ನಿಡಗುಂದಿ: ದೇಶಾದ್ಯಂತ ಸಿಎಎ ವಿರುದ್ಧ ಹಿಂಸಾತ್ಮಕ ಆಂದೋಲನ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಾಲೂಕಾಡಳಿತದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಬಿಜೆಪಿ ಮುಖಂಡ ಪ್ರಲ್ಹಾದ ಪತ್ತಾರ ಮಾತನಾಡಿ, ಇತ್ತೀಚಿಗೆ ಬೆಂಗಳೂರಿನ ಪ್ರೀಡಮ್ ಪಾರ್ಕ್ ಬಳಿ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಎಂಐಎಂ ಪಕ್ಷದ ಸಂಸದ ಓವೈಸಿ ಸಮ್ಮುಖದಲ್ಲಿ ಅಮೂಲ್ಯ ಲಿಯೋನಾ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದಾಳೆ.
ಕಲಬುರಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಸಹ ಎಂಐಎಂ ಪಕ್ಷದ ಶಾಸಕ ವಾರಿಸ್ ಪಠಣ್ 15 ಕೋಟಿ ಮುಸಲ್ಮಾನರು ಸೇರಿದರೆ, 100 ಕೋಟಿ ಹಿಂದೂಗಳು ಯಾವ ಲೆಕ್ಕಕ್ಕೂ ಇಲ್ಲ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಇದು ಅತ್ಯಂತ ಗಂಭೀರ ದೇಶದ್ರೋಹದ ಪ್ರಕರಣವಾಗಿದೆ. ಅದಕ್ಕಾಗಿ ಇಂತಹ ದೇಶ ವಿರೋಧಿ ಹೇಳಿಕೆ ನೀಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದರು.
ಹಿಂದೂ ಜನಜಾಗೃತಿ ಸಮಿತಿ ಮುಖಂಡ ವೈ. ಎಸ್. ಭಜಂತ್ರಿ ಮಾತನಾಡಿ, ಶಾಹೀನ್ ಬಾಗ್ ಪರಿಸರದಲ್ಲಿ ಪೌರತ್ವ ಸುಧಾರಣೆ ಕಾಯ್ದೆ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಮತಾಂಧರು ಧರಣಿ ಆಂದೋಲನ ಪ್ರಾರಂಭಿಸಿದ್ದಾರೆ. ಈ ಆಂದೋಲನದ ಯೋಜನೆಯನ್ನು ರೂಪಿಸುವ “ಜೆಎನ್‌ಯೂ’ನ ಮಾಜಿ ವಿದ್ಯಾರ್ಥಿ ಶರಜೀಲ್ ಇಮಾಮನು ಬಹಿರಂಗವಾಗಿ “ಅಸ್ಸಾಮ್ ಅನ್ನು ಭಾರತದಿಂದ ಮುರಿಯಲು ಸಹಾಯ ಮಾಡುವುದು ತಮ್ಮ ಕರ್ತವ್ಯವಾಗಿದೆ. ಹಾಗೆ ಮಾಡಿದರೆ ಕೇಂದ್ರ ಸರಕಾರವು ನಾವು ಹೇಳಿದಂತೆ ಕೇಳುತ್ತದೆ’. “ರೈಲು ಗಾಡಿಗಳನ್ನು ನಿಲ್ಲಿಸಿರಿ’, ಎಂಬ ಹೇಳಿಕೆಗಳನ್ನು ನೀಡಿದನು.
ಈತನು “ಈ ರೀತಿಯ ಆಂದೋಲನವನ್ನು ದೇಶದಾದ್ಯಂತ ಮಾಡಿರಿ ಎಂದು ಸತತವಾಗಿ ಪ್ರಚೋದನೆ ಮಾಡುತ್ತಿದ್ದಾನೆ ಇಂತಹ ಮತಾಂಧರ ಮೇಲೆ ಕಾನೂನು ಶಿಕ್ಷೆ ಜರುಗಿಸಬೇಕೆಂದರು. ಅದೇ ಸಂದರ್ಭದಲ್ಲಿ ಸಂಪೂರ್ಣ ದೇಶದಲ್ಲಿ ನಿರ್ಬಂಧ ಹೇರಿರುವ “ಸಿಮಿ’ ಉಗ್ರಗಾಮಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಕಾರ್ಯಕರ್ತರಿಗೆ ತರಬೇತಿ ನೀಡಿದ್ದಾಗಿ ಕೆಲವು ಘಟನೆಗಳಿಂದ ಬೆಳಕಿಗೆ ಬಂದಿದೆ. ಆದ್ದರಿಂದ ದೇಶದಲ್ಲಿ ಕಾನೂನು ಹಾಗೂ ಸುವ್ಯವಸ್ಥೆಗೆ ತೊಂದರೆಯಾಗದೆ ಇರಲು “ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಎಂಬ ಸಂಘಟನೆ ಮೇಲೆ ನಿರ್ಬಂಧ ಹೇರುವ ಬೇಡಿಕೆಯನ್ನು ಈ ಆಂದೋಲನದಲ್ಲಿ ಮಾಡಲಾಯಿತು.
ನಿವೃತ್ತ ನೌಕರರ ಸಂಘದ ಶ್ರೀಶೈಲಪ್ಪ ರೇವಡಿ, ಚಂದ್ರಶೇಖರ ನಿಡಗುಂದಿ, ಸಿದ್ರಾಮೇಶ ಅರಮನಿ ಮಾತನಾಡಿದರು. ವೆಂಕಟರಮನ್ ನಾಯ್ಕ, ಚಿನ್ನಪ್ಪ ಬಾವೂರ, ಜೆ.ಜೆ. ಗಂಟಿ, ಶಂಕ್ರಪ್ಪ ಹಣಗಿ, ಶಂಕ್ರಪ್ಪ ಅಂಗಡಿ, ಅಶೋಕ ಬಸರಕೋಡ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ರುದ್ರು ಚಟ್ಟೇರ, ಗಂಗು ವಡ್ಡರ, ಸುನೀಲ ಇಂಗಳೇಶ್ವರ, ಬಸು ಕೋತಿನ, ಪ್ರಕಾಶ ಕಟಬರ, ಅಭಿಷೇಕ ಕುಮಿತ್ಕರ, ಬಸು ಗೌರಿ ಇದ್ದರು.