Advertisement
ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ವೇಳೆಯೇ ಅದನ್ನು ಸಾಗಿಸುತ್ತಿದ್ದ ಶಂಕಿತ ಉಗ್ರ ಶಾರಿಕ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಜನನಿಬಿಡ ಪ್ರದೇಶದಲ್ಲಿ ಬಾಂಬ್ ಅನ್ನು 3 ನಿಮಿಷಗಳ ಟೈಮರ್‌ನೊಂದಿಗೆ ಸ್ಫೋಟಿಸುವುದು ಆತನಿಗೆ ಒಪ್ಪಿಸಲಾದ ಜವಾಬ್ದಾರಿಯಾಗಿತ್ತು. ಇದರಲ್ಲಿ ಆಗಿರುವ ಸಣ್ಣ ಎಡವಟ್ಟಿನಿಂದಾಗಿ ಬಾಂಬ್ ಸಾಗಾಟದ ವೇಳೆಯೇ ಸ್ಫೋಟಗೊಂಡಿತ್ತು.
ಮಂಗಳೂರಿನಲ್ಲಿ ಕುಕ್ಕರ್ ಹಿಡಿದುಕೊಂಡಿದ್ದ ವೇಳೆಯೇ ಅದು ಸ್ಫೋಟಗೊಂಡು ತೀವ್ರ ಗಾಯಗೊಂಡಿದ್ದ ಶಾರಿಕ್ ಹಲವು ದಿನ ಮಂಗಳೂರಿನ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದಿದ್ದು, ಬಳಿಕ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರಸ್ತುತ ಆತ ಚೇತರಿಸಿಕೊಂಡಿದ್ದು ಎನ್‌ಐಎ ಕಸ್ಟಡಿಯಲ್ಲಿದ್ದಾನೆ.
Related Articles
Advertisement
ಹೆಚ್ಚೇನೂ ವಿದ್ಯಾಭ್ಯಾಸ ವಿಲ್ಲದಿದ್ದರೂ ಡಾರ್ಕ್ ವೆಬ್ ಮೂಲಕ ಹೊರಗೆ ಸುಳಿವು ಸಿಗದಂತೆ ವ್ಯವಹರಿಸುತ್ತಿದ್ದ. ಜನನಿಬಿಡ ಪ್ರದೇಶ, ದೇವಾಲಯಗಳಲ್ಲಿ ಬಾಂಬ್ ಇರಿಸುವಂತೆ “ಆಕಾ'(ಒಡೆಯ)ನಿಂದ ಸೂಚನೆ ಬಂದಿತ್ತು, ಮೊಬೈಲ್ ಬಳಕೆ, ಯಾವ ರೀತಿ ಸಿಕ್ಕಿ ಬೀಳದಂತೆ ವ್ಯವಹರಿಸಬೇಕು ಇತ್ಯಾದಿಗಳನ್ನು ಇದೇ “ಆಕಾ’ ತನಗೆ ತರಬೇತಿ ವೇಳೆ ತಿಳಿಸಿದ್ದುದಾಗಿ ಶಾರಿಕ್ ಒಪ್ಪಿಕೊಂಡಿದ್ದಾನೆ.
ಸಿರಿಯಾದತ್ತ ಲಕ್ಷ್ಯ?ಬಾಂಬ್ ಸ್ಫೋಟದ ಬಳಿಕ ಐಸಿಸ್ ಸೇರುವುದಕ್ಕಾಗಿ ಸಿರಿಯಾದತ್ತ ಪಯಣ ಬೆಳೆಸುವುದು ಶಾರಿಕ್‌ನ ಗುರಿಯಾಗಿತ್ತು. ಅದಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಬಾಂಬ್ ಸಿದ್ಧಪಡಿಸಿದ್ದ. ಆರಂಭದಲ್ಲಿ 2020ರಲ್ಲಿ ಗೋಡೆಗಳಲ್ಲಿ ಉಗ್ರ ಸಂಘಟನೆ ಲಷ್ಕರ್ ಪರ ಬರಹ ಬರೆದು ಸಿಕ್ಕಿಬಿದ್ದಿದ್ದ ಶಾರಿಕ್ ಬಳಿಕ ತಾಂತ್ರಿಕ ಕಾರಣಗಳೊಂದಿಗೆ ಬಿಡುಗಡೆಗೊಂಡಿದ್ದ. ಅಲ್ಲಿಂದ ಬಳಿಕ ತನ್ನ ಉಗ್ರ ಜಾಲವನ್ನು ಬಲಪಡಿಸುತ್ತ ಹೋಗಿದ್ದ. ಈತನ ಬ್ರೇನ್‌ವಾಷ್ ಮಾಡಿದವರು ಅರಾಫತ್ ಹಾಗೂ ಅಬ್ದುಲ್ ಮತಿನ್. ಇವರಲ್ಲಿ ಅರಾಫತ್ ಈಗಾಗಲೇ ಎನ್‌ಐಎ ಬಲೆಯಲ್ಲಿ ಬಿದ್ದಿದ್ದರೆ ಮತಿನ್ ಬಾಂಗ್ಲಾದೇಶದಲ್ಲಿ ತಲೆಮರೆಸಿಕೊಂಡಿರುವುದಾಗಿ ಹೇಳಲಾಗುತ್ತಿದೆ.