Advertisement

ನಿಡ್ಪಳ್ಳಿ  ಜನತಾ ಕಾಲನಿ ರಸ್ತೆಗೆ ಕಾಂಕ್ರೀಟ್‌: ಸಾರ್ವಜನಿಕರ ಒತ್ತಾಯ

10:40 AM Oct 12, 2018 | Team Udayavani |

ನಿಡ್ಪಳ್ಳಿ : ನಿಡ್ಪಳಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿಡ್ಪಳಿ ಜನತಾ ಕಾಲನಿಯ ರಸ್ತೆಗೆ ಕಾಂಕ್ರೀಟ್‌ ಹಾಕುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.

Advertisement

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾಕರು, ಹಿಂದುಳಿದ ಸಮುದಾಯದ ಸುಮಾರು 32 ಮನೆಗಳು ಈ ಕಾಲನಿಯಲ್ಲಿ ಇದ್ದು, ಆರು ವರ್ಷಗಳಿಂದ ರಸ್ತೆಗೆ ಕಾಂಕ್ರೀಟ್‌ ಹಾಕು ವಂತೆ ಬೇಡಿಕೆ ಸಲ್ಲಿಸುತ್ತಿದ್ದಾರೆ. ಭರವಸೆ ಸಿಕ್ಕಿದ್ದರೂ ಕಾರ್ಯ ರೂಪಕ್ಕೆ ಬರುತ್ತಿಲ್ಲ. ಮಳೆಗಾಲದಲ್ಲಿ ರಸ್ತೆ ಕೆಸರು ಗದ್ದೆಯಂತಾಗಿ ಸಂಚಾರಕ್ಕೆ ಕಷ್ಟವಾಗುತ್ತಿದೆ. ಮುಖ್ಯ ರಸ್ತೆಯಿಂದ ಕಾಲನಿಗೆ ಸುಮಾರು 400 ಮೀ. ಉದ್ದದ ರಸ್ತೆಯಿದ್ದು, ಆದಷ್ಟು ಬೇಗನೆ ದುರಸ್ತಿಯಾಗಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಈ ಕಾಲನಿಯಲ್ಲಿ ಒಂದು ಅಂಗನವಾಡಿ ಕೇಂದ್ರ ಹಾಗೂ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕೇಂದ್ರವೂ ಇವೆ. ಈ ಹಿಂದೆ ಆಗಿನ ಶಾಸಕರು ಹಾಗೂ ಸಂಸದರಿಗೂ ಮನವಿ ನೀಡಲಾಗಿದೆ. ಆದರೆ, ಭರವಸೆ ಈಡೇರಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ಪ್ರಯತ್ನಿಸುತ್ತಿಲ್ಲ ಎನ್ನುವುದು ಸ್ಥಳೀಯರ ಬೇಸರ.ಹಿಂದೊಮ್ಮೆ ಶಾಸಕರು ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಈ ಕುರಿತು ಗ್ರಾಮಸಭೆಯಲ್ಲಿ ಎಂಜಿನಿಯರ್‌ ಅವರಲ್ಲಿ ಪ್ರಶ್ನಿಸಿದಾಗ, ಎರಡು ದಿನಗಳಲ್ಲಿ ಪರಿಶೀಲಿಸಿ ತಿಳಿಸುವುದಾಗಿ ಹೇಳಿದ್ದರು. ಆಮೇಲೆ ಪತ್ತೆಯೇ ಇಲ್ಲ ಎಂದು ನಿವಾಸಿಗಳು ಹೇಳುತ್ತಿದ್ದಾರೆ.

ಬೀದಿ ದೀಪಗಳೂ ಬೇಕು
ಜನತಾ ಕಾಲನಿ ವ್ಯಾಪ್ತಿ ವಿಸ್ತಾರವಾಗಿದೆ. ರಾತ್ರಿ ವೇಳೆ ವಿಷ ಜಂತುಗಳ ಕಾಟವೂ ಇದೆ. ಹೀಗಾಗಿ, ಬೀದಿ ದೀಪಗಳ ಆವಶ್ಯಕತೆ ಇದೆ. ಈಗ ಕೇವಲ ಒಂದು ಸೋಲಾರ್‌ ದೀಪ ಮಾತ್ರವಿದ್ದು, ಅದು ಸಾಕಾಗುವುದಿಲ್ಲ. ಇಡೀ ಕಾಲನಿ ಬೆಳಗುವಷ್ಟರ ಮಟ್ಟಿಗಾದರೂ ಬೀದಿ ದೀಪಗಳ ಅಗತ್ಯವಿದ್ದು, ಅದನ್ನು ತ್ವರಿತವಾಗಿ ಒದಗಿಸಿಕೊಡುವಂತೆ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ.

ಜನಪ್ರತಿನಿಧಿಗಳು ಸ್ಪಂದಿಸಲಿ
ನಿಡ್ಪಳ್ಳಿಯ ದೊಡ್ಡ ಕಾಲನಿಯಾಗಿರುವ ನಮ್ಮ ಜನತಾ ಕಾಲನಿಯ ಅಭಿವೃದ್ಧಿ ಬಗ್ಗೆ ಜನಪ್ರತಿನಿಧಿಗಳು ಆಸಕ್ತಿ ತೋರದಿರುವುದು ಅಸಮಾಧಾನ ತಂದಿದೆ. ಕಾಲನಿಯ ರಸ್ತೆ ಕಾಂಕ್ರೀಟ್‌ ಮಾಡಲು ಮತ್ತು ಬೀದಿ ದೀಪ ಅಳವಡಿಸಲು ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸಿದರೂ ನಮಗೆ ಸಿಕ್ಕಿದ್ದು ಭರವಸೆ ಮಾತ್ರ.
 - ನವೀನ್‌ ರೊಡ್ರೀಗಸ್‌
   ಕಾಲನಿ ನಿವಾಸಿ

Advertisement

ಕಾಂಕ್ರೀಟ್‌ಗೆ ಪ್ರಯತ್ನ
ಹಿಂದಿನ ಶಾಸಕರು ಕಾಲನಿ ಅಭಿವೃದ್ಧಿಗೆ 2 ಲಕ್ಷ ರೂ. ಮೀಸಲಿಟ್ಟಿದ್ದಾರೆ. ಪಂಚಾಯತ್‌ನಿಂದಲೂ 2 ಲಕ್ಷ ರೂ. ಅನುದಾನ ಒಧಗಿಸಿ, ಒಟ್ಟು 4 ಲಕ್ಷ ರೂ. ವೆಚ್ಚದಲ್ಲಿ ಕಾಲನಿಯ ರಸ್ತೆಗೆ ಕಾಂಕ್ರೀಟ್‌ ಹಾಕಲು ಪ್ರಯತ್ನಿಸಲಾಗುವುದು. ಮುಂದೆ ಹಂತ ಹಂತವಾಗಿ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು.
 - ಅವಿನಾಶ್‌ ರೈ ಕುಡ್ಚಿಲ
    ಉಪಾಧ್ಯಕ್ಷ, ನಿಡ್ಪಳ್ಳಿ  ಗ್ರಾ.ಪಂ

 ಗಂಗಾಧರ ಸಿ.ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next