Advertisement

ನರೇಗಾ ಯೋಜನೆಯಡಿ ಕೆಲಸ ನೀಡಿ

05:05 PM Jun 21, 2020 | Naveen |

ನಿಡಗುಂದಿ: ನಿಡಗುಂದಿ ತಾಪಂ ಅಸ್ತಿತ್ವಕ್ಕೆ ಬಂದ ನಂತರ ಮೊದಲ ಬಾರಿಗೆ ತಾಪಂ ವ್ಯಾಪ್ತಿಯ ಕೆಲಸಗಳ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ಜರುಗಿತು. ಪಟ್ಟಣದ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ನಡೆದ ಸಭೆ ನೇತೃತ್ವವನ್ನು ಜಿಪಂ ಯೋಜನಾ ನಿರ್ದೇಶಕ ಸಿ.ಬಿ.ದೇವರಮನಿ ವಹಿಸಿದ್ದರು. ತಾಪಂ ವ್ಯಾಪ್ತಿಯ 11 ಗ್ರಾಪಂಗಳಲ್ಲಿ ಇದುವರೆಗೆ ನಡೆದ ನರೇಗಾಕಾಮಗಾರಿಗಳ ಪರಿಶೀಲನೆ ನಡೆಯಿತು.

Advertisement

ಯಂತ್ರಗಳ ಬಳಕೆ ನಿಷಿದ್ಧ: ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಜಾರಿಯಾಗಿದ್ದರಿಂದ ಕೆಲಸ ಅರಸಿ ಗುಳೆ ಹೋಗಿದ್ದ ಜನ ಸ್ವಗ್ರಾಮಗಳಿಗೆ ಮರಳಿದ್ದು ಅವರಿಗೆಲ್ಲ ನರೇಗಾ ಯೋಜನೆಯಡಿ ಕೆಲಸ ನೀಡಬೇಕು ಎಂದು ಜಿಪಂ ಯೋಜನಾ ನಿರ್ದೇಶಕ ಸಿ.ಬಿ. ದೇವರಮನಿ ಸೂಚಿಸಿದರು. ಯಾವುದೇ ಕಾರಣಕ್ಕೂ ನರೇಗಾ ಕಾಮಗಾರಿಗಳಿಗೆ ಯಂತ್ರಗಳನ್ನು ಬಳಸಬಾರದು, ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ನಿತ್ಯ ಕನಿಷ್ಠ 200 ಕೂಲಿ ಕಾರ್ಮಿಕರು ಕೆಲಸದಲ್ಲಿರುವಂತೆ ನೋಡಿಕೊಳ್ಳಬೇಕು. ಜೂನ್‌ ಅಂತ್ಯದವರೆಗೆ ಗುರಿ ನೀಡಿದ ಮಾನವ ದಿನಗಳಷ್ಟು ಕೆಲಸ ಸೃಜಿಸಬೇಕು ಎಂದರು.

ಕೋವಿಡ್ ತಡೆಗಟ್ಟುವಲ್ಲಿಯೂ ಗ್ರಾಪಂಗಳ ಕೆಲಸ ಗಮನಾರ್ಹವಾಗಿದ್ದು ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಜಾಗೃತಿ, ಸ್ವಚ್ಚತೆಯ ಅರಿವು ಮೂಡಿಸಬೇಕು ಎಂದರು. ವಿವಿಧ ಗ್ರಾಮಗಳಲ್ಲಿ ಶುದ್ಧ ಕುಡಿವ ನೀರಿನ ಘಟಕ ಕಾರ್ಯ ನಿರ್ವಹಿಸದ ಬಗ್ಗೆ ದೂರುಗಳು ಬಂದಿದ್ದು ತಕ್ಷಣವೇ ಜಿಪಂ ಎಂಜಿನಿಯರಿಂಗ್‌ ವಿಭಾಗದ ಸಹಯೋಗದಲ್ಲಿ ಅವುಗಳ ದುರಸ್ತಿಗೊಳಿಸಿ ಶುದ್ಧ ಕುಡಿವ ನೀರು ಪೂರೈಸಬೇಕು ಎಂದರು.

ಜೂ. 23ರಂದು ಜಿಲ್ಲೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಭೇಟಿ ನೀಡುವ ಸಾಧ್ಯತೆಯಿದ್ದು, ಜಿಲ್ಲೆಯ ನಾನಾ ಕಡೆ ನರೇಗಾ ಯೋಜನೆಯ ಕಾಮಗಾರಿಗಳನ್ನು ಪರಿಶೀಲಿಸಲಿದ್ದಾರೆ ಎಂದರು. ಜಿಪಂ ಸಹಾಯಕ ಯೋಜನಾ ನಿರ್ದೇಶಕ ಸಿ.ಬಿ. ಕುಂಬಾರ, ನಿಡಗುಂದಿ ತಾಪಂ ಇಒ ಬಿ.ಜೆ. ಇಂಡಿ, ತಾಪಂ ಸಹಾಯಕ ನಿರ್ದೇಶಕ ಎಸ್‌.ಜೆ. ಉದಯಕುಮಾರ ತಾಪಂ ವ್ಯಾಪ್ತಿಯ ಪಿಡಿಒಗಳು, ನಾನಾ ಇಲಾಖೆ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next