕ್ಷಣ ಪರೀಕ್ಷೆ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ನಿಫಾ ನಿಯಂತ್ರಣಕ್ಕೆ ಏನೆಲ್ಲ ಸೂಚನೆ ?
ನಿಫಾ ವೈರಸ್‌ ಬಗ್ಗೆ ಸಭೆ ನಡೆಸಿದ ಬಳಿಕ ಇದರಿಂದ ಉಂಟಾಗುವ ಪರಿಣಾಮ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.
*ದ.ಕ.ದ ಎಲ್ಲ ಸರಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳು ನಿಫಾ ಶಂಕಿತ ಪ್ರಕರಣ ದಾಖಲಿಸಿಕೊಂಡು, ಕೂಡಲೇ ಜಿಲ್ಲಾ ಕಣ್ಗಾವಲು ಕಚೇರಿ/ಘಟಕಕ್ಕೆ ತಿಳಿಸಲು ಎಚ್ಚರಿಕೆ ನೀಡಬೇಕು.
*ನಿಫಾ ವೈರಸ್‌ನಿಂದ ಉಂಟಾಗಬಹುದಾದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದ ಕೇರಳ ಗಡಿ ಪ್ರದೇಶಗಳಲ್ಲಿ ಎಚ್ಚರಿಕೆ ಮತ್ತು ಜಾಗರೂಕತೆ ಕ್ರಮ ವಹಿಸಬೇಕು.
*ನಿಫಾ ವೈರಸ್‌ ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲಾ ಕ್ಷಿಪ ಪ್ರತಿಕ್ರಿಯೆ ತಂಡದ ಸಭೆ ನಡೆಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಅಗತ್ಯ ಕ್ರಮ ವಹಿಸಬೇಕು.
*ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು ಮತ್ತು ಎಲ್ಲ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ನಿಫಾ ವೈರಸ್‌ ನಿರ್ವಹಣೆಗಾಗಿ 10 ಹಾಸಿಗೆಗಳ ಪ್ರತ್ಯೇಕ ವಾರ್ಡ್‌ ಅನ್ನು ಕಾಯ್ದಿರಿಸಬೇಕು. ಆಮ್ಲಜನಕ ಮತ್ತು ಇತರ ಅಗತ್ಯ ಔಷಧಗಳನ್ನೊಳಗೊಂಡಂತೆ ಎಲ್ಲ ಪಿಎಚ್‌ಸಿ ವೈದ್ಯಾಧಿಕಾರಿಗಳಿಗೆ ಜ್ವರದ ಕಣ್ಗಾವಲು ಘಟಕ ಬಲಪಡಿಸಲು ಸೂಚಿಸಬೇಕು.
*ಅಗತ್ಯವಿರುವ ಔಷಧ ಶೇಖರಿಸಿಟ್ಟುಕೊಳ್ಳಲು ಮತ್ತು ನಿಫಾ ರೋಗ ಲಕ್ಷಣಗಳಿಗೆ ಕ್ಷೇತ್ರ ಸಿಬಂದಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕು.
*ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳಲ್ಲಿ ವರದಿಯಾಗಿರುವ ಯಾವುದೇ ಶಂಕಿತ ಪುಕರಣಗಳ ಮಾದರಿಗಳನ್ನು ಪುಣೆಯಲ್ಲಿನ ಎನ್‌ಐವಿ ಪ್ರಯೋಗಾಲಯಕ್ಕೆ ಕಳುಹಿಸಲು ವ್ಯವಸ್ಥೆ ಮಾಡಬೇಕು.
*ಸಾರ್ಜನಿಕರಿಗೆ ಈ ಬಗ್ಗೆ ತಿಳುವಳಿಕೆ ನೀಡಲು, ಅರಿವು ಮೂಡಿಸಲು, ಜಾಗೃತಿ ವಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next