Advertisement

ಕುರಿಯ, ನಿಡ್ಲೆ  ಕರುವೋಳು ಸಂಸ್ಮರಣೆ –ಪ್ರಶಸ್ತಿ ಪ್ರದಾನ

06:00 AM May 04, 2018 | Team Udayavani |

ತೆಂಕುತಿಟ್ಟು ಯಕ್ಷಗಾನದ ಪರಿಧಿಯನ್ನು ಹಾಗೂ ಖ್ಯಾತಿಯನ್ನು ರಾಷ್ಟ್ರ ವ್ಯಾಪಿಯಾಗಿ ವಿಸ್ತರಿಸಿದವರು ದಿ. ಕುರಿಯ ವಿಠಲ ಶಾಸ್ತ್ರಿಗಳು. ಗತಿಸಿದ ನಾಲ್ಕು ದಶಕಗಳ ನಂತರವೂ ಕಲಾಭಿಮಾನಿಗಳ ನೆನಪಿನಲ್ಲಿ ಜೀವಂತವಾಗಿದ್ದಾರೆ. ಧರ್ಮಸ್ಥಳ ಮೇಳವನ್ನು ಕೂಡ ಮುನ್ನಡೆಸಿದ ಶಾಸ್ತ್ರಿಗಳಿಗೆ ಸಾರಥಿಯಾದವರು ಸಹೋದರ ರಾಮ ಶಾಸ್ತ್ರಿಗಳು. ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಚಾರಿಟೇಬಲ್‌ ಟ್ರಸ್ಟ್‌ ಪ್ರತಿವರ್ಷ ಅವರ ಸಂಸ್ಮರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳುತ್ತಿದೆ. ಜೊತೆಗೆ ಅವರ ಪರಮಾಪ್ತರಾದ ನೆಡ್ಲೆ ನರಸಿಂಹ ಭಟ್‌ ಮತ್ತು ಕರುವೊಳು ದೇರಣ್ಣ ಶೆಟ್ಟಿ ಸ್ಮರಣಾರ್ಥ ಗೌರವ ಸಮರ್ಪಣೆಯೂ ನಡೆಯುತ್ತದೆ. ಈ ವರ್ಷದ ಕಾರ್ಯಕ್ರಮ ಮೇ 5ರಂದು ಕುರಿಯ ಸಮೀಪದ ಕುರುಡಪದವು ಎಂಬಲ್ಲಿ ನಡೆಯಲಿದೆ. ಇದೇ ಸಂದರ್ಭ ಕಲಾವಿದರಾದ ಬೆಳ್ಳಾರೆ ಮಂಜುನಾಥ ಭಟ್‌, ಸುಬ್ರಹ್ಮಣ್ಯ ಧಾರೇಶ್ವರ ಹಾಗೂ ಕುಂಬ್ಳೆ ಶ್ರೀಧರ ರಾವ್‌ ಇವರನ್ನು ಗೌರವಿಸಲಾಗುವುದು. 

Advertisement

ಸುಬ್ರಹ್ಮಣ್ಯ ಧಾರೇಶ್ವರ 
ಬಡಗುತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ. ಬದುಕಿನ ಬಹುಭಾಗವನ್ನು ತಿರುಗಾಟದಲ್ಲಿಯೇ ಕಳೆದವರು. ಕಾಳಿಂಗ ನಾವಡರಿಂದ ಪ್ರೇರಿತರಾಗಿ ಭಾಗವತಿಕೆಯ ಕಡೆಗೆ ಮನಮಾಡಿದ ಧಾರೇಶ್ವರರು ಗುರುಗಳಾಗಿ ಗೌರವಿಸಿದ್ದು ನಾರ್ಣಪ್ಪ ಉಪ್ಪೂರರನ್ನು. ಮಹಾನ್‌ ಮದ್ದಲೆಗಾರ ದುರ್ಗಪ್ಪ ಗುಡಿಗಾರರ ತುಂಬು ಪ್ರೋತ್ಸಾಹ ಇವರ ಯಶಸ್ಸಿನಲ್ಲಿ ಪ್ರಧಾನ ಪಾತ್ರವಹಿಸಿತ್ತು. 

ಧಾರೇಶ್ವರರು ರಂಗದ ಹಾಗೂ ಅದರ ಹಿಂದಿನ ಸಂಪೂರ್ಣ ಜ್ಞಾನ ಹೊಂದಿದವರು. ಕಾಲಕ್ಕೆ ಅಗತ್ಯವಾದ ಹೊಂದಾಣಿಕೆ ಹಾಗೂ ಹೊಸತುಗಳ ಜೋಡಣೆಯೊಂದಿಗೆ ಆಟಕ್ಕೆ ವಿಶೇಷ ಕಳೆಗೂಡಿಸುವ ಚತುರರು. ಇವರ ಸಿರಿಕಂಠದ ಮಾಧುರ್ಯ, ಸಾಹಿತ್ಯ ಸ್ಪಷ್ಟತೆ, ಭಾವಕ್ಕೆ ಜೀವ ತುಂಬುವ ವೈಶಿಷ್ಟ್ಯ, ಎಲ್ಲರೊಂದಿಗೂ ಬೆರೆವ ಸಹೃದಯ, ಸರಳತೆ ಅನುಕರಣೀಯ. ತೆಂಕು- ಬಡಗು ಭೇದವನ್ನು ಮೀರಿ ನಿಂತವರು. ಸುಬ್ರಹ್ಮಣ್ಯ ಧಾರೇಶ್ವರರ ಗಾನ ಲಹರಿ ಸುದೀರ್ಘ‌ ಕಾಲ ತೇಲಿ ಬರಲಿ ಎನ್ನುವ ಸದಾಶಯದೊಂದಿಗೆ ಖ್ಯಾತ ಮದ್ದಲೆಗಾರ ನೆಡ್ಲೆ ನರಸಿಂಹ ಭಟ್ಟರ ಸ್ವರಣಾರ್ಥ ಕೊಡಮಾಡುವ ಪ್ರಶಸ್ತಿ ಸಲ್ಲುತ್ತದೆ. 

ಕುಂಬಳೆ ಶ್ರೀಧರ ರಾವ್‌ 
ಪಾರ್ತಿಸುಬ್ಬನ ಊರಿನಿಂದ ಯಕ್ಷಗಾನ ಕ್ಷೇತ್ರಕ್ಕೆ ಕೊಡಲ್ಪಟ್ಟ ಪ್ರತಿಭಾವಂತ ಕಲಾವಿದ ಕುಂಬ್ಳೆ ಶ್ರೀಧರ ರಾವ್‌. 68ರ ಹರಯದಲ್ಲಿಯೂ ಬತ್ತದ ಉತ್ಸಾಹ. ಕುಂಬ್ಳೆ ಚಂದು ಮತ್ತು ಕುಂಬ್ಳೆ ಕಮಲಾಕ್ಷರಲ್ಲಿ ನಾಟ್ಯ ಕಲಿತು ಮೊದಲಿಗೆ ಸೇರಿದ್ದು ಇರಾ ಮೇಳಕ್ಕೆ ನಂತರ ಕೂಡ್ಲು, ಮೂಲ್ಕಿ ಕರ್ನಾಟಕ ಮೇಳಗಳಲ್ಲಿ ದುಡಿದು ಧರ್ಮಸ್ಥಳಕ್ಕೆ ಪಾದಾರ್ಪಣೆ. 
ಸ್ತ್ರೀ ವೇಷದಲ್ಲಿ ಮಿಂಚಿದ ಶ್ರೀಧರ ರಾಯರಿಗೆ ಕೃತಕ ಸ್ವರದ ವ್ಯಾಮೋಹವಿಲ್ಲ. ಪಾತ್ರಕ್ಕೆ ಒಪ್ಪುವ ಮುಖ, ಲಾಲಿತ್ಯಪೂರ್ಣ ಆಂಗಿಕಾಭಿನಯ, ಪ್ರಬುದ್ಧ ಮಾತುಗಾರಿಕೆ, ಚುರುಕಿನ ನಾಟ್ಯ, ಪ್ರಸಂಗಕ್ಕೆ ಪೂರಕವಾಗುವ ಪರಿಪಕ್ವತೆ ಇವುಗಳಿಂದಾಗಿ ರಾಯರು ಗೆದ್ದಿದ್ದಾರೆ. ಶೇಣಿಯವರಿಂದ ಮಾತುಗಾರಿಕೆಗೆ ಪ್ರೇರಣೆ ದೊರಕಿದ್ದು ಎನ್ನುವ ಇವರು ಪ್ರಸಂಗಕ್ಕೆ ಬೇಕಾದಷ್ಟು ಮಾತನಾಡುತ್ತಾರೆ. ಪ್ರಕೃತ ವಯೋ ಸಹಜ ಮಿತಿಗಳಿಂದ ಪುರುಷ ಪಾತ್ರ ನಿರ್ವಹಿಸುವ ಇವರಿಗೆ ಅನೇಕ ಸನ್ಮಾನಗಳು ದೊರೆತಿವೆ. ಇದೀಗ ಹಿರಿಯ ಕಲಾವಿದ ಕರುವೋಳು ದೇರಣ್ಣ ಶೆಟ್ಟಿ ಅವರ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿಯೂ ಸೇರ್ಪಡೆಯಾಗುತ್ತದೆ. 

ಬೆಳ್ಳಾರೆ ಮಂಜುನಾಥ ಭಟ್‌ 
ಬಣ್ಣದ ಬದುಕಿನಲ್ಲಿ 42 ಸಂವತ್ಸರ ಸವೆಸಿದ ಬೆಳ್ಳಾರೆ ಮಂಜುನಾಥ ಭಟ್ಟರಿಗೆ ಈಗ 58 ವರ್ಷ. ವೈದಿಕ ಮನೆತನದಲ್ಲಿ ಹುಟ್ಟಿ ಬೆಳೆದ ಇವರಿಗೆ ಕಲಾವಾಸನೆ ಸಹಜವಾಗಿ ದೊರಕಿತ್ತು. ಚೆಂಡೆ ಮದ್ದಳೆ ವಾದನ ಭಟ್ಟರಲ್ಲಿಯೂ ಆಸಕ್ತಿ ಬೆಳೆಯಲು ಕಾರಣವಾಯಿತು. ಧರ್ಮಸ್ಥಳದ ತರಬೇತಿ ಕೇಂದ್ರದಲ್ಲಿ ಸೇರಿ, ಪಡ್ರೆ ಚಂದು ಗುರುಗಳಾಗಿದ್ದಾಗ ಧಾರಾಳ ಕಲಿತರು. ಕೂಡ್ಲು ಮೇಳದಲ್ಲಿ ಗೆಜ್ಜೆ ಕಟ್ಟಿದರೂ ದೀರ್ಘ‌ಕಾಲದ ತಿರುಗಾಟ ಕಟೀಲು ಮೇಳದಲ್ಲಿ. ಬಾಲಗೋಪಾಲ ವೇಷದಿಂದ ತೊಡಗಿ ಕಂಸನ ವರೆಗೆ, ಎಲ್ಲಾ ರೀತಿಯ ವೇಷಗಳನ್ನು ಮಾಡಿದ ಅನುಭವಿ. ಎದುರು ವೇಷದಲ್ಲಿ ಮೆರೆಯುವ ಭಟ್ಟರು ಚೌಕಿಯಲ್ಲಿ ಸಹನಾ ಮೂರ್ತಿ. ಸಹಕಲಾವಿದರಿಗೆ ಸಹಕಾರಿಯಾಗಿದ್ದು ರಂಗನಡೆಯನ್ನು ಚೆನ್ನಾಗಿ ಬಲ್ಲ ಪ್ರಬುದ್ಧ ಕಲಾವಿದ. ಆರಕ್ಕೇರದೆ ಮೂರಕ್ಕೆ ಇಳಿಯದೆ ರಂಗಸ್ಥಳ ತುಂಬಬಲ್ಲ ವ್ಯಕ್ತಿತ್ವ. ದುಂಡಗಿನ ಮುಖ, ಆಯದ ಆಳಂಗ, ತೂಕದ ಮಾತು ಬೆಳ್ಳಾರೆಯವರ ಸಂಪತ್ತು. ಅನೇಕ ಕಡೆ ನಾಟ್ಯ ತರಬೇತಿ ತರಗತಿಗಳನ್ನು ನಡೆಸಿದ ಅನುಭವಿ. ತೃಪ್ತ ಸಂಸಾರಿ ಹಾಗೂ ಸಂತೃಪ್ತ ಕಲಾವಿದ ಮಂಜುನಾಥ ಭಟ್ಟರನ್ನು ಹಲವರು ಸನ್ಮಾನಿಸಿದ್ದಾರೆ. ಇದೀಗ ಹಿರಿಯ ಚೇತನ ಕುರಿಯ ವಿಠಲ ಶಾಸ್ತ್ರಿಗಳ ಸ್ಮರಣಾರ್ಥ ಕೊಡಮಾಡುವ ಪ್ರಶಸ್ತಿ ಕಳಶ ಪ್ರಾಯವಾಗಿ ಸಲ್ಲುತ್ತದೆ. 

Advertisement

ಉದಯಶಂಕರ್‌ ನೀರ್ಪಾಜೆ 

Advertisement

Udayavani is now on Telegram. Click here to join our channel and stay updated with the latest news.

Next