“ನಾನು “ಪಂಚರಂಗಿ’ ಸಿನಿಮಾ ಮಾಡಿ ಸುಮಾರು ಹತ್ತು ವರ್ಷವಾಯ್ತು. ಆದ್ರೆ, ಇವತ್ತಿಗೂ ಎಲ್ಲೇ ಹೋದ್ರೂ ಜನ ಆ ಸಿನಿಮಾದ ಹೆಸರಿನಲ್ಲೇ ನನ್ನನ್ನು ಗುರುತಿಸುತ್ತಾರೆ. ನಾನು ಮಾಡಿದ ಒಂದು ಪಾತ್ರ ಇಷ್ಟು ವರ್ಷ ಜನರ ಮನಸ್ಸಿನಲ್ಲಿ ಉಳಿದಿದೆ ಅಂದ್ರೆ, ನಿಜಕ್ಕೂ ಗ್ರೇಟ್..! ಅದನ್ನ ಕೇಳಿದಾಗ ನನಗೂ ಖುಷಿಯಾಗುತ್ತೆ. ಅಂಥದ್ದೊಂದು ಪಾತ್ರ ಮಾಡಿದ್ದೂ ಸಾರ್ಥಕ ಎನಿಸುತ್ತದೆ. ಮಾಡೋದಾದ್ರೆ, ಮುಂದೆ ಕೂಡ ಅಂಥದ್ದೇ, ಮನಸ್ಸಿನಲ್ಲಿ ಉಳಿಯುವಂಥ ಪಾತ್ರಗಳನ್ನ ಮಾಡ್ಬೇಕು ಅಂತಿದ್ದೀನಿ’ ಇದು ನಟಿ ನಿಧಿ ಸುಬ್ಬಯ್ಯ ಮಾತು.
ಹೌದು, ಮದುವೆಯ ಬಳಿಕ ಚಿತ್ರರಂಗದಿಂದ ಕೊಂಚ ದೂರ ಉಳಿದಿದ್ದ ನಿಧಿ ಸುಬ್ಬಯ್ಯ, ಮೂರ್‍ನಾಲ್ಕು ವರ್ಷಗಳಿಂದ ಯಾವ ಸಿನಿಮಾಗಳಲ್ಲೂ ಕಾಣಿಸಿಕೊಂಡಿರಲಿಲ್ಲ. ಮದುವೆಯ ಬಳಿಕ ಹಲವು ನಟಿಯರಂತೆ ನಿಧಿ ಕೂಡ ಗಂಡ, ಮನೆ, ಫ್ಯಾಮಿಲ ಅಂಥ ಬಿಝಿಯಾಗಿ ಚಿತ್ರರಂಗಕ್ಕೆ ಗುಡ್ ಬೈ ಹೇಳಬಹುದು ಅಂಥ ಅನೇಕರು ಅಂದುಕೊಳ್ಳುತ್ತಿರುವಾಗಲೇ, ನಿಧಿ ಸುಬ್ಬಯ್ಯ ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗುವ ಸುಳಿವು ನೀಡಿದ್ದಾರೆ.
ಇತ್ತೀಚೆಗಷ್ಟೇ ಬಿಗ್‌ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಮುಂದೆ ಕಾಣಿಸಿಕೊಂಡಿದ್ದ ನಿಧಿ ಸುಬ್ಬಯ್ಯ, ಆ ಶೋ ಲಾಕ್ ಡೌನ್‌ನಿಂದಾಗಿ ಅರ್ಧಕ್ಕೆ ನಿಂತಿದ್ದರಿಂದ ಎಲ್ಲ ಸ್ಪರ್ಧಿಗಳ ಜೊತೆ ಹೊರಕ್ಕೆ ಬಂದಿದ್ದರು. ಸದ್ಯ ಮನೆಯಲ್ಲಿರುವ ನಿಧಿ ತಮ್ಮ ಮುಂದಿನ ಸಿನಿಮಾಗಳಿಗಾಗಿ ಒಂದಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಮಾತನಾಡುವ ನಿಧಿ, “ಈಗಾಗಲೇ ಲೋಹಿತ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಲೀಡ್ ರೋಲ್‌ನಲ್ಲಿ ಅಭಿನಯಿಸುತ್ತಿದ್ದೇನೆ. ಈ ಸಿನಿಮಾದ ಕೆಲಸಗಳು ಶುರುವಾಗಿದ್ದು, ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಈ ಸಿನಿಮಾದ ಶೂಟಿಂಗ್ ಶುರುವಾಗಬೇಕಿತ್ತು. ಆದ್ರೆ, ಕೋವಿಡ್ ಲಾಕ್ ಡೌನ್‌ನಿಂದಾಗಿ ಈ ಸಿನಿಮಾದ ಕೆಲಸಗಳು ಸ್ವಲ್ಪ ಸಮಯ ಮುಂದಕ್ಕೆ ಹೋಗಿದೆ. ಇದೊಂದು ಹಾರರ್-ಥ್ರಿಲ್ಲರ್ ಶೈಲಿಯ ಸಿನಿಮಾ. ತುಂಬಾ ಡಿಫರೆಂಟ್ ಕ್ಯಾರೆಕ್ಟರ್ ಇದರಲ್ಲಿದೆ’ ಎನ್ನುತ್ತಾರೆ.
“ನನಗೆ ಮೊದಲಿನಿಂದಲೂ ಹೊಸ ಥರದ ಕ್ಯಾರೆಕ್ಟರ್ ಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ತುಂಬ ಆಸಕ್ತಿ. ಮಾಮೂಲಿಯಾಗಿರುವಂಥ ಪಾತ್ರಗಳಿಗಿಂತ ಚಾಲೆಂಜಿಂಗ್ ಆಗಿರುವಂಥ ಪಾತ್ರಗಳು ನೋಡುಗರ ಮನಸ್ಸಿನಲ್ಲಿ ಹೆಚ್ಚು ಕಾಲ ಉಳಿಯುತ್ತದೆ ಅನ್ನೋದು ನನ್ನ ಬಲವಾದ ನಂಬಿಕೆ. ಅದಕ್ಕೆ ಒಂದು ಒಳ್ಳೆಯ ಉದಾಹರಣೆ ಅಂದ್ರೆ “ಪಂಚರಂಗಿ’ ಸಿನಿಮಾ. ಆ ಸಿನಿಮಾ ರಿಲೀಸ್ ಆಗಿ ಹತ್ತು ವರ್ಷವಾದ್ರೂ, ಜನ ಇಂದಿಗೂ ನನ್ನನ್ನು ಅದೇ ಸಿನಿಮಾದ ಹೆಸರಿನಿಂದ ಗುರುತಿಸುತ್ತಾರೆ. ಅದನ್ನ ಕೇಳಿದಾಗ ತುಂಬ ಖುಷಿಯಾಗುತ್ತದೆ. ಒಂದೊಳ್ಳೆ ಕ್ಯಾರೆಕ್ಟರ್ ಮಾಡಿದ್ದೂ ಸಾರ್ಥಕ ಎನಿಸುತ್ತದೆ’ ಅನ್ನೋದು ನಿಧಿ ಮಾತು.
ಸದ್ಯ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟಿರುವ ನಿಧಿ ಸುಬ್ಬಯ್ಯಗೆ ಒಂದರ ಹಿಂದೊಂದು ಸಿನಿಮಾಗಳ ಆಫರ್ ಬರುತ್ತಿದೆಯಂತೆ. ಅವರೇ ಹೇಳುವಂತೆ, “ಈಗಾಗಲೇ ಲೋಹಿತ್ ನಿರ್ದೇಶನದ ಒಂದು ಸಿನಿಮಾದ ಕೆಲಸ ಶುರುವಾಗಿದೆ. ಇದರ ಜೊತೆ ಇನ್ನೂ ಎರಡು – ಮೂರು ಸಿನಿಮಾಗಳು ಇನ್ನೂ ಮಾತುಕಥೆಯ ಹಂತದಲ್ಲಿವೆ. ಲಾಕ್‌ಡೌನ್ ಮುಗಿದ ಬಳಿಕ ಈ ಸಿನಿಮಾಗಳೂ ಕೂಡ ಅನೌನ್ಸ್ ಆಗುವ ಸಾಧ್ಯತೆ ಇದೆ. ಸದ್ಯಕ್ಕೆ ಬಂದಿರುವ ಸ್ಕ್ರಿಪ್ಟ್ಗಳೆಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮಹಿಳಾ ಪ್ರಧಾನ ಕಥೆಗಳೇ ಹೆಚ್ಚಾಗಿದ್ದು, ನಾನೂ ಕೂಡ ಅಂಥದ್ದೇ ಪಾತ್ರಗಳನ್ನು ನಿರೀಕ್ಷಿಸುತ್ತೇನೆ. ಒಂದು ಸಿನಿಮಾದಲ್ಲಿ ಹೀರೋಯಿನ್ ಅಂದ್ರೆ, ಅಲ್ಲಿ ಹೀರೋ ಇರಲೇಬೇಕು ಅಂತೇನಿಲ್ಲ. ಹೀರೋ ಇಲ್ಲದೆಯೂ ಇಡೀ ಸಿನಿಮಾ ಹೀರೋಯಿನ್ ಮೂಲಕವೂ ನಡೆಯುವ ಸಾಧ್ಯತೆ ಇರುತ್ತದೆ. ಅಂಥ ಪಾತ್ರಗಳ ಕಡೆಗೆ ನನಗೆ ಹೆಚ್ಚು ಆಸಕ್ತಿ’ ಎನ್ನುತ್ತಾರೆ.