Advertisement

ಜಲಾಶಯ ಹಿನ್ನೀರು ಪ್ರದೇಶ ಸಮೃದ್ಧ

11:47 AM Mar 15, 2020 | Naveen |

ನಿಡಗುಂದಿ: ಬೇಸಿಗೆ ಒಬ್ಬರಿಗೆ ಶಾಪವಾಗಿ ಪರಿಣಮಿಸಿದರೆ ಮತ್ತೊಬ್ಬರಿಗೆ ವರವಾಗುತ್ತದೆ. ಅದ್ಯಾಕ ಈ ಬೇಸಿಗೆ ಬರುತ್ತದೆಯೋ ಎಂದು ಅಲವತ್ತುಕೊಳ್ಳುವರ ಮಧ್ಯ ಅದೇ ಬೇಸಿಗೆ ಕೆಲ ರೈತರನ್ನು ಕೈಹಿಡಿಯುತ್ತದೆ ಎನ್ನುವುದ ಅಷ್ಟೆ ಸತ್ಯ.

Advertisement

ಹೌದು, ಆಲಮಟ್ಟಿ ಜಲಾಶಯದಲ್ಲಿ ನೀರು ಕಡಿಮೆಯಾಗಿ ಜಲಾಶಯದ ಹಿನ್ನೀರು ಸರಿಯುತ್ತಿದ್ದಂತೆ ನಿಧಾನವಾಗಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಹಿನ್ನೀರು ಪ್ರದೇಶದಲ್ಲಿ ನೀರು ಇಳಿಕೆಯಾಗುತ್ತಿದ್ದಂತೆ ಮೂಲ ಜಮೀನಿನ ಮಾಲೀಕರು ಸದ್ಯ ಕಸ ಕೀಳುವುದು, ಹರುಗುವುದು ಕೆಲವೆಡೆ ಬಿತ್ತನೆ ಸೇರಿದಂತೆ ನಾನಾ ಕೃಷಿ ಚಟುವಟಿಕೆಗಳನ್ನು ನಡೆಸುವುದು ನಿತ್ಯ ಕಂಡು ಬರುತ್ತಿವೆ.

ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯ ಆ ಪ್ರದೇಶದಲ್ಲಿ ಅನೇಕ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ನಿಡಗುಂದಿ, ದೇವಲಾಪುರ, ಗೋನಾಳ, ಬೇನಾಳ, ಗಣಿ, ಚಿಮ್ಮಲಗಿ, ಸಿದ್ನಾಥ, ಬಳೂತಿ, ಕೊಲ್ಹಾರ ಸೇರಿದಂತೆ ವಿವಿಧ ಕಡೆಯಲ್ಲಿ ಕೃಷಿ ಕೂಲಿ ಕಾರ್ಮಿಕರು ಸದ್ಯ ನಾನಾ ಬೆಳೆಗಳನ್ನು ಬೆಳೆದು ತಮ್ಮ ವರ್ಷದ ಗಂಜಿಯನ್ನು ಪಡೆದು ಖುಷಿ ಪಡುತ್ತಿದ್ದಾರೆ.

ಮಳೆಗಾಲದಲ್ಲಿ ಸಂಪೂರ್ಣ ಭರ್ತಿಯಾಗುವ ಆಲಮಟ್ಟಿ ಜಲಾಶಯದಲ್ಲಿ ಕಣ್ಣು ಹಾಯಿಸದಷ್ಟೂ ನೀರು ಕಂಡು ಬಂದರೆ ಬೇಸಿಗೆ ಆರಂಭವಾಗುತ್ತಿದ್ದಂತೆ ಹಿನ್ನೀರು ಪ್ರದೇಶದಲ್ಲಿ ನೀರು ಬದಲು ಹಚ್ಚ ಹಸುರಿನಿಂದ ಕಂಗೋಳಿಸುವ ಹಿನ್ನೀರು ಪ್ರದೇಶದಲ್ಲೀಗ ಶೇಂಗಾ, ಸೌತೆಕಾಯಿ, ಅಲಸಂದಿ, ಹೆಸರು, ಗೋ, ಮೆಕ್ಕೆಜೋಳ ಸೇರಿದಂತೆ ನಾನಾ ಬೆಳೆಗಳು ಕಂಗೊಳಿಸುತ್ತವೆ. ಹಿನ್ನೀರು ಪ್ರದೇಶ ಇನ್ನಷ್ಟೂ ನಿಧಾನವಾಗಿ ನೀರು ಇಳಿಮುಖವಾಗುತ್ತಿದ್ದು ಮತ್ತಷ್ಟೂ ರೈತರು ಬಿತ್ತನೆಗೆ ಮುಂದಾಗುತ್ತಿದ್ದಾರೆ. ಹಿನ್ನೀರು ಪ್ರದೇಶದ ಭೂಮಿ ಫಲವತ್ತಾಗಿದ್ದರಿಂದ ಬೆಳೆಗೆ ಗೊಬ್ಬರ ಬೇಕಾಗಿಲ್ಲ.

ತೇವಾಂಶದಿಂದ ಕೂಡಿದ್ದರಿಂದ ನೀರುಣಿಸುವ ಚಿಂತೆ ರೈತರಿಗೆ ಬಾಧಿಸದು. ಹೀಗಾಗಿ ಹಿನ್ನೀರು ಪ್ರದೇಶದಲ್ಲಿ ಕೃಷಿ ಕೂಲಿ ಕಾರ್ಮಿಕರು ಬದುಕು ಕಂಡುಕೊಳ್ಳುತ್ತಿದ್ದಾರೆ. ಪ್ರತಿವರ್ಷ ಫೆಬ್ರುವರಿ-ಮಾರ್ಚ್‌ ಸಮಯದಲ್ಲಿ ಹಿನ್ನೀರು ಖಾಲಿಯಾಗಿ ಮತ್ತೇ ಹಿನ್ನೀರು ಬರಲು ಸುಮಾರು ಮೂರ್‍ನಾಲ್ಕು ತಿಂಗಳ ಕಾಲಾವಕಾಶವಿರುತ್ತದೆ ಈ ಸಮಯದಲ್ಲಿ ಇಲ್ಲಿನ ಕೃಷಿ ಕಾರ್ಮಿಕರು ನಾನಾ ಬೆಳೆಗಳನ್ನು ಬೆಳೆದು ಉತ್ತಮ ಫಸಲು ಪಡೆಯುತ್ತಾರೆ. ಪ್ರತಿ ಬಾರಿ ಡಿಸೆಂಬರ್‌, ಜನೆವರಿ ತಿಂಗಳಲ್ಲೇ ನೀರು ಇಳಿಮುಖವಾಗಲು ಆರಂಭವಾಗುತ್ತಿತ್ತು. ಆದರೆ ಈ ಬಾರಿ ಪ್ರವಾಹ ಮತ್ತು ಜಲಾಶಯದ ನೀರು ನಿರ್ವಹಣೆ ಉತ್ತಮವಾಗಿದ್ದರಿಂದ ಹಿನ್ನೀರು ಇಳಿಮುಖವಾಗುವಲ್ಲಿ ತಡವಾಗಿದೆ. ಹೀಗಾಗಿ ತಡವಾಗಿ ಬಿತ್ತನೆ ಮಾಡಲಾಗಿದೆ ಎನ್ನುತ್ತಾರೆ ರೈತರು.

Advertisement

ಜಲಾಶಯ ನಿರ್ಮಾಣಕ್ಕಾಗಿ ಜಮೀನು ಕಳೆದುಕೊಂಡ ರೈತರಿಗೆ ಕೃಷಿ ಕಾರ್ಯದಲ್ಲಿ ತೊಡಗಲು ಜಮೀನು ಇಲ್ಲದಂತಾಗಿತ್ತು. ಆದರೆ ಬೇಸಿಗೆ ಸಂದರ್ಭದಲ್ಲಿ ಜಲಾಶಯದಲ್ಲಿ ನೀರಿನ ಪ್ರಮಾಣದಲ್ಲಿ ಇಳಿಮುಖವಾಗುತ್ತಲೇ ಸಾಕಷ್ಟು ಪ್ರದೇಶ ಖಾಲಿಯಾಗುತ್ತದೆ. ಈ ಸಂದರ್ಭದಲ್ಲಿ ಮೊದಲಿನ ಭೂ ಮಾಲಿಕರಲ್ಲದೇ ಜಮೀನು ಇಲ್ಲದ ಅನೇಕರೂ ಕೂಡ ಅಲ್ಲಲ್ಲಿ ಬೆಳೆ ಬೆಳೆದು ಕೃಷಿ ಕಾರ್ಯದಲ್ಲಿ ತೊಡಗುತ್ತಾರೆ.

ಮಳೆಗಾಲದಲ್ಲಿ ಜಲಾಶಯಕ್ಕೆ ನೀರು ಹರಿದು ಬರುವ ಮೊದಲೇ ಫಸಲು ಬರುವುದರಿಂದ, ದುಡಿಮೆಗೆ ತಕ್ಕಷ್ಟು ಫಲ ಸಿಕ್ಕೆ ಸಿಗುತ್ತದೆ. ಹೀಗಾಗಿ ಕೃಷಿ ಕೂಲಿ ಕಾರ್ಮಿಕರ ಮೊಗದಲ್ಲೂ ಹರ್ಷ ಮೂಡಿದೆ. ಹಿನ್ನೀರು ಪ್ರದೇಶದಲ್ಲೇ ಅನೇಕ ರೈತರು ಬೆಳೆಗಳನ್ನು ಬೆಳೆದಿದ್ದಾರೆ. ಈ ಪ್ರದೇಶವೇ ಅವರಿಗೆ ಜಮೀನಾಗಿ ಪರಿಣಮಿಸಿದೆ. ನೀರು ಕಡಿಮೆಯಾಗುತ್ತಲೇ, ಪ್ರತಿ ಬಾರಿ ಕೃಷಿ ಚಟುವಟಿಕೆ ಬಿರುಸುಗೊಳ್ಳುತ್ತದೆ. ಈಗಾಗಲೇ ಹಿನ್ನೀರು ಪ್ರದೇಶದಲ್ಲಿ ನಾನಾ ಬೆಳೆಗಳು ಉತ್ತಮವಾಗಿ ಬೆಳೆದಿದ್ದು ಇನ್ನೆರಡು ತಿಂಗಳಲ್ಲಿ ಕೃಷಿ ಕೂಲಿ ಕಾರ್ಮಿಕರ ಕೈ ಹಿಡಿಯುವುದರಿಂದ ಬೆಳೆಗಳಲ್ಲಿ ಕಳೆಯನ್ನು ತೆಗೆದು ಕುರಿ, ದನಕರುಗಳಿಂದ ಬೆಳೆ ಹಾಳಾಗದಂತೆ ಸಂರಕ್ಷಿಸುತ್ತಾರೆ.

ಹಿನ್ನೀರಿನಿಂದ ಮುಳುಗಡೆಯಾಗಿದ್ದ ಜಮೀನನಲ್ಲಿ ಸದ್ಯ ನೀರು ಇಳಿಮುಖವಾಗಿದ್ದು ಹಲವಾರು ರೈತರು ಶೇಂಗಾ ಬಿತ್ತನೆ ಮಾಡಿದ್ದಾರೆ. ಹಿನ್ನೀರು ಪ್ರದೇಶದ ನೂರಾರು ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಿ ಬೆಳೆ ಪಡೆದುಕೊಳ್ಳುವ ಬಡ ಸಂತ್ರಸ್ತ ರೈತರಿಗೆ ಬೇಸಿಗೆ ವರದಾನವಾಗುತ್ತದೆ.
ಶರಣಪ್ಪ ಮುರನಾಳ,
ರೈತ, ನಿಡಗುಂದಿ

Advertisement

Udayavani is now on Telegram. Click here to join our channel and stay updated with the latest news.

Next