Advertisement

ತ್ರಿವಿಧ ದಾಸೋಹಿಗೆ ನುಡಿ ನಮನ

06:18 AM Jan 23, 2019 | |

ದಾವಣಗೆರೆ: ಕರ್ಮಯೋಗಿ, ತ್ರಿವಿಧ ದಾಸೋಯಿ, ಬಸವತತ್ವ ಪ್ರತಿಪಾದಕರಾಗಿದ್ದ ತುಮಕೂರಿನ ಶ್ರೀಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಸೋಮವಾರ ನಿಧನರಾದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ವಿವಿಧೆಡೆ ಭಕ್ತರು ಶ್ರದ್ಧಾಭಕ್ತಿಯಿಂದ ಶ್ರದ್ಧಾಂಜಲಿ ಅರ್ಪಿಸಿದರು.

Advertisement

ಜಯದೇವ ವೃತ್ತ, ಗಾಂಧಿ ವೃತ್ತ, ಲಾಯರ್‌ ರಸ್ತೆ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ರಸ್ತೆ, ಡಿಸಿಎಂ ಟೌನ್‌ಶಿಪ್‌, ನಿಟುವಳ್ಳಿ ರಸ್ತೆ, ಕೆಟಿಜೆ ನಗರ, ಎಚ್ಕೆಆರ್‌ ಸರ್ಕಲ್‌, ಐಟಿಐ ಸರ್ಕಲ್‌, ವಿಮಾನಮಟ್ಟಿ, ಶ್ರೀರಾಮನಗರ, ವಿದ್ಯಾನಗರ, ತರಳಬಾಳು ಬಡಾವಣೆ, ಗುಂಡಿ ಮಹಾದೇವಪ್ಪ ವೃತ್ತ, ರಾಂ ಆ್ಯಂಡ್‌ ಕೋ ವೃತ್ತ ಹೀಗೆ ನಗರದಲ್ಲಿ ಎಲ್ಲೆಡೆ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಶ್ರದ್ಧಾಂಜಲಿ ಅರ್ಪಿಸಿದ ಕ್ಷಣಗಳು ಕಂಡು ಬಂದವು.

ಇನ್ನೂ ಎಲ್ಲಾ ಆಟೋ ನಿಲ್ದಾಣಗಳು, ಕನ್ನಡಪರ ಸಂಘಟನೆಗಳ ಕಚೇರಿಗಳು, ಪ್ರಮುಖ ವೃತ್ತಗಳು, ಬಡಾವಣೆಗಳು, ಬೀಡಾಸ್ಟಾಲ್‌, ಬೇಕರಿ, ವಿದ್ಯಾಸಂಸ್ಥೆ, ಸಿದ್ಧಗಂಗಾ ಶಾಲೆ ಬಸ್‌ಗಳು, ಬಟ್ಟೆ ಅಂಗಡಿಗಳು, ಸಣ್ಣಪುಟ್ಟ ಪೆಟ್ಟಿಗೆ ಅಂಗಡಿ ಹೀಗೆ ದಾವಣಗೆರೆ ಹಳೇಭಾಗ, ಹೊಸಭಾಗ ಒಳಗೊಂಡಂತೆ ಎಲ್ಲಾ ಕಡೆ ವ್ಯಾಪಾರಸ್ಥರು, ಕೂಲಿ ಕಾರ್ಮಿಕರು, ಮಠದ ಭಕ್ತರು ತಮ್ಮ ಅಂಗಡಿ, ಕಚೇರಿಗಳ ಮುಂದೆ ಶ್ರೀಗಳ ಭಾವಚಿತ್ರ, ಫೋಟೋ ಇಟ್ಟು ವಿಶೇಷ ಪೂಜೆ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಮತ್ತೂಮ್ಮೆ ಶ್ರೀಗಳು ಹುಟ್ಟಿಬರಲಿ ಎಂದು ಸಾವಿರಾರು ಭಕ್ತರು ಪ್ರಾರ್ಥಿಸಿದರು.

ಸಿದ್ದಗಂಗಾ ಶಾಲೆ: ನಗರದ ಡಾಂಗೆಪಾರ್ಕ್‌ ಬಳಿಯ ಶ್ರೀಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರು ಧರಿಸುತ್ತಿದ್ದ ಪಾದುಕೆಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಬೆಳಗ್ಗೆಯಿಂದ ಸಂಜೆಯವರೆಗೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು, ಭಕ್ತರು ಭೇಟಿ ನೀಡಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ಇದಕ್ಕೂ ಮುನ್ನ ಶ್ರೀಗಳು ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಸೋಮವಾರ ಶಾಲೆ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಶ್ರೀಗಳ ಪಾದುಕೆ ಇಟ್ಟು ಶಾಲಾ ವಿದ್ಯಾರ್ಥಿಗಳಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿ ಅವರು ಮಾಡಿದ ಅನ್ನ, ದಾಸೋಹ, ಆಶ್ರಯದಂತಹ ತ್ರಿವಿಧ ದಾಸೋಹ ಸ್ಮರಣೀಯವಾದುದು, ಶ್ರೀಗಳು ತಮ್ಮ ಜೀವನದುದ್ದಕ್ಕೂ ಸಲ್ಲಿಸಿದ ಸಮಾಜಮುಖೀ ಸೇವೆಯನ್ನು ಸ್ಮರಿಸಿಕೊಂಡ ಭಕ್ತಸಮೂಹ ದಾವಣಗೆರೆಯ ಬಹುತೇಕ ಎಲ್ಲಾ ಕಡೆ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಭಕ್ತಿ ಸಮರ್ಪಿಸುವಲ್ಲಿ ಸಾಕ್ಷಿಯಾಯಿತು.

Advertisement

ಶ್ರೀ ಸಿದ್ದಗಂಗಾ ಶ್ರೀಗಳ ಪಾದುಕೆ ದರ್ಶನ…..

2010ರಲ್ಲಿ ನಮ್ಮ ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿಗಳು ತುಮಕೂರಿನ ಶ್ರೀಸಿದ್ಧಗಂಗಾ ಮಠಕ್ಕೆ ಅಲ್ಲಿನ ವಿದ್ಯಾರ್ಥಿಗಳು, ಭಕ್ತರ ದಾಸೋಹಕ್ಕೆ ಅನುಕೂಲ ಆಗಲಿ ಎನ್ನುವ ಸದುದ್ದೇಶದಿಂದ ಸುಮಾರು 5 ಸಾವಿರ ತಟ್ಟೆಯನ್ನು ಕೊಡುಗೆಯಾಗಿ ನೀಡಿದ್ದರು. ಅವುಗಳನ್ನು ನಮ್ಮ ಶಾಲಾ ವಾಹನದಲ್ಲಿ ಕೊಂಡೊಯ್ದು ಮಠಕ್ಕೆ ಅರ್ಪಿಸಿ ಬರುವಾಗ ಶ್ರೀ ಸಿದ್ಧಗಂಗಾ ಶ್ರೀಗಳು ತಮ್ಮ ಪಾದುಕೆಗಳನ್ನು ಉಡುಗೊರೆಯಾಗಿ ಶಾಲೆಗೆ ನೀಡಿದ್ದರು. ಅವುಗಳನ್ನು ಶಾಲಾ ಆವರಣದಲ್ಲಿರುವ ಶಾಲಾ ಸಂಸ್ಥಾಪಕರ ಮನೆಯ ದೇವರ ಕೋಣೆಯಲ್ಲಿ ನಿತ್ಯವೂ ಪೂಜಿಸಲಾಗುತ್ತಿತ್ತು. ಶ್ರೀಗಳು ನಿಧನದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಸಾರ್ವಜನಿಕರು, ವಿದ್ಯಾರ್ಥಿಗಳ ದರ್ಶನಕ್ಕೆ ಶ್ರೀಗಳ ಪಾದುಕೆಗಳನ್ನು ಇಡಲಾಗಿದೆ. ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ ಎಂದು ಶ್ರೀ ಸಿದ್ಧಗಂಗಾ ಶಾಲೆಯ ನಿರ್ದೇಶಕ ಜಯಂತ್‌ ತಿಳಿಸಿದರು.

ಶ್ರದ್ಧಾಂಜಲಿ ತಾಣವಾದ ಸಾಮಾಜಿಕ ಜಾಲತಾಣ

ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಬಹುತೇಕ ಎಲ್ಲಾ ಸ್ಮಾರ್ಟ್‌ಪೋನ್‌ ಬಳಕೆದಾರರ ವಾಟ್ಸ್‌ಪ್‌ ಡಿಪಿ, ಸ್ಟೇಟಸ್‌ಗಳಲ್ಲಿ ಸಿದ್ದಗಂಗಾ ಶ್ರೀಗಳಿಗೆ ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇನ್ನೂ ಫೇಸ್‌ಬುಕ್‌, ಟ್ವಿಟರ್‌ಗಳಲ್ಲಿ ಶ್ರೀ ಸಿದ್ಧಗಂಗಾ ಶ್ರೀಗಳಿಗೆ ಮರಣೋತ್ತರವಾಗಿ ಭಾರತರತ್ನ ನೀಡುವಂತೆ ಲಕ್ಷಾಂತರ ವಿದ್ಯಾರ್ಥಿಗಳು, ನೌಕರರು, ಕಾರ್ಮಿಕರು, ಸಾರ್ವಜನಿಕರು, ಅಭಿಮಾನಿಗಳು ಒತ್ತಾಯಪಡಿಸುವಲ್ಲಿಯೂ ಕೂಡ ಸಾಮಾಜಿಕ ಜಾಲತಾಣ ನೆರವಾಯಿತು.

ಇಂದು ಶ್ರೀಗಳ ವಿಶೇಷ ಭಾವಚಿತ್ರ ಪ್ರದರ್ಶನ….

ಶ್ರೀಸಿದ್ಧಗಂಗಾ ಶಾಲೆಯ ಆವರಣದಲ್ಲಿ ಬುಧವಾರ ಸ್ಕೇಲ್‌ ಡ್ರಾಯಿಂಗ್‌ ಮೂಲಕ ರಂಗೋಲಿಯಲ್ಲಿ ರಚಿಸಿದ ಶ್ರೀ ಸಿದ್ಧಗಂಗಾ ಶ್ರೀಗಳ ಭಾವಚಿತ್ರ ಪ್ರದರ್ಶನ ನಡೆಯಲಿದೆ. ಡ್ರಾಯಿಂಗ್‌ ಮೂಲಕ ಸುಮಾರು 100 ಅಡಿ ಅಗಲ, 100 ಅಡಿ ಉದ್ದ ವಿಸ್ತಿರ್ಣದಲ್ಲಿ 80 ಅಡಿ ಅಗಲ ಮತ್ತು ಉದ್ದದ ಚೌಕಾಕಾರದ ಪರಧಿಯೊಳಗೆ ಶ್ರೀಗಳ ಭಾವಚಿತ್ರವನ್ನು ಶಾಲಾ ಮಕ್ಕಳು ಬಿಡಿಸಿ ಪ್ರದರ್ಶನಕ್ಕೆ ಅಣಿಮಾಡಿಕೊಡಲಿದ್ದಾರೆ. ಮಧ್ಯಾಹ್ನ 12ಕ್ಕೆ ಪ್ರಾರಂಭವಾಗುವ ಸ್ಕೇಲ್‌ ಡ್ರಾಯಿಂಗ್‌ನ ಶ್ರೀಗಳ ಭಾವಚಿತ್ರ ರಚನೆಯಲ್ಲಿ ಸುಮಾರು 50 ರಿಂದ 100 ವಿದ್ಯಾರ್ಥಿಗಳು ಭಾಗವಹಿಸಲಿದ್ದು, ವಿದ್ಯಾರ್ಥಿಗಳ ವಿಶಿಷ್ಟ ಕಲೆಯ ಕೈಚಳಕದಲ್ಲಿ ಶ್ರೀಗಳ ಭಾವಚಿತ್ರ ಅದ್ಭುತವಾಗಿ ಹೊರಹೊಮ್ಮಲಿದೆ. ಶ್ರೀಗಳ ಚಿತ್ರವನ್ನು ಡ್ರೋಣ್‌ ಬಳಸಿ ಸೆರೆಹಿಡಿಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next