ನಿಡಗುಂದಿ: ಪಟ್ಟಣದಲ್ಲಿ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘಕ್ಕೆ ಕಚೇರಿ ನಿರ್ಮಾಣ ಸೇರಿದಂತೆ ಯೋಧರ ಶ್ರದ್ಧಾಂಜಲಿ ಸಲ್ಲಿಕೆಗೆ ನಿವೇಶನ ನೀಡುವಂತೆ ಆಗ್ರಹಿಸಿ ನಿವೃತ್ತ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದರು.
ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಜಿ.ಎಲ್. ಮನಹಳ್ಳಿ ಮಾತನಾಡಿ, ದೇಶ ರಕ್ಷಣೆಗಾಗಿ ಜೀವದ ಭಯ ಬಿಟ್ಟು ಶತ್ರುಗಳೊಡನೆ ಹೋರಾಡುವ ಯೋಧರ ಕಾರ್ಯ ಶ್ಲಾಘನೀಯ. ದೇಶವನ್ನು ಸುಭೀಕ್ಷವಾಗಿಸುವಲ್ಲಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡುತ್ತಾರೆ. ದೇಶವನ್ನು ಗೌರವಿಸಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಪ್ರತಿ ಯೋಧರನ್ನು ಗೌರವಿಸುವುದು ನಾಗರಿಕರ ಕರ್ತವ್ಯವಾಗಿದೆ.
ಆದರೆ, ಪ್ರಾಣ ತ್ಯಾಗ ಮಾಡಿದ ಯೋಧರಿಗೆ ಶ್ರದ್ಧಾಂಜಲಿ ಸಮರ್ಪಣೆಗಾಗಿ ಪ್ರತಿ ತಾಲೂಕಿಗೆ ಯೋಧರ ಸಂಘಕ್ಕೆ ಜಾಗೆ ನೀಡಬೇಕು. ಕಳೆದ ಎರಡು ವರ್ಷಗ ಹಿಂದೆ ನಿಡಗುಂದಿಯಲ್ಲಿ ನಿವೃತ್ತ ಯೋಧರ ಸಂಘ ಸ್ಥಾಪನೆಯಾಗಿದ್ದು ಸಂಘಕ್ಕೆ ನಿವೇಶನ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ಸರಕಾರ ಸಂಘಕ್ಕೆ ಸೂಕ್ತ ಜಾಗೆ ನೀಡುವಂತೆ ಮನವಿ ಮಾಡಿದರು.
ಯೋಧರಾದ ರಾಮನಗೌಡ ಬಿರಾದರ, ಭೀಮಣ್ಣ ವಿಭೂತಿ ಮಾತನಾಡಿ, ದೇಶದ ಗಡಿ ಹೊರಗೆ ಸೇವೆ ಸಲ್ಲಿಸಿದಂತೆ ದೇಶದ ಒಳಗಡೆ ಸೇವೆ ಸಲ್ಲಿಸುವ ಸಂಕಲ್ಪವನ್ನು ಪ್ರತಿಯೊಬ್ಬ ನಿವೃತ್ತ ಯೋಧರು ಮಾಡಬೇಕು. ಎರಡು ವರ್ಷಗಳ ಹಿಂದೆ ನಿಡಗುಂದಿಯಲ್ಲಿ ನಿವೃತ್ತ ಯೋಧರ ಕ್ಷೇಮಾಭೀವೃದ್ದಿ ಸಂಘ ಸ್ಥಾಪನೆಯಾಗಿದ್ದು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲಿದೆ.
ನಿಡಗುಂದಿ ಪಟ್ಟಣ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿದ್ದು ದೇಶಕ್ಕೆ ಪ್ರಾಣಬಿಟ್ಟ ಅನೇಕ ಯೋಧರು ಈ ಮಾರ್ಗವಾಗಿ ಹೋಗುತ್ತಾರೆ. ಆದರೆ, ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಜತೆಗೆ ಸೈನಿಕರ ಇತರೆ ಕಾರ್ಯಕ್ಕೆ ಜಾಗೆಯ ಕೊರತೆ ಇದೆ. ತಾಲೂಕು ವ್ಯಾಪ್ತಿಯಲ್ಲಿ ಅಂದಾಜು 200 ಸೈನಿಕ, ನಿವೃತ್ತ ಸೈನಿಕರಿದ್ದಾರೆ. ತಾಲೂಕಾಡಳಿತ ಕೂಡಲೇ ನಿವೃತ್ತ ಯೋಧರ ಸಂಘಕ್ಕೆ ಜಾಗೆ ನೀಡುವಂತೆ ಒತ್ತಾಯಿಸಿದರು.
ಪಪಂ ಸದಸ್ಯ ಸಂಗಮೇಶ ಕೆಂಭಾವಿ, ನಿವೃತ್ತ ಯೋಧರಾದ ಹೊಳೆಬಸಪ್ಪ ಮನಹಳ್ಳಿ, ಶಿವಾನಂದ ರೂಢಗಿ, ಬಸವರಾಜ ಗಣಿ, ಜೆಟ್ಟೆಪ್ಪ ಯಲಗೂರ, ಗೂಳಪ್ಪ ಅಂಗಡಿ, ಸಂಗಪ್ಪ ಕೂಡಗಿ, ಡಿ.ಎಂ. ಮಕಾನದಾರ, ಬಸವರಾಜ ಬಿರಾದಾರ, ವೈ.ಕೆ. ಮಸೂತಿ, ವಾಲೀಕಾರ ಸೇರಿದಂತೆ ಇತರರು ಇದ್ದರು.