ಮುಂಬಯಿ: 2008ರ ಮಾಲೇಗಾಂವ್ ಸ್ಫೋಟ ಪ್ರಕರಣದ ಇನ್-ಕೆಮರಾ ವಿಚಾರಣೆಗೆ ಅವಕಾಶ ನೀಡುವಂತೆ ಎನ್‌ಐಎ ಗುರುವಾರ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಇನ್-ಕೆಮರಾ ವಿಚಾರಣೆ ನಡೆದರೆ, ವಿಚಾರಣೆ ವೇಳೆ ಉಪಸ್ಥಿತರಿರಲು ಸಾರ್ವಜನಿಕರು, ಮಾಧ್ಯಮಗಳಿಗೆ ಅವಕಾಶವಿರುವುದಿಲ್ಲ. ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ಕೂಡ ಆರೋಪಿಯಾಗಿರುವ ಈ ಪ್ರಕರಣವನ್ನು ಈ ರೀತಿ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ವಿಶೇಷ ಜಡ್ಜ್ ವಿ.ಎಸ್. ಪಡಾಲ್ಕರ್‌ಗೆ ಎನ್‌ಐಎ ಮನವಿ ಮಾಡಿದೆ. ಈ ನಡುವೆ, ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾಗೆ ಕಿರುಕುಳ ನೀಡಲೆಂದೇ ಆಗಿನ ಕಾಂಗ್ರೆಸ್ ಸರಕಾರ ಪೊಲೀಸ್ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂದು ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಆರೋಪಿಸಿದ್ದಾರೆ. ಎಟಿಎಸ್ ಅಧಿಕಾರಿ ಹೇಮಂತ್ ಕರ್ಕರೆ ಅವರು ಭಯೋತ್ಪಾದಕನ ಗುಂಡಿಗೆ ಬಲಿಯಾದ ಕಾರಣಕ್ಕೆ ಮಾತ್ರವೇ ಅವರು ಹುತಾತ್ಮ ಎಂಬ ಮನ್ನಣೆ ಪಡೆದರು ಎಂದೂ ಹೇಳಿದ್ದಾರೆ.