ನಿಡಗುಂದಿ: ಪ್ರವಾಹ ಬಾಧಿತ ನಿಡಗುಂದಿ ತಾಲೂಕಿನ ಹೊಳೆ ಮಸೂತಿ ಗ್ರಾಮದ ಸಂತ್ರಸ್ತರಿಗೆ ಕಡೆಗೂ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಜಾಗೆ ಸೇರಿದಂತೆ ಇತರೆ ಸೌಕರ್ಯಕ್ಕೆ ಜಿಲ್ಲಾಡಳಿತ ಸಜ್ಜಾಗಿದೆ. ರವಿವಾರ ಹೊಳೆ ಮಸೂತಿ ಗ್ರಾಮದ ನಿಡಗುಂದಿ ರಸ್ತೆ ಪಕ್ಕದ ಜಮೀನು ಪರಿಶೀಲನೆ ಕಾರ್ಯವನ್ನು ವಿಶೇಷ ಕರ್ತವ್ಯಾಧಿಕಾರಿ ಸುರೇಖಾ ಕಿಣಗಿ, ನಿಡಗುಂದಿ ತಹಶೀಲ್ದಾರ್ ಪಿ.ಜಿ ಪವಾರ ನಡೆಸಿದರು.
ಗ್ರಾಮದ ಹಿರಿಯರು, ಅಧಿಕಾರಿಗಳ ತಂಡ ಹೊಳೆ ಮಸೂತಿ ಗ್ರಾಮದ ಬಾಧಿತ ಮನೆಗಳ ಸಂಪೂರ್ಣ ಸರ್ವೇ ನಡೆಸಿ ಅಂದಾಜು 66 ಮನೆ ಬಾಧಿತ ಎಂದು ಗುರುತಿಸಿ ಒಂದೊಂದು ಮನೆಗೂ ಸಂಖ್ಯೆ ಹಾಕಲಾಗಿದೆ. ಒಟ್ಟು ಮನೆಗಳ ಸ್ಥಳಾಂತರ ಕುರಿತು ಸ್ಥಳವನ್ನು ನೋಡಲಾಗಿದೆ. ಇನ್ನೆರಡು ದಿನದಲ್ಲಿ ಜಿಲ್ಲಾಧಿಕಾರಿಗಳು ಗ್ರಾಮಕ್ಕೆ ಬಂದು ಅಂತಿಮ ಮಾಡಲಿದ್ದು ನಂತರ ಸದ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ ಕಾರ್ಯ ನಡೆಯಲಿದೆ ಎಂದು ತಹಶೀಲ್ದಾರ್ ಪಿ.ಜಿ. ಪವಾರ ತಿಳಿಸಿದರು.
ಕಳೆದ ಹಲವಾರು ವರ್ಷಗಳಿಂದ ಆಗಾಗ ಪ್ರವಾಹ ಬಂದು ಬಾಧಿತ ಪ್ರದೇಶದಲ್ಲಿನ ಜನರ ಜೀವನಕ್ಕೆ ಕಷ್ಟ ನೀಡುತ್ತಿತ್ತು. ಆದರೆ ಪ್ರದೇಶದಲ್ಲಿ ಈ ಬಾರಿ ಇರಲು ಸಾಧ್ಯವಿಲ್ಲ. ಶಾಶ್ವತವಾಗಿ ಈ ಜಾಗೆಯಿಂದ ಸ್ಥಳಾಂತರಿಸಿ ಬೇರೆಡೆ ಕಳಿಸುವಂತೆ ಗ್ರಾಮಕ್ಕೆ ಆಗಮಿಸುವ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮುಂದೆ ಸಂತ್ರಸ್ತರು ಕೋರುತ್ತಿದ್ದರು.
ಈ ಬಾರಿ ಅಧಿಕಾರಿಗಳ ಕಾರ್ಯವೈಖರಿಯಿಂದ ಸಂತ್ರಸ್ತರ ಆಸೆ ಈಡೇರಲಿದೆ ಎನ್ನುವ ಭರವಸೆ ಸಂತ್ರಸ್ತರದ್ದಾಗಿದೆ. ಸದ್ಯ ನೋಡಿದ ಜಾಗೆ ತಾತ್ಕಾಲಿಕ್ ಶೆಡ್ ನಿರ್ಮಾಣಕ್ಕೆ ಬಹುತೇಕ ಅಂತಿಮವಾಗಲಿದ್ದು. ಜಮೀನಿನ ಮಾಲೀಕರು ಜಾಗೆ ನೀಡಲು ಸಿದ್ಧರಿದ್ದಾರೆ ಎಂದು ಅಧಿಕಾರಿಗಳ ಮೂಲಗಳು ತಿಳಿಸಿವೆ.
ಈ ಸಂದರ್ಭದಲ್ಲಿ ಪಿಡಿಒ ಮಹಾಂತೇಶ ಹೊಸಗೌಡ್ರ, ಗ್ರಾಮ ಲೆಕ್ಕಾಧಿಕಾರಿ ಗಂಗಾಧರ ಜುಲಗುಡ್ಡ, ಎಂ.ಕೆ. ಮುತ್ತಣ್ಣವರು ಸೇರಿ ಇತರರಿದ್ದರು.